ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ತನಿಖಾಧಿಕಾರಿ ಬದಲಾಯಿಸಿದ ಉಡುಪಿ ಎಸ್ಪಿ!
ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ಯುವತಿಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಅನ್ನುವ ವಿವಾದ ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ದಿನದಿನಕ್ಕೂ ಈ ವಿವಾದ ತಾರಕಕ್ಕೇರುತ್ತಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಲ್ಪೆ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ ಅವರನ್ನು ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯನವರೇ ಬೂಟಾಟಿಕೆ ನಿಲ್ಲಿಸಿ.. ಹಿಟ್ಲರ್, ಮುಸಲೋನಿಯವರನ್ನೇ ಮೀರಿಸುವ ಸರ್ವಾಧಿಕಾರಿ ನೀವು! – ಸುನೀಲ್ ಕುಮಾರ್ ಕಿಡಿ
ಈ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದ್ದಂತೆ ಆರಂಭದಿಂದ ತನಿಖೆ ನಡೆಸಿಕೊಂಡು ಬಂದಿದ್ದ ಮಲ್ಪೆ ಇನ್ಸ್ಪೆಕ್ಟರ್ ಮಂಜುನಾಥ್ ಗೌಡರನ್ನು ಬದಲಾಯಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆ ಮಲ್ಪೆ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ ಅವರನ್ನು ಬದಲಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರನ್ನು ತನಿಖಾಧಿಕಾರಿಯನ್ನಾಗಿ ಉಡುಪಿ ಎಸ್ಪಿ ಅಕ್ಷಯ್ ನೇಮಕ ಮಾಡಿದ್ದಾರೆ.
ಡಿವೈಎಸ್ಪಿ ಬೆಳ್ಳಿಯಪ್ಪ ಅವರು ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪ್ರಕರಣ ಮತ್ತು ಶಿರೂರು ಸ್ವಾಮೀಜಿ ಸಾವು ಪ್ರಕರಣದಲ್ಲೂ ದಕ್ಷ ತನಿಖಾಧಿಕಾರಿಯಾಗಿ ಬೆಳ್ಳಿಯಪ್ಪ ಅವರು ಕಾರ್ಯನಿರ್ವಹಿಸಿದ್ದರು. ಇದೀಗ ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಭೇದಿಸಲು ಬೆಳ್ಳಿಯಪ್ಪ ಅವರನ್ನು ನೇಮಕ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯ ಹೇಳಿಕೆಯನ್ನು ಮಹಿಳಾ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಆಪರೇಟ್ ಆಗುತ್ತಿದ್ದ ಎಲ್ಲ ಮೊಬೈಲ್ಗಳ ಕಾಲ್ ಡೀಟೇಲ್ಸ್ಗಳನ್ನು ಪತ್ತೆ ಹಚ್ಚಿದ್ದು, ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ. ಜೊತೆಗೆ ಅನಗತ್ಯ ವ್ಯಕ್ತಿಗಳು ಕಾಂಪೌಂಡ್ ಆವರಣದಲ್ಲಿ ಓಡಾಟ ಆರೋಪ ಕೇಳಿಬಂದಿದ್ದು, ಕಾಲೇಜು ಆವರಣದಲ್ಲಿನ ಸಿಸಿ ಕ್ಯಾಮರಾಗಳ ಫೂಟೇಜ್ನ್ನು ವಶಕ್ಕೆ ಪಡೆಯಲಾಗಿದೆ.