ಯುಐನ ಆ ಸೀನ್ ಗೆ ಕತ್ತರಿ? – ಪ್ರಚಾರ ಇಲ್ಲದೇ ಉಪ್ಪಿ ಸಿನಿಮಾ ಗೆಲ್ಲುತ್ತಾ?
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಯುಐ ತೆರೆಗೆ ಬರಲು ಕೌಂಟ್ ಡೌನ್ ಶುರುವಾಗಿದೆ.. ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಈಗ ಯುಐ ಸೆನ್ಸಾರ್ ಮುಗಿಸಿದೆ.. ಸಿನಿಮಾ ಬಿಡುಗಡೆಗೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ.. ಆದ್ರೂ ಅದ್ಯಾಕೋ ಉಪ್ಪಿ ಸಿನಿಮಾದ ಪೂರ್ಣ ಪ್ರಮಾಣದ ಪ್ರಚಾರ ಶುರುಮಾಡಿಲ್ಲ.. ಇತ್ತ ಸಿನಿಮಾದ ಬಗ್ಗೆ ಕೂಡ ಒಂಚೂರು ಗುಟ್ಟು ಬಿಟ್ಟು ಕೊಡ್ತಾ ಇಲ್ಲ.. ಯುಐ ಚಿತ್ರದ ಟ್ರೋಲ್ ಸಾಂಗ್ ಹಾಗೇ ಕೆಲ ಸೀನ್ಗಳಿಗೂ ಕತ್ತರಿ ಬಿದ್ದಿದೆ ಅಂತಾ ಹೇಳಲಾಗ್ತಿದೆ. ಹಾಗಾದ್ರೆ ಪ್ರಚಾರವಿಲ್ಲದೆಯೂ ಯುಐ ಸಕ್ಸಸ್ ಕಾಣುತ್ತಾ? ಸಿನಿಮಾ ಸೀಕ್ರೆಟ್ ಬಿಟ್ಟುಕೊಟ್ಟಿಲ್ಲ ಯಾಕೆ ಉಪ್ಪಿ? ಸಿನಿಮಾದ ಯಾವ್ಯಾವ ಸೀನ್ ಗೆ ಕತ್ತರಿ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ದೊಡ್ಮನೆಯಲ್ಲಿ ಹಳೇ ಸೇಡಿನ ಜಿದ್ದಾಜಿದ್ದಿ – ಗೌತಮಿಯನ್ನು ಸ್ವಿಮ್ಮಿಂಗ್ ಪೂಲ್ಗೆ ತಳ್ಳಿದ ಮೋಕ್ಷಿತಾ..!
ವಿಭಿನ್ನ ಆಲೋಚನೆಗಳಿಂದ ಸಾಂಡಲ್ ವುಡ್ ನಲ್ಲಿ ಸಿನಿ ಪ್ರೇಮಿಗಳ ಗಮನ ಸೆಳೆಯುತ್ತಿರೋದು ಅಂದ್ರೆ ಅದು ಉಪೇಂದ್ರ. ರಿಯಲ್ ಸ್ಟಾರ್ ಸಿನಿಮಾಗಳೇ ಹಾಗೆ. ವಿಭಿನ್ನ, ವಿಚಿತ್ರ ಆಲೋಚನೆಗಳನ್ನು ಉಪ್ಪಿ ತೆರೆಮೇಲೆ ತರುತ್ತಾರೆ. ಆದರೆ ಅದು ಅಷ್ಟು ಸುಲಭಕ್ಕೆ ಅರ್ಥವಾಗುವಂತದಲ್ಲ. ಬಹಳ ವರ್ಷಗಳ ಬಳಿಕ ಮತ್ತೆ ಆಕ್ಷನ್ ಕಟ್ ಹೇಳಿದ್ದಾರೆ ಅಂದಮೇಲೆ ಕೇಳ್ಬೇಕಾ? ಸಹಜವಾಗಿಯೇ ಸಿನಿಮಾ ಕುರಿತು ಬೆಟ್ಟದಷ್ಟು ನಿರೀಕ್ಷೆ ಇದ್ದೇ ಇರುತ್ತೆ. ಹಿಂದೆ ನಾನು ಅಂತ ಉಪೇಂದ್ರ ಸಿನಿಮಾದಲ್ಲಿ ಕ್ಯಾರೆಕ್ಟರ್ ಕ್ರಿಯೇಟ್ ಮಾಡಿ ಸಂಚಲನ ಮೂಡಿಸಿದ್ದರು. ನಂತರ ಉಪ್ಪಿ-2 ಸಿನಿಮಾದಲ್ಲಿ ನೀನು ಎಂಬ ಪಾತ್ರ ಮಾಡಿದ್ದರು.. ಈಗ ಯುಐನಲ್ಲಿ ನೀನು ಮತ್ತು ನಾನು ಜೊತೆಯಾಗುವ ನಿರೀಕ್ಷೆ ದೊಡ್ಡದಿದೆ. ಈಗಾಗಲೇ ಯುಐ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಶುರುವಾಗಿದೆ. ಸಿನಿರಸಿಕರು ಟಿಕೆಟ್ ಕಾಯ್ದಿರಿಸಿಕೊಂಡು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾಯುತ್ತಿದ್ದಾರೆ. ರಿಯಲ್ ಸ್ಟಾರ್ ಅಸಲಿ ಕ್ರೇಜ್ ಏನು ಎನ್ನುವುದು ಮತ್ತೆ ಸಾಬೀತಾಗುವ ಸಮಯ ಬಂದಿದೆ.
ಟೈಟಲ್ನಿಂದಲೇ ಸಿನಿಮಾ ಚರ್ಚೆ ಹುಟ್ಟು ಹಾಕಿದೆ. ಇನ್ನು ಕಲ್ಕಿ ರೀತಿ ಉಪ್ಪಿ ಕೊಂಬಿನ ಕುದುರೆ ಏರಿ ಬರುವಂತಹ ಪೋಸ್ಟರ್ಗಳು ಎಲ್ಲರ ಹುಬ್ಬೇರಿಸಿದೆ. ಇದು ಸೈಕಲಾಜಿಕಲ್ ಕಲ್ಕಿ ಕಥೆ ಎಂದು ರಿಯಲ್ ಸ್ಟಾರ್ ಹೇಳಿದ್ದಾರೆ. ಇನ್ನು ಚಿತ್ರ ಸೆನ್ಸಾರ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಸಣ್ಣ ಪುಟ್ಟ ಬದಲಾವಣೆ ಹೇಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಕೊಡಲಾಗಿದೆ.
IMDBಯ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ‘ಯುಐ’ ಸಿನಿಮಾ ಜಾಗಮಾಡಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಚಿತ್ರದಲ್ಲಿ ಹುಡುಗಿಯರ ಲಿಪ್ಲಾಕ್ ಸನ್ನಿವೇಶ ಇಂಟೆನ್ಸಿಟಿ ಕಮ್ಮಿ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ. ಇನ್ನು ಧೂಮಪಾನ ಆರೋಗ್ಯಕ್ಕೆ ಹಾನಿಕರ ಸೂಚನೆಯನ್ನು ಸನ್ನಿವೇಶವೊಂದರಲ್ಲಿ ಹಾಕಲು ಹೇಳಿದ್ದಾರೆ. ಇನ್ನುಳಿದಂತೆ ಸಣ್ಣ ಪುಟ್ಟ ಬದಲಾವಣೆಗೆ ಸೂಚಿಸಿ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ನೀಡಿದೆ. ಇದೀಗ ‘ಯುಐ’ ಚಿತ್ರಕ್ಕೆ ಸೆನ್ಸಾರ್ ಒಪ್ಪಿಗೆ ಸಿಕ್ಕ ಬೆನ್ನಲ್ಲೇ ಸ್ಟೋರಿಲೈನ್ ಏನು? ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.
ಉಪೇಂದ್ರ ತಮ್ಮ ಸಿನಿಮಾಗಳ ಕಥೆ ವಿಚಾರದಲ್ಲಿ ಬಹಳ ಕೇರ್ ತೆಗೆದುಕೊಳ್ಳುತ್ತಾರೆ, ಮಾಮೂಲಿ ಕಮರ್ಷಿಯಲ್ ಸಿನಿಮಾಗಳನ್ನು ಮಾಡಲ್ಲ. ಬಹಳ ವಿಭಿನ್ನ ಆಲೋಚನೆಯ ಕಥೆಯನ್ನು ತೆರೆಗೆ ತರುತ್ತಾರೆ. ಅದನ್ನು ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರ ಮುಂದಿಡುತ್ತಾರೆ. ಜೊತೆಗೆ ಒಂದು ಸಂದೇಶವೂ ಇರಲಿದೆ. ಒಂದು ಕಾಲ್ಪನಿಕ ಪ್ರಪಂಚ. ಆ ನಗರದಲ್ಲಿ ಒಬ್ಬ ರಾಜ ಹಾಗೂ ಒಬ್ಬ ಅಸಾಮಾನ್ಯ ವ್ಯಕ್ತಿಯ ನಡುವಿನ ಮಾನಸಿಕ ಸಂಘರ್ಷದ ಕಥೆ. ಆ ವ್ಯಕ್ತಿ ತನ್ನ ಕುತಂತ್ರ ಹಾಗೂ ಚಾಕಚಕ್ಯತೆಯಿಂದೆ ಹೇಗೆ ಆ ಇಡೀ ಪಟ್ಟಣದ ಮೇಲೆ ಹಿಡಿತ ಸಾಧಿಸುತ್ತಾನೆ. ಬಳಿಕ ಡಿಕ್ಟೇಟರ್ ರೀತಿ ಹೇಗೆ ಅಧಿಕಾರ ಚಲಾಯಿಸುತ್ತಾನೆ ಎನ್ನುವುದು ‘ಯುಐ’ ಚಿತ್ರದ ಒನ್ಲೈನ್ ಸ್ಟೋರಿ ಎನ್ನಲಾಗ್ತಿದೆ. ಸದ್ಯ ಬಂದಿರುವ ವಾರ್ನರ್ ನಲ್ಲಿ ಹೆಚ್ಚಿನ ಸುಳಿವು ಸಿಕ್ಕಲ್ಲ. ಚಿತ್ರದ ವಾರ್ನರ್ ಟೀಸರ್ ನೋಡಿದಾಗ ಇದು 2040ರಲ್ಲಿ ನಡೆಯುವ ಕಥೆ ಎನ್ನುವಂತೆ ಬಿಂಬಿಸಲಾಗಿದೆ. ಆದರೆ ಇಡೀ ಸಿನಿಮಾದ ಕಥೆ ಆ ಕಾಲಘಟ್ಟದಲ್ಲೇ ನಡೆಯುವಂತೆ ಇರುತ್ತಾ? ಎನ್ನುವುದು ಗೊತ್ತಿಲ್ಲ.
ಇನ್ನು ಚಿತ್ರದ ಟ್ರೋಲ್ ಸಾಂಗ್ ಬಹಳ ಸದ್ದು ಮಾಡಿದ್ದು ಗೊತ್ತೇಯಿದೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಟ್ರೋಲ್ ಆಗಿದ್ದ ವಿಚಾರಗಳನ್ನೆಲ್ಲಾ ಈ ಹಾಡಿನಲ್ಲಿ ಬಿಚ್ಚಿಡಲಾಗಿತ್ತು. ಆದರೆ ಈ ಸಾಂಗ್ ಚಿತ್ರದಲ್ಲಿ ಇರುತ್ತಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಈ ಸಾಂಗ್ಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ ಎಂದು ಹೇಳಲಾಗುತ್ತಿದೆ. ಟ್ರೋಲ್ ಸಾಂಗ್ನಲ್ಲಿ ಕೆಲ ಗಣ್ಯ ವ್ಯಕ್ತಿಗಳನ್ನು ಪರೋಕ್ಷವಾಗಿ ಟ್ರೋಲ್ ಮಾಡಿದಂತೆ ಕಾಣುತ್ತಿದೆ. ಆದರೆ ಸಾಂಗ್ ಅನ್ನು ಎಲ್ಲರೂ ಎಂಜಾಯ್ ಮಾಡಿದ್ದರು. ಯಾರೂ ಕೂಡ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಆದರೂ ಸಿನಿಮಾದಲ್ಲಿ ಈ ಹಾಡು ಇರುತ್ತಾ? ಅಥವಾ ಸೆನ್ಸಾರ್ ವೇಳೆ ಕತ್ತರಿ ಹಾಕಿದ್ದಾರಾ? ಎಂದು ಕೆಲವರು ಕೇಳುತ್ತಿದ್ದಾರೆ. ಸಿನಿಮಾದಲ್ಲಿ ಸಾಂಗ್ ಇರಲ್ವಾ? ಬರೀ ಪ್ರಮೋಷನ್ಗಾಗಿ ಈ ಸಾಂಗ್ ಬಳಕೆ ಆಗುತ್ತಾ? ಎನ್ನುವುದು ಕೆಲವರ ಪ್ರಶ್ನೆ.
ಟಾಲಿವುಡ್ನಲ್ಲಿ ಕೂಡ ‘ಯುಐ’ ಕ್ರೇಜ್ ಜೋರಾಗಿದೆ. ಕಾರಣ ಉಪ್ಪಿ ನಿರ್ದೇಶನದ ಸಿನಿಮಾಗಳಿಗೆ ಅಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಇನ್ನುಳಿದಂತೆ ಪರಭಾಷೆಗಳಲ್ಲಿ ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ? ಎನ್ನುವ ನಿರೀಕ್ಷೆ ಇದ್ದೇ ಇದೆ. 2 ಗಂಟೆ 10 ನಿಮಿಷಗಳ ಸಿನಿಮಾ ಎಂದು ಹೇಳಲಾಗ್ತಿದೆ. ಹೀಗಾಗಿ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ನಿರೀಕ್ಷೆಯಿದೆ.