ಹೊಸ ಯುಗದ ಆದಿ ಯುಗಾದಿ – ಈ ದಿನ ಬೇವು – ಬೆಲ್ಲ ಯಾಕೆ ಸೇವಿಸಬೇಕು?

ಹೊಸ ಯುಗದ ಆದಿ ಯುಗಾದಿ – ಈ ದಿನ ಬೇವು – ಬೆಲ್ಲ ಯಾಕೆ ಸೇವಿಸಬೇಕು?

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ.. ಹೊಸ ವರುಷಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ.. ನಾಡಿನೆಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಯುಗಾದಿ ಹಬ್ಬ ಹಿಂದೂಗಳಿಗೆ ನೂತನ ಸಂವತ್ಸರದ ಆರಂಭ ದಿನ. ಕ್ಯಾಲೆಂಡರ್ ಗಳಲ್ಲಿ ಜನವರಿ 1 ಅನ್ನು ಹೊಸ ವರ್ಷ ಎಂದು ಆಚರಿಸಿದರೂ ಹಿಂದೂ ಸಂಪ್ರದಾಯದಂತೆ ಯುಗಾದಿ ದಿನವೇ ಹೊಸ ವರ್ಷ. 2024ರ ಯುಗಾದಿ ಏಪ್ರಿಲ್ 9, ಮಂಗಳವಾರದಂದು ಬಂದಿದೆ.

ಇದನ್ನೂ ಓದಿ: ಈ ಬಾರಿ ರಾಮನಗರಿಯಲ್ಲಿ ರಾಮನವಮಿ ಅದ್ಧೂರಿ ಆಚರಣೆ- ಅಯೋಧ್ಯೆಯಲ್ಲಿ ಸೂರ್ಯ ತಿಲಕಕ್ಕೆ ಸಿದ್ಧತೆ

ಕ್ಯಾಲೆಂಡರ್ ಗಳಲ್ಲಿ ಯುಗಾದಿಯು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಯುಗಾದಿ ಪದವೇ ಹೇಳುವಂತೆ ಯುಗ ಆದಿ ಎಂದರೆ ವರ್ಷದ ಆರಂಭ ಎಂದು ಸೂಚಿಸುತ್ತದೆ. ಈ ವಿಶೇಷ ದಿನವನ್ನು ಕರ್ನಾಟಕದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಿಂದೂ ಸಂಪ್ರದಾಯದಂತೆ ಯುಗಾದಿ ಹಬ್ಬವು ಹೊಸ ಯುಗ, ವರ್ಷ ಮತ್ತು ಭವಿಷ್ಯದ ಆರಂಭವಾಗಿದೆ ಎಂದು ನಂಬಲಾಗುತ್ತದೆ.

ಯುಗಾದಿ ಹಬ್ಬ ಎಂದ ಕೂಡಲೇ ಆ ದಿನ ಬೇವು-ಬೆಲ್ಲ ಎರಡನ್ನೂ ಸೇವಿಸುತ್ತೇವೆ. ವಿಶೇಷ ಅರ್ಥವನ್ನೊಳಗೊಂಡಿರುವ ಬೇವು-ಬೆಲ್ಲವನ್ನು ಹಿಂದೂಗಳು ತಪ್ಪದೇ ಯುಗಾದಿ ಹಬ್ಬದಂದು ಸವಿಯುತ್ತಾರೆ. ಕರ್ನಾಟಕದಲ್ಲಿ ಬೇವು-ಬೆಲ್ಲವನ್ನು ತಿನ್ನುವುದು ಸಂಪ್ರದಾಯ. ಕಹಿಯಾದ ಬೇವು ಜೀವನದಲ್ಲಿ ಬರುವ ಕಷ್ಟ, ದುಃಖಗಳು, ತೊಡಕುಗಳನ್ನು ಪ್ರತಿಬಿಂಬಿಸಿದರೆ, ಸಿಹಿಯಾದ ಬೆಲ್ಲ ಜೀವನದಲ್ಲಿ ಬರುವ ಸಂತೋಷ ಸಂಭ್ರಮಗಳ ಸಂಕೇತವಾಗಿದೆ. ಜೀವನದಲ್ಲಿ ಸುಖ-ದುಃಖ ಇರುತ್ತದೆ. ಎರಡನ್ನೂ ಅನುಭವಿಸಬೇಕೆಂಬ ಅರ್ಥವನ್ನು ನೀಡುವ ಬೇವು-ಬೆಲ್ಲವನ್ನು ವರ್ಷದ ಆರಂಭದ ದಿನ ತಿನ್ನಬೇಕು ಎಂದು ನಮ್ಮ ಹಿರಿಯರು ಅಂದಿನಿಂದ ಪದ್ಧತಿಯಾಗಿ ಮಾಡಿಕೊಂಡು ಬಂದಿದ್ದಾರೆ.

ಬೇವುಬೆಲ್ಲ ತಿನ್ನುವುದು ಯಾಕೆ? ವೈಜ್ಞಾನಿಕ ಕಾರಣ ಏನು?

ಮನುಷ್ಯ ಬೇವು-ಬೆಲ್ಲ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಎಂದು ವೈಜ್ಞಾನಿಕವಾಗಿಯೂ ತಿಳಿದು ಬಂದಿದೆ. ಬೇವಿನಲ್ಲಿರುವ ಔಷಧೀಯ ಗುಣಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ವಸಂತ ಋತುವಿನ ಆರಂಭದೊಂದಿಗೆ ಸಮೃದ್ಧವಾಗಿ ಬೆಳೆಯುವ ಬೇವು ಇಡೀ ವರ್ಷ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಬೇವಿನ ಎಲೆಗಳು ಎಲ್ಲಾ ಕಾಲಕ್ಕೂ ಸಿಗುವಂತಾಗಿದೆ.

ಬೇವು ಕಹಿಯಾದ ರಸವನ್ನೊಳಗೊಂಡಿರುತ್ತದೆ. ಬೆಲ್ಲದ ಜೊತೆಗೆ ಸೇವಿಸಿದರೆ ಪಿತ್ತದ ಅಂಶ ಕಡಿಮೆಯಾಗಿ ದೇಹ ತಂಪಾಗುತ್ತದೆ. ಇದು ಮುಖ್ಯವಾಗಿ ಪಿತ್ತರಸ ಲವಣಗಳು, ಫಾಸ್ಫೋಲಿಪಿಡ್‌ಗಳು, ಕೊಲೆಸ್ಟ್ರಾಲ್, ಎಲೆಕ್ಟ್ರೋಲೈಟ್‌ಗಳು ಸೇರಿದಂತೆ ನೀರಿನಾಂಶ ಹೊಂದಿರುತ್ತದೆ. ಹಲವು ಗುಣಗಳಿಂದ ಮನುಷ್ಯನ ಆರೋಗ್ಯಕ್ಕೆ ಉತ್ತಮವಾದ ಔಷಧಿಯಾಗಿದೆ.

ಇನ್ನು  ಬೆಲ್ಲದಲ್ಲಿ ನೈಸರ್ಗಿಕ ಖನಿಜಾಂಶಗಳು ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೇಸಿಯಮ್, ಪೊಟ್ಯಾಶಿಯಂ ಅಪಾರವಾಗಿರುತ್ತದೆ. ಬೆಲ್ಲ ಸೇವಿಸಿದರೆ ತೂಕ ನಷ್ಟದ ಜೊತೆಗೆ ಉತ್ತಮ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಬೆಲ್ಲದಲ್ಲಿರುವ ಪೊಟ್ಯಾಶಿಯಂ ಚಯಾಪಚಯವನ್ನು ಉತ್ತಮಗೊಳಿಸುತ್ತದೆ. ಮನುಷ್ಯನಿಗೆ ನಿಶಕ್ತಿಯನ್ನು ದೂರ ಮಾಡುತ್ತದೆ. ಬೆಲ್ಲವನ್ನು ಸೇವಿಸುವುದರಿಂದ ದೇಹ ಚೈತನ್ಯವಾಗಿರುತ್ತದೆ.

ಬೇವು-ಬೆಲ್ಲದಲ್ಲಿನ ವಿಶೇಷ ಗುಣಗಳು ಮನುಷ್ಯನಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಹಿತವಾಗಿರುತ್ತದೆ. ಯುಗಾದಿ ಹಬ್ಬದಂದು ಸೇವಿಸುವ ಬೇವು-ಬೆಲ್ಲ ವರ್ಷವಿಡೀ ಸಮೃದ್ಧಿಯಾದ ಜೀವನ ನಡೆಸಬೇಕೆಂದು ಪ್ರತೀ ವರ್ಷ ಆರಂಭ ದಿನದಂದು ತಪ್ಪದೇ ಸೇವಿಸಲಾಗುತ್ತದೆ.

Shwetha M