ರಾಮಲಲ್ಲಾ ವಿಗ್ರಹ ಆಯ್ಕೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ! – ಪೇಜಾವರ ಶ್ರೀ

ರಾಮಲಲ್ಲಾ ವಿಗ್ರಹ ಆಯ್ಕೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ! – ಪೇಜಾವರ ಶ್ರೀ

ಅಯೋಧ್ಯೆಯ ರಾಮಮಂದಿರದ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ರಾಮಲಲ್ಲಾನ ಮೂರ್ತಿ ಆಯ್ಕೆಯಾಗಿದ್ದು, ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಕೆತ್ತನೆ ಮಾಡಿರುವ ವಿಗ್ರಹ ಆಯ್ಕೆಯಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಯೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಇದನ್ನೂ ಓದಿ:

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ವಿಗ್ರಹ ಆಯ್ಕೆ ಬಗ್ಗೆ ಜನವರಿ 17ರಂದು ಅಧಿಕೃತವಾಗಿ ಘೋಷಣೆ ಮಾಡಲಾಗುವುದು. ಎರಡು ಕಪ್ಪು ಕಲ್ಲುಗಳು ಮತ್ತು ಒಂದು ಗ್ರಾನೈಟ್ ಕಲ್ಲಿನ ರಾಮ ಲಲ್ಲಾ ವಿಗ್ರಹವನ್ನು ಸುಂದರವಾಗಿ ಕೆತ್ತಲಾಗಿದೆ. ವಿಗ್ರಹ ಆಯ್ಕೆಗೆ ಟ್ರಸ್ಟ್‌ನ ಎಲ್ಲಾ ಸದಸ್ಯರು ಮತ ಚಲಾಯಿಸಿದ್ದಾರೆ. ಸರಯೂ ನದಿಯ ನೀರಿನಿಂದ ವಿಗ್ರಹಕ್ಕೆ ಅಭಿಷೇಕ ನಡೆಸುವ ದಿನದಂದು ವಿಗ್ರಹವನ್ನು ಅಂತಿಮಗೊಳಿಸಿದ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ದೇವಾಲಯದ ಉದ್ಘಾಟನೆಗೆ ಆಹ್ವಾನಿತರನ್ನು ಪ್ರಾತಿನಿಧ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಎಲ್ಲರನ್ನೂ ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ. ಮೂರ್ತಿ ಪ್ರತಿಷ್ಠಾಪನೆ ನಂತರ ಎಲ್ಲ ಭಕ್ತರು ದರ್ಶನ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸರ್ಕಾರದಿಂದ ದೇಣಿಗೆ ಪಡೆದು ದೇವಾಲಯ ನಿರ್ಮಿಸಿಲ್ಲ. ಭಕ್ತರಿಂದ ದೇಣಿಗೆ ಸಂಗ್ರಹಿಸಿ ಇದನ್ನು ನಿರ್ಮಿಸಲಾಗಿದೆ ಎಂದು ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಇದು ಬಿಜೆಪಿಯ ರಾಮಮಂದಿರವಲ್ಲ, ದೇವರು ಬರೀ ದೇವಸ್ಥಾನಕ್ಕೆ ಸೀಮಿತವಾಗಿಲ್ಲ. ಎಲ್ಲರಲ್ಲಿಯೂ ನೆಲೆಸಿದ್ದಾನೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲೂ ದೇವರು ಇದ್ದಾನೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಹಳೆ ಪ್ರಕರಣದಲ್ಲಿ ಕರಸೇವಕರನ್ನು ಬಂಧಿಸಿರುವುದು ಸರಿಯಲ್ಲ. ಹಿಂದೂಗಳನ್ನು ಹತ್ತಿಕ್ಕಲು ಸರಕಾರ ಹವಣಿಸುತ್ತಿರುವಂತೆ ತೋರುತ್ತಿದೆ. ರಾಮಮಂದಿರ ಉದ್ಘಾಟನೆಗೆ ಸಿದ್ಧವಾಗಿರುವಾಗ ಇಂತಹ ಘಟನೆಗಳು ನಡೆಯಬಾರದು. ಯಾವುದೇ ಗೊಂದಲಗಳಿಗೆ ಸರಕಾರ ಆಸ್ಪದ ನೀಡಬಾರದು ಎಂದು ಅವರು ಹೇಳಿದ್ದಾರೆ. ದೇಶದ ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಪರಿಗಣಿಸಿ ರಾಮಮಂದಿರ ಉದ್ಘಾಟನೆಯ ದಿನದಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.

Shwetha M