ಕೊಲ್ಲೂರು ದೇಗುಲಕ್ಕೆ ನೂತನ ರಥ – 400 ವರ್ಷಗಳ ಹಿಂದಿನ ಶಿಲ್ಪಕಲೆಯನ್ನು ಉಳಿಸಿದ್ದೇಗೆ?
ದಕ್ಷಿಣ ಭಾರತದ ಪ್ರಸಿದ್ದ ಕೊಲ್ಲೂರು ಮೂಕಾಂಬಿಕೆ ದೇವಿ ಸನ್ನಿಧಿಯಲ್ಲಿ ಸುಮಾರು 400 ವರ್ಷಗಳ ಬಳಿಕ ನೂತನ ರಥವನ್ನು ಸಿದ್ದಪಡಿಸಲಾಗಿದೆ.
ದೇಗುಲದಲ್ಲಿ ಈವರೆಗೆ ಬಳಸುತ್ತಿದ್ದ ರಥವು ಕೆಳದಿ ಅರಸರ ಕಾಲದ್ದಾಗಿದ್ದು, 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಇದು ಸಂಪೂರ್ಣವಾಗಿ ಹಾಳಾಗಿತ್ತು. ಹಾಗಾಗಿ ನೂತನ ರಥವನ್ನು ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ: ‘ಅನಿತಾಗೆ ಟಿಕೆಟ್ ಕೊಟ್ರೆ ನಂಗೂ ಕೊಡಿ’ – ಭವಾನಿ ರೇವಣ್ಣ ಪಟ್ಟು, ‘ದೊಡ್ಡಗೌಡ್ರ’ ಮನೆಯಲ್ಲಿ ಕಗ್ಗಂಟು!
ನೂತನ ರಥವನ್ನು 3ಡಿ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ, ಹಳೆ ರಥದ ಪಡಿಯಚ್ಚು ತೆಗೆದು, ಅದರ ವಿನ್ಯಾಸದಂತೆ ಹೊಸ ರಥ ನಿರ್ಮಿಸಲಾಗಿದೆ. ಆ ರಥದಲ್ಲಿದ್ದ ಶಿಲ್ಪಕಲೆಯಲ್ಲಿ ಯಾವುದೇ ಬದಲಾವಣೆಯಾಗದಂತೆ ಎಚ್ಚರವಹಿಸಿ ಕೆತ್ತನೆ ಮಾಡಲಾಗಿದೆ. ಇದನ್ನು ಸಿದ್ದಪಡಿಸಲು ಸುಮಾರು 42 ಜನ ಕುಶಲಕರ್ಮಿಗಳು 9 ತಿಂಗಳ ಕಾಲ ಶ್ರಮಿಸಿದ್ದಾರೆ. ಇದೇ ಫೆಬ್ರವರಿಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುತ್ತಿದ್ದು, ಮಾರ್ಚ್‌ನಲ್ಲಿ ನಡೆಯಲಿರುವ ದೇಗುಲದ ರಥೋತ್ಸವದಲ್ಲಿ ನೂತನ ರಥ ಬಳಸುವ ಬಗ್ಗೆ ಯೋಜನೆ ರೂಪಿಸಲಾಗಿದೆ.
400 ವರ್ಷಗಳ ಇತಿಹಾಸ ಹೊಂದಿರುವ ಹಳೆಯ ರಥವನ್ನು ದೇಗುಲದ ಆನೆಬಾಗಿಲಿನ ಬಳಿ ಸಂರಕ್ಷಣೆ ಮಾಡಿ ಪಾರದರ್ಶಕ ಫ್ರೇಮ್ ಬಳಸಿ ಭಕ್ತರ ವೀಕ್ಷಣೆಗೆ ಇರಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ದೇವಳದ ವಾರ್ಷಿಕ ಮಹೋತ್ಸವಕ್ಕೆ ಭರದಿಂದ ಸಿದ್ದತೆ ನಡೆಯುತ್ತಿದೆ. ಅಲ್ಲದೇ ಜಾತ್ರಾ ಮಹೋತ್ಸವದ ಬಳಿಕ ದೇವಳದ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.