ಮಣಿಪುರದಲ್ಲಿ ಯುಎಫ್‌ಒ ಹಾರಾಟ? – ವಾಯು ಪಡೆಯ ರಫೇಲ್ ಯುದ್ಧ ವಿಮಾನದಿಂದ ಹುಡುಕಾಟ!

ಮಣಿಪುರದಲ್ಲಿ ಯುಎಫ್‌ಒ ಹಾರಾಟ? – ವಾಯು ಪಡೆಯ ರಫೇಲ್ ಯುದ್ಧ ವಿಮಾನದಿಂದ ಹುಡುಕಾಟ!

ಹಾರುವ ತಟ್ಟೆಯ ಕುರಿತು ಕುತೂಹಲ ಇಂದು-ನಿನ್ನೆಯದಲ್ಲ.  ಏಲಿಯನ್​ನಂತೆ ಹಾರುವ ತಟ್ಟೆಗಳ ಕುರಿತು ಎಷ್ಟೋ ದಶಕಗಳಿಂದ ಚರ್ಚೆ ನಡೆಯುತ್ತಲೇ ಇದೆ. ಆಕಾಶದಲ್ಲಿ ಹಲವರು ತಮಗೆ ಚಿತ್ರ-ವಿಚಿತ್ರ ದೃಶ್ಯಗಳು ಕಂಡಿರುವ ಬಗ್ಗೆ ಹೇಳಿದರೆ, ಕೆಲವರು ಇವೆರಡನ್ನೂ ತಾವು ಕಂಡಿರುವುದಾಗಿ ಹೇಳಿದರೆ, ಇವುಗಳ ಇರುವಿಕೆ ಸುಳ್ಳು ಎನ್ನುತ್ತಾರೆ ಇನ್ನು ಕೆಲವರು. ಆದರೆ ಈ ಫೋಟೋಗಳಿಗೆ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ನೀಡುವವರು ಇದ್ದಾರೆ. ಆದರೂ ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ಕಾಣಿಸಿಕೊಂಡಿವೆ. ಆದರೆ ಈಗ ಭಾರತದಲ್ಲೂ ಇಂಥದ್ದೊಂದು ಮಾತು ಕೇಳಿಬಂದಿದೆ. ಮಣಿಪುರ ರಾಜಧಾನಿ ಇಂಫಾಲ್​ನ ವಿಮಾನ ನಿಲ್ದಾಣದ ಬಳಿ ಭಾನುವಾರ ಯುಎಫ್​ಒ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಇಂಫಾಲ್​ನ ವಿಮಾನ ನಿಲ್ದಾಣದಲ್ಲಿ ಭಾನುವಾರ ಯುಎಫ್‌ಒ ಪತ್ತೆಯಾಗಿದ್ದು, ಈ ಬೆನಲ್ಲೇ ಎರಡು ರಫೇಲ್​ ಜೆಟ್​ಗಳನ್ನು ಹಸಿಮಾರಾ ವಾಯುನೆಲೆಯಿಂದ ಹಾರಿಸಲಾಗಿದೆ. ಆದರೆ ಶೋಧ ಕಾರ್ಯದ ವೇಳೆ ಯಾವುದೇ ಯುಎಫ್‌ ಒ ಪತ್ತೆಯಾಗಿಲ್ಲ ಎಂದು ಸೇನೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಶ್ರೀಲಂಕಾದ ಅಶೋಕ ವನದಲ್ಲಿ ಸೀತಾ ಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಯ ರಾಮ ಮಂದಿರಕ್ಕೆ ಆಮದು!

ಯುಎಫ್​ಒ ಹುಡುಕಿ ಹೊರಟ ಮೊದಲ ವಿಮಾನವು ತನ್ನ ನೆಲೆಗೆ ಮರಳಿತು ಮತ್ತು ಎರಡನೇ ಬಾರಿ ಪರಿಶೀಲಿಸುವ ಸಲುವಾಗಿ ಇನ್ನೊಂದು ವಿಮಾನವನ್ನು ಯುಎಫ್​ಒ ಕಾಣಿಸಿಕೊಂಡ ಪ್ರದೇಶದ ಕಡೆಗೆ ಕಳುಹಿಸಲಾಯಿತು. ಆದರೆ, ಹತ್ತಿರದ ಪ್ರದೇಶಗಳಲ್ಲಿ ಏನನ್ನೂ ಗುರುತಿಸಲಾಗಲಿಲ್ಲ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ, ಭಾರತೀಯ ವಾಯುಪಡೆಯ ಪೂರ್ವ ಕಮಾಂಡ್, ತನ್ನ ವಾಯು ರಕ್ಷಣಾ ಪ್ರತಿಕ್ರಿಯೆ ಕಾರ್ಯವಿಧಾನವನ್ನು ಇದೀಗ ಸಕ್ರಿಯಗೊಳಿಸಿರುವುದಾಗಿ ಹೇಳಿದೆ.

ಈ ಬಗ್ಗೆ ಪೂರ್ವ ಕಮಾಂಡ್​ ತನ್ನ ಎಕ್ಸ್​ ಖಾತೆಯಲ್ಲಿ ಪೊಸ್ಟ್​ ಮಾಡಿದ್ದು, ಇಂಫಾಲ್​​ ವಿಮಾನ ನಿಲ್ದಾಣದ ಬಳಿ ಕಂಡುಬಂದು ದೃಶ್ಯ ರೂಪದ ಬಳಿಕ ಭಾರತೀಯ ವಾಯು ರಕ್ಷಣಾ ಪಡೆ ತನ್ನ ವಾಯು ರಕ್ಷಣಾ ಪ್ರತಿಕ್ರಿಯೆ ಕಾರ್ಯವಿಧಾನ ಆ್ಯಕ್ಟಿವೇಟ್​ ಮಾಡಿದೆ. ಪರಿಶೀಲನೆ ನಡೆಸಿದ ಬಳಿಕ ಯಾವುದೇ ಸಾಧನ ಕಂಡುಬಂದಿಲ್ಲ ಎಂದು ಹೇಳಿದೆ. ಯುಎಫ್​ಒ ಬರೀ ಕಣ್ಣುಗಳಿಗೆ ಕಾಣಿಸಿಕೊಂಡಿತು. ವಿಮಾನ ನಿಲ್ದಾಣದ ಪಶ್ಚಿಮಕ್ಕೆ ಸಂಜೆ 4 ಗಂಟೆಯವರೆಗೂ ಚಲಿಸುತ್ತಿತ್ತು ಎಂದು ಸಿಐಎಸ್​ಎಫ್​ ತಿಳಿಸಿದೆ.

ಯುಎಫ್​ಒ ಕಾಣಿಸಿಕೊಂಡ ಸುದ್ದಿ ಹರಡುತ್ತಿದ್ದಂತೆ ಇಂಫಾಲ್​ನ ಬಿರ್​ ಟಿಕೇಂದ್ರಜಿತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಕಾಲ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ವಿಮಾನ ನಿಲ್ದಾಣ ಮೇಲೆಯೇ ಕಾಣಿಸಿಕೊಂಡಿದ್ದರಿಂದ ವಿಮಾನ ಹಾರಾಟಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಯಿತು.

ಕೋಲ್ಕತ್ತಾದಿಂದ ಆಗಮಿಸುತ್ತಿದ್ದ ಇಂಡಿಗೋ ವಿಮಾನ ಒಳಗೊಂಡಂತೆ ಕೆಲ ವಿಮಾನಗಳ ಮಾರ್ಗವನ್ನು ಬದಲಿಸಲಾಯಿತು. ಇಂಡಿಗೂ ವಿಮಾನವನ್ನು 25 ನಿಮಿಷಗಳ ನಂತರ ಗುವಾಹಟಿಗೆ ತಿರುಗಿಸಲಾಯಿತು. ಸುಮಾರು ಮೂರು ಗಂಟೆಗಳ ನಂತರ ಕ್ಲಿಯರೆನ್ಸ್ ಪಡೆದ ಬಳಿಕ ಇಂಫಾಲ್ ವಿಮಾನ ನಿಲ್ದಾಣದಿಂದ ವಿಮಾನಗಳು ಹೊರಟವು ಎಂದು ವರದಿಯಾಗಿದೆ.

Shwetha M