ಯುದ್ಧ ನಿಲ್ಲಿಸ್ತಾರಾ ಮೋದಿ?- ಉಕ್ರೇನ್ ಅಧ್ಯಕ್ಷರಿಗೆ ಹೇಳಿದ್ದೇನು?
ಪ್ಯಾಲೆಸ್ತೀನ್ ಬಗ್ಗೆ ಬೇಸರವೇಕೆ?

ಯುದ್ಧ ನಿಲ್ಲಿಸ್ತಾರಾ ಮೋದಿ?- ಉಕ್ರೇನ್ ಅಧ್ಯಕ್ಷರಿಗೆ ಹೇಳಿದ್ದೇನು?ಪ್ಯಾಲೆಸ್ತೀನ್ ಬಗ್ಗೆ ಬೇಸರವೇಕೆ?

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ನಡೆ ಜಗತ್ತಿನಲ್ಲಿ ಮಹಾಯುದ್ಧದ ಭೀತಿ ಉಂಟುಮಾಡಿದೆ. ಈ ಎರಡು ರಾಷ್ಟ್ರದಲ್ಲಿ ನಡೆಯುತ್ತಿರೋ ಯುದ್ಧದಿಂದ ರಕ್ತಪಾತವೇ ನಡೆಯುತ್ತಿದೆ. ಸಾಕಷ್ಟು ಸಾವು ನೋವಿನ ಜೊತೆ ಅಪಾರ ಪ್ರಾಮಾಣದ ಆಸ್ತಿಪಾಸ್ತಿ ಹಾನಿಯಾಗುತ್ತಿದೆ. ಈಗಾಗಲೇ ಈ ಎರಡೂ ದೇಶಗಳ ನಡುವಿನ ಸಂಘರ್ಷವನ್ನು ಶಮನ ಮಾಡಲು ಹಲವು ದೇಶಗಳು ಪ್ರಯತ್ನಿಸಿದ್ದರೂ ವಿಫಲವಾಗಿವೆ. ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಬ್ರೇಕ್ ಹಾಕೋಕೆ ಕಸರತ್ತು ನಡೆಸುತ್ತಿದ್ದಾರೆ..

ಇದನ್ನೂ ಓದಿ:ಏನಿದು ಮಹಿಷ ದಸರಾ ವಿವಾದ..? – ಮಹಿಷ ದಸರಾ ಇತಿಹಾಸವೇನು..?

ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸುವ ಸಂಬಂಧ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಸೂಕ್ತ ವ್ಯಕ್ತಿ’ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ ಮೋದಿ ಅವರು ಈ ವಿಷಯದಲ್ಲಿ ಪುನಃ ಶಾಂತಿ ಮಂತ್ರ ಪಠಿಸಿದ್ದಾರೆ. ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್ ಭಾರತವನ್ನು ಮಧ್ಯವರ್ತಿಯಾಗಿ ಎದುರು ನೋಡುವುದಾಗಿ ಉಕ್ರೇನ್ ಕೂಡ ಹೇಳಿಕೊಂಡಿದೆ. ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ ಸೂತ್ರದಿಂದ ಈ ಸಂಘರ್ಷ ಅಂತ್ಯವಾಗಲಿದೆಯೇ ಎಂಬ ನಿರೀಕ್ಷೆ ಇದೀಗ ಹೆಚ್ಚಾಗಿದೆ.

ವಿಶ್ವಸಂಸ್ಥೆಯ ಶೃಂಗಸಭೆ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ನಲ್ಲಿ ಉಕ್ರೇನ್ ಅಧ್ಯಕ್ಷರನ್ನ ಭೇಟಿಯಾಗಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಇದು ಮೋದಿ-ಝಲೆನ್ಸ್ಕಿ ನಡುವಿನ 3ನೇ ಭೇಟಿಯಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಕೂಡ ಉಪಸ್ಥಿತರಿದ್ದರು.. ಇದೇ ವೇಳೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ…ಇನ್ನು ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಆದಷ್ಟು ಬೇಗನೇ ಇತ್ಯರ್ಥಗೊಳಿ ಶಾಂತಿ ನೆಲೆಸಲು ಮತ್ತು ಸ್ಥಿರತೆ ಕಾಪಾಡಲು ಮಾಡುತ್ತಿರುವ ಭಾರತದ ಪ್ರಯತ್ನಗಳನ್ನು ಝಲೆನ್ಸ್ಕಿ ಶ್ಲಾಘಿಸಿದ್ದಾರೆ.

ಝೆಲೆನ್ಸ್‌ಕಿ ಜೊತೆಗಿನ ಮಾತುಕತೆಯ ಬಗ್ಗೆ ಎಕ್ಸ್‌ ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ನ್ಯೂಯಾರ್ಕ್‌ನಲ್ಲಿ ಉಕ್ರೇನ್ ಅಧ್ಯಕ್ಷ ರನ್ನು ಭೇಟಿಯಾಗಿದ್ದೇನೆ. ಉಭಯ ದೇಶಗಳ ನಡುವಣ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಳೆದ ತಿಂಗಳ ಉಕ್ರೇನ್ ಭೇಟಿಯ ವೇಳೆ ನಡೆದ ಮಾತುಕತೆಯನ್ನು ಫಲಪ್ರದವಾಗಿ ಜಾರಿಗೊಳಿಸಲು ಬದ್ಧರಾಗಿದ್ದೇವೆ. ಉಕ್ರೇನ್ನಲ್ಲಿ ಸಂಘರ್ಷಕ್ಕೆ ಆದಷ್ಟು ಬೇಗನೇ ಪರಿಹಾರ ಕಂಡುಕೊಳ್ಳುವುದು ಮತ್ತು ಶಾಂತಿ ಹಾಗೂ ಸ್ಥಿರತೆಯ ಮರುಸ್ಥಾಪನೆಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ್ದೇನೆ ಎಂದಿದ್ದಾರೆ..

ಮತ್ತೊಂದೆಡೆ ಎಕ್ಸ್ನಲ್ಲಿ ಬರೆದುಕೊಂಡಿರುವ ಝಲೆನ್ಸ್ಕಿ, ಭಾರತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ವರ್ಷ 3ನೇ ಬಾರಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದೇನೆ. ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಸಕ್ರಿಯವಾಗಿ ವೃದ್ಧಿಗೊಳಿಸಲಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಗಟ್ಟಿಗೊಳಿಸಲು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ..

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಸಮರಕ್ಕೆ ಬ್ರೇಕ್ ಹಾಕಿ

ಇನ್ನು ಈಗಾಗಲೇ ವರ್ಷ ಪೂರೈಸಿರುವ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಸಮರಕ್ಕೆ ಕೂಡಲೇ ಕದನ ವಿರಾಮ ಘೋಷಿಸಬೇಕು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಮತ್ತು ಉಭಯ ದೇಶಗಳು ಮಾತುಕತೆ ಮತ್ತು ರಾಜತಾಂತ್ರಿಕತೆ ಹಾದಿಗೆ ಮರಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ. ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ, ಗಾಜಾ ಪಟ್ಟಿ ಪ್ರದೇಶದಲ್ಲಿನ ಮಾನವೀಯ ಬಿಕ್ಕಟ್ಟು ಮತ್ತು ವಲಯದಲ್ಲಿನ ಭದ್ರತಾ ಪರಿಸ್ಥಿತಿ ಕುಸಿಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಜೊತೆಗೆ ಪ್ಯಾಲೆಸ್ತೀನ್‌ ಜನರಿಗೆ ಭಾರತದ ಅಚಲ ಬೆಂಬಲ ವ್ಯಕ್ತಪಡಿಸಿದರಲ್ಲದೆ, ಮಾನವೀಯ ನೆರವು ಮುಂದುವರೆಸುವ ಭರವಸೆ ನೀಡಿದರು.

ಜೊತೆಗೆ, ಇಸ್ರೇಲ್‌- ಪ್ಯಾಲೆಸ್ತೀನ್‌ ಬಿಕ್ಕಟ್ಟು ಇತ್ಯರ್ಥ ಪಡಿಸಿ ಶಾಂತಿ ಪುನರ್‌ಸ್ಥಾಪನೆಯಲ್ಲಿ ಎರಡು- ದೇಶ ರಚನೆಗಳ ತತ್ವವನ್ನು ಭಾರತ ಈಗಲೂ ಬೆಂಬಲಿಸುತ್ತದೆ. ಜೊತೆಗೆ ಕೂಡಲೇ ಕದನ ವಿರಾಮಕ್ಕೆ ಆಗ್ರಹಿಸುತ್ತದೆ. ಸಂಘರ್ಷದ ವೇಳೆ ಒತ್ತೆಯಾಳಾಗಿರುವವರನ್ನು ಕೂಡಲೇ ಬಿಡುಗಡೆ ಮಾಡಬೇಕು, ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಕ್ಕೆ ಮರಳಬೇಕು ಎಂದು ಒತ್ತಾಯಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ನರೇಂದ್ರ ಮೋದಿಯವರು ರಷ್ಯಾ ಹಾಗೂ ಉಕ್ರೇನ್ ಮತ್ತು ಇಸ್ರೇಲ್‌- ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರೋ ಯುದ್ಧಕ್ಕೆ ಬ್ರೇಕ್ ಹಾಕೋಕೆ ಎಲ್ಲಾ ತರದ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಯುದ್ಧ ನಡೆಯುತ್ತಿರೋ ದೇಶಗಳ ನಡುವೆ ಶಾಂತಿಯುತವಾಗಿ ಮಾತುಕತೆ ನಡೆಸೋಕೆ ಮುಂದಾಗಿದ್ದಾರೆ.. ಹೀಗೆ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಎರಡು ಯುದ್ಧಗಳನ್ನು ನಿಲ್ಲಿಸುವ ವಿಚಾರದಲ್ಲಿ ಭಾರತದ ನಿಲುವನ್ನು ಸ್ಪಷ್ಟವಾಗಿ ಮನದಟ್ಟುಮಾಡಿಕೊಟ್ಟಿದ್ದಾರೆ.. ಭಾರತ ಮೊದಲಿನಿಂದಲೂ ಯಾವುದೇ ರಾಷ್ಟ್ರದ ಪರವಾಗಿ ನಿಲ್ಲದೆ ವಿಶ್ವಶಾಂತಿಯ ವಿಚಾರದಲ್ಲಿ ದೃಢ ನಿಲುವನ್ನು ಅನುಸರಿಸುತ್ತಾ ಬಂದಿದೆ.. ಅದೇ ಪರಂಪರೆಯಲ್ಲಿ ಪ್ರಧಾನಿ ಮೋದಿ, ಈಗ ವಿಶ್ವಕ್ಕೆ ಆಪತ್ತು ತರುತ್ತಿರುವ ಯುದ್ಧಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಪ್ರಯತ್ನಕ್ಕೆ ಕೈಹಾಕಿದ್ದಾರೆ.. ಇದರಲ್ಲಿ ಮೋದಿ ಯಶಸ್ವಿಯಾದರೆ, ಅದು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ವಿಶ್ವಮಟ್ಟದಲ್ಲಿ ದೊಡ್ಡ ಮಾನ್ಯತೆ ಸಿಗಲಿದೆ.. ಜೊತೆಗೆ ಭಾರತದ ಕೀರ್ತಿ ಪತಾಕೆ ಮತ್ತಷ್ಟು ಎತ್ತರದಲ್ಲಿ ಹಾರಲಿದೆ..

Kishor KV