ಹೊರಾಂಗಣ ಆಟ ನಿಷೇಧಿಸಿದ ಉಡುಪಿ ಜಿಲ್ಲಾಡಳಿತ – ಕಾರ್ಮಿಕರ ಕೆಲಸದ ಸಮಯವನ್ನೂ ಬದಲಿಸಿದ್ದೇಕೆ  ಗೊತ್ತಾ..?

ಹೊರಾಂಗಣ ಆಟ ನಿಷೇಧಿಸಿದ ಉಡುಪಿ ಜಿಲ್ಲಾಡಳಿತ – ಕಾರ್ಮಿಕರ ಕೆಲಸದ ಸಮಯವನ್ನೂ ಬದಲಿಸಿದ್ದೇಕೆ  ಗೊತ್ತಾ..?

ಅಬ್ಬಬ್ಬಬ್ಬಾ.. ಏನ್ ಬಿಸಿಲು ಅಂತೀರಾ. ಮನೆಯಲ್ಲೂ ಇರೋಕೆ ಆಗ್ತಿಲ್ಲ. ಹೊರಗೆ ಬರೋಕೂ ಭಯ. ಬೇಸಿಗೆ ಆರಂಭದ ಬೆನ್ನಲ್ಲೇ ಧಗೆ ಜೋರಾಗ್ತಿದೆ. ಅದ್ರಲ್ಲೂ ಕರಾವಳಿ ಭಾಗದಲ್ಲಿ ತಾಪಮಾನ ವಿಪರೀತ ಏರಿಕೆಯಾಗಿದೆ. ಹೀಗಾಗಿ ಶಾಲಾ ಮಕ್ಕಳಿಗಾಗಿ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಉಡುಪಿ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಬಿಸಿಲ ಝಳ ಹೆಚ್ಚಾಗ್ತಿರೋದ್ರಿಂದ ಉಡುಪಿ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಅಲರ್ಟ್ ಆಗಿದ್ದು ಸುತ್ತೋಲೆ ಹೊರಡಿಸಿದೆ. ಸುತ್ತೋಲೆ ಪ್ರಕಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಮಕ್ಕಳು ಹೊರಾಂಗಣದಲ್ಲಿ ಆಟ ಆಡುವುದನ್ನು ನಿರ್ಬಂಧಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚು ನೀರು ಕುಡಿಯಬೇಕು ಮತ್ತು ಸೂರ್ಯನ ಕಿರಣಗಳಿಗೆ ನೇರವಾಗಿ ಮೈ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ಹೀಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲೆಯ ಬಿಇಒಗಳ ಮೂಲಕ ಎಲ್ಲಾ ಶಾಲೆಗಳಿಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ : ಬಿಸಿಲಿನಿಂದ ಕಂಗೆಟ್ಟಿದ್ದ ಜನರನ್ನ ತಣಿಸಲಿದ್ದಾನೆ ವರುಣ – ಇಂದು & ನಾಳೆ ಎಲ್ಲೆಲ್ಲಿ ಮಳೆ ಸಾಧ್ಯತೆ..?

ಶಾಲಾ ಮಕ್ಕಳಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಶಾಲಾ ಮುಖ್ಯಸ್ಥರು, ಶಿಕ್ಷಕರು ಹಾಗೂ ಪಾಲಕರಿಗೆ ಸೂಚಿಸಲಾಗಿದೆ. ಇನ್ನು ಕೆಲವೆಡೆ ಪರೀಕ್ಷೆಗಳು ಆರಂಭವಾಗಿದ್ದು, ಮಕ್ಕಳು ಹೈಡ್ರೇಟ್​ ಆಗಿರುವುದು ಬಹಳ ಮುಖ್ಯ. ಮಧ್ಯಾಹ್ನದ ಬಿಸಿ ಊಟವನ್ನು ತಯಾರಿಸುವಾಗ ಸರಿಯಾದ ವಾತಾವರಣ ವ್ಯವಸ್ಥೆ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ. ಇನ್ನು ಕ್ರಮಕೈಗೊಂಡ ಬಗ್ಗೆ ವರದಿ ಸಲ್ಲಿಸುವಂತೆ ಇಲಾಖೆಯೂ ಶಾಲೆಗಳಿಗೆ ತಿಳಿಸಿದೆ.

ತಾಪಮಾನದ ಏರಿಕೆಯು ಆರೋಗ್ಯ ಸಮಸ್ಯೆಗಳಿರುವ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮಂಜೇರಿ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಟಿ.ಎಸ್ ಅನೀಶ್ ಹೇಳಿದ್ದಾರೆ. ಬಿಸಿಲಿನ ಆಘಾತದಿಂದ ದೇಹವನ್ನು ರಕ್ಷಿಸಲು ಆಗಾಗ್ಗೆ ನೀರು ಕುಡಿಯುತ್ತಿರಬೇಕು. ಬಿಸಿಲಿಗೆ ಹೊರಗೆ ಹೋದವರಿಗೆ ಮಾತ್ರ ಆಘಾತವಾಗುತ್ತದೆ ಎನ್ನುವಂತಿಲ್ಲ. ಒಳಾಂಗಣದಲ್ಲಿ ಕುಳಿತುಕೊಳ್ಳುವವರು, ವಿಶೇಷವಾಗಿ ದುರ್ಬಲರು ಅಸ್ವಸ್ಥತೆಯನ್ನು ಅನುಭವಿಸಬಹುದು ಎಂದಿದ್ದಾರೆ.

ಮತ್ತೊಂದೆಡೆ ಮಧ್ಯಾಹ್ನ ಬೆಂಕಿಯಂತೆ ಬಿಸಿಲು ಸುಡೋದ್ರಿಂದ ಕಾರ್ಮಿಕರ ಕೆಲಸದ ಸಮಯದಲ್ಲಿ ಬದಲಾವಣೆ  ಮಾಡಲಾಗಿದೆ. ಮಾರ್ಚ್ 2ರಿಂದ ಏಪ್ರಿಲ್ 30 ರವರೆಗೆ ಬಿಸಿಲ ಬೇಗೆಯ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಇದ್ದ ಕೆಲಸದ ಅವಧಿಯನ್ನು  ಇಳಿಕೆ ಮಾಡಲಾಗಿದೆ. ಪಾಳಿ ಕಾರ್ಮಿಕರಿಗೆ ಮಧ್ಯಾಹ್ನ 12 ಗಂಟೆಗೆ ಪಾಳಿ ಕೊನೆಗೊಂಡು 3 ಗಂಟೆಗೆ ಪ್ರಾರಂಭವಾಗಲಿದೆ ಎಂದು ಕಾರ್ಮಿಕ ಆಯುಕ್ತರು ಹೇಳಿದ್ದಾರೆ.

suddiyaana