ಮಧ್ಯಪ್ರದೇಶದಲ್ಲಿ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಬಾಲಕ ಸಾವು!

ಮಧ್ಯಪ್ರದೇಶದಲ್ಲಿ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಬಾಲಕ ಸಾವು!

ಮಧ್ಯಪ್ರದೇಶದ ಉಜ್ಜಯಿನಿ  ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಬಾಲಕ ಮೃತಪಟ್ಟ  ದುರ್ಘಟನೆ ನಡೆದಿದೆ. ಸುದಿರ್ಘ ಕಾರ್ಯಾಚರಣೆಯ ನಂತರವೂ ದುರಾದೃಷ್ಟವಶಾತ್ ಮಗು ಇಹಲೋಕ ತ್ಯಜಿಸಿದ್ದು, ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಈ ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಂತಾಪ ಸೂಚಿಸಿ, ಮೃತ ಬಾಲಕನ ಕುಟುಂಬಕ್ಕೆ 4 ಲಕ್ಷ ಪರಿಹಾರ ನೆರವನ್ನು ಘೋಷಿಸಿದ್ದಾರೆ.

ಗುರುವಾರ ಸಂಜೆ ಸುಮಾರು 7ರಿಂದ 7:30ರ ನಡುವೆ ಬದ್ನಗರ ತಾಲೂಕಿನ ಝಲಾರಿಯಾ ಗ್ರಾಮದಲ್ಲಿ ಭಗೀರಥ ಎಂಬ ಬಾಲಕ ಕೊಳವೆ ಬಾವಿಗೆ ಜಾರಿ ಬಿದ್ದಿದ್ದ. ಉಜ್ಜಯಿನಿ ನಗರದಿಂದ ಸುಮಾರು 75 ಕಿ.ಮೀ ದೂರದಲ್ಲಿ ಈ ಗ್ರಾಮವಿದ್ದು, ಘಟನೆ ಮಾಹಿತಿ ಬಂದ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆ ಶುರು ಮಾಡಲಾಗಿತ್ತು. ಮಾಹಿತಿ ದೊರಕುತ್ತಿದ್ದಂತೆ ಜಿಲ್ಲಾಡಳಿತ, ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ  ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ  ತಂಡಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿತ್ತು. ಬಾಲಕನು ಸುಮಾರು 60ರಿಂದ 65 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ವೈಭವ್‌ ಆಟಕ್ಕೆ ವಿರಾಟ್ ಮೆಚ್ಚುಗೆ – ಸೂರ್ಯವಂಶಿಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಕಿಂಗ್‌ ಕೊಹ್ಲಿ!

ರಕ್ಷಣಾ ಕಾರ್ಯಾಚರಣೆ ವೇಳೆ ಕಲ್ಲುಗಳಿಂದ ಕೂಡಿದ ಭೂಭಾಗ ಮತ್ತು ದೊಡ್ಡ ಬಂಡೆಗಳು ತೀವ್ರ ಅಡ್ಡಿಯಾಗಿದ್ದು, ತೋಡುವ ಕಾರ್ಯ ನಿಧಾನಗತಿಯಲ್ಲಿ ಸಾಗಿತು. 40 ಅಡಿ ತನಕ ತೋಡಿದ ನಂತರ ಕಲ್ಲಿನ ಪದರಗಳು ಎದುರಾದ ಕಾರಣ, ಭೋಪಾಲ್ ಮತ್ತು ಇಂದೋರ್ ನಗರಗಳಿಂದ ವಿಶೇಷ ಡ್ರಿಲ್ಲಿಂಗ್ ಯಂತ್ರಗಳನ್ನು ತರಿಸಲಾಯಿತು. ಪೋಕ್ಲೈನ್ ಮತ್ತು JCB ಸೇರಿದಂತೆ ಹಲವಾರು ಯಂತ್ರಗಳನ್ನು ಬಳಸಲಾಗಿತ್ತು. ಬಾಲಕನ ಸ್ಥಿತಿಯನ್ನು ತಿಳಿಯಲು ಬೋರ್‌ವೆಲ್ ಒಳಗೆ ಕ್ಯಾಮೆರಾ ಹಾಕಲಾಗಿತ್ತು ಮತ್ತು ನಿರಂತರವಾಗಿ ಆಮ್ಲಜನಕವನ್ನು ಪೂರೈಸಲಾಗುತ್ತಿತ್ತು. ಜೊತೆಗೆ “ರೆಸ್ಕ್ಯೂ ರಿಂಗ್” ಬಳಸಿ ಮೇಲಕ್ಕೆಳೆದು ತರಲು ಪ್ರಯತ್ನಿಸಲಾಯಿತು. ಆದರೂ ಸುಮಾರು 23 ಗಂಟೆಗಳ ನಿರಂತರ ಪ್ರಯತ್ನದ ಬಳಿಕ ಬಾಲಕನನ್ನು ಹೊರತೆಗೆದಾಗ ಅವನು ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಯಾವುದೇ ಪ್ರತಿಕ್ರಿಯೆ ಇರಲಿಲ್ಲ.

Kishor KV