ಹಂಪಿಯಲ್ಲಿ ಯಾಕೆ ಸ್ವಚ್ಛತೆ ಕಾಪಾಡುತ್ತಿಲ್ಲ? – ಅಧಿಕಾರಿಗಳಿಗೆ ನಿರ್ಮಲಾ ಸೀತಾರಾಮನ್ ಕ್ಲಾಸ್

ಹಂಪಿಯಲ್ಲಿ ಯಾಕೆ ಸ್ವಚ್ಛತೆ ಕಾಪಾಡುತ್ತಿಲ್ಲ? – ಅಧಿಕಾರಿಗಳಿಗೆ ನಿರ್ಮಲಾ ಸೀತಾರಾಮನ್ ಕ್ಲಾಸ್

ಹಂಪಿಗೆ ವಿದೇಶಿ ಪ್ರವಾಸಿಗರು ಬರುವುದು ಕಮ್ಮಿಯಾಗುತ್ತಿರೋ ಬೆನ್ನಲ್ಲೇ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶ ಹೊರ ಹಾಕಿದ್ದಾರೆ. ನಿರ್ಮಲಾ ಸೀತಾರಾಮನ್ ಎರಡು ದಿನಗಳ ವಿಜಯನಗರ ಪ್ರವಾಸವನ್ನು ಮುಕ್ತಾಯಗೊಳಿಸಿದ್ದಾರೆ. ಈ ವೇಳೆ   ಹಂಪಿ ಸೇರಿದಂತೆ ಹಲವು ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿದರು. ಆಗ ಅಲ್ಲಿನ ನಿರ್ವಹಣೆ ಕುರಿತು ಬೇಸರ ಹೊರ ಹಾಕಿದ್ದಾರೆ.  ಹಂಪಿಯ ಐತಿಹಾಸಿಕ ಕೋದಂಡರಾಮ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾಗ, ದೇವಾಲಯಕ್ಕೆ ಹೋಗುವ ದಾರಿಯುದ್ದಕ್ಕೂ ಮಾನವ ಮಲ ಸೇರಿದಂತೆ ಅನೈರ್ಮಲ್ಯ ಪರಿಸ್ಥಿತಿ ಕಂಡು ಬಂದಿದೆ. ಇದ್ರಿಂದ ನಿರ್ಮಲ ಸೀತಾರಾಮನ್‌ಗೆ ಮುಜುಗರವಾಗಿದೆ.

ಇದನ್ನೂ ಓದಿ: ಕೊಹ್ಲಿ ಫ್ಯಾನ್ಸ್‌ಗೆ ಬಿಗ್‌ಶಾಕ್!‌ –  ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ಅನುಮತಿ ಇಲ್ಲ!

ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಸ್ವಚ್ಛತೆ ಮತ್ತು ಒಟ್ಟಾರೆ ನಿರ್ವಹಣೆಯ ಬಗ್ಗೆ ನಿರ್ಮಲಾ ಪ್ರಶ್ನೆ ಮಾಡಿದ್ದು, ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ಪಾರಂಪರಿಕ ಪ್ರದೇಶದಲ್ಲಿ ಲಭ್ಯವಿರುವ ಸಾರ್ವಜನಿಕ ಶೌಚಾಲಯಗಳ ಸಂಖ್ಯೆಯ ಬಗ್ಗೆ ಅಧಿಕಾರಿಗಳನ್ನು ಕೇಳಿದ್ದಾರೆ . ಇಂತಹ ಪರಿಸ್ಥಿತಿ ನನಗೆ ಸಹಿಸಲು ಆಗುತ್ತಿಲ್ಲ. ಇನ್ನೂ ಪ್ರತಿದಿನ ಬರುವ ಸಾವಿರಾರು ಪ್ರವಾಸಿಗರು ಮತ್ತು ಪ್ರವಾಸಿಗರ ಪರಿಸ್ಥಿತಿ ಇನ್ನೂ ಹೇಗಿರುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

ಹಂಪಿ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ, ASI ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಳ್ಳದಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸೀತಾರಾಮನ್ ಅವರ ಭೇಟಿಯು ಭಾರತದ ಪ್ರಮುಖ ಪಾರಂಪರಿಕ ತಾಣಗಳಲ್ಲಿ ಒಂದಾದ ಹಂಪಿಯ ನಿರ್ವಹಣೆ, ನೈರ್ಮಲ್ಯ ಮತ್ತು ಸಂರಕ್ಷಣೆಯ ಬಗ್ಗೆ ಸ್ಥಳೀಯ ನಿವಾಸಿಗಳು ಮತ್ತು ಪಾಲುದಾರರಲ್ಲಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನೂ ಹಣಕಾಸು ಸಚಿವಾಲಯದ 120 ಅಧಿಕಾರಿಗಳ ತಂಡವು ಹಂಪಿಗೆ ಭೇಟಿ ನೀಡಿ ವಿಶ್ವ ಪಾರಂಪರಿಕ ತಾಣ ವೀಕ್ಷಿಸಿದೆ ಎಂದು ಅವರು ಹೇಳಿದ್ದಾರೆ. ಕಾರ್ಪೊರೇಟ್ ವ್ಯವಹಾರಗಳು ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ಹರ್ಷ ಮಲ್ಹೋತ್ರಾ, ಸಂಸದರಾದ ಇ.ತುಕಾರಾಂ, ಶಾಸಕರಾದ ಎಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ್, ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ನಾಗರಾಜು ಮದ್ದೀರಲಾ, ಕೇಂದ್ರ ನೇರ ತೆರಿಗೆ ಮಂಡಳಿಯ ಅಧ್ಯಕ್ಷ ರವಿ ಅಗರ್ವಾಲ್, ಹಣಕಾಸು ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅನುರಾಧ ಠಾಕೂರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Kishor KV