ಉಬರ್ ಆ್ಯಪ್ ಬಳಸಿ ಅಮೆರಿಕಕ್ಕೆ 800ಕ್ಕೂ ಅಧಿಕ ಭಾರತೀಯರ ಕಳ್ಳಸಾಗಣೆ!
ವಾಷಿಂಗ್ಟನ್: ಉಬರ್ ಆ್ಯಪ್ ಬಳಸಿಕೊಂಡು 800ಕ್ಕೂ ಅಧಿಕ ಭಾರತೀಯ ಪ್ರಜೆಗಳನ್ನು ವ್ಯಕ್ತಿಯೊಬ್ಬ ಕಳ್ಳಸಾಗಣಿಕೆ ಮಾಡಿದ್ದಾನೆ. ಇದೀಗ ಆತನಿಗೆ ಅಮೆರಿಕದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗಿದೆ.
ಇದನ್ನೂ ಓದಿ: ಸ್ಫೋಟಗೊಂಡಿದ್ದ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಸಾಗರದಿಂದ ಹೊರತೆಗೆದ ಯುಎಸ್ ಕೋಸ್ಟ್ ಗಾರ್ಡ್
ಭಾರತೀಯ ಮೂಲದ ರಾಜಿಂದರ್ ಪಾಲ್ ಸಿಂಗ್ ಸದ್ಯ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾನೆ. ಆತ ಉಬರ್‌ನ ರೈಡ್-ಹೈಲಿಂಗ್ ಎಂಬ ಅಪ್ಲಿಕೇಶನ್ ಬಳಿಸಿಕೊಂಡು ಸುಮಾರು 800ಕ್ಕೂ ಹೆಚ್ಚು ಭಾರತೀಯರನ್ನು ಅಮೆರಿಕಾಗೆ ಕಳ್ಳಸಾಗಣೆ ಮಾಡಿದ್ದಾನೆ. ಇಷ್ಟೇ ಅಲ್ಲದೇ ಆತ ಭಾರತೀಯ ಪ್ರಜೆಗಳನ್ನು ಗಡಿಯಿಂದ ತರುವ ಸಲುವಾಗಿ ಬರೋಬ್ಬರಿ 5,00,000 ಅಮೆರಿಕನ್ ಡಾಲರ್ (ಅಂದಾಜು 4.10 ಕೋಟಿ ರೂ.) ಹಣವನ್ನು ಪಡೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಅಮೆರಿಕ ನ್ಯಾಯಾಲಯ 3 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ.
ಜುಲೈ 2018ರಿಂದ ರಾಜಿಂದರ್ ಪಾಲ್ ಸಿಂಗ್ ಮತ್ತು ಅವರ ಸಹಚರರು ಕೆನಡಾದಿಂದ ಸಿಯಾಟಲ್ ಪ್ರದೇಶಕ್ಕೆ ಅಕ್ರಮವಾಗಿ ಗಡಿ ದಾಟಿದ ಜನರನ್ನು ಸಾಗಿಸಲು ಉಬರ್ ಅನ್ನು ಬಳಸಿದ್ದಾರೆ. 2018ರಿಂದ 2022ರ ಮಧ್ಯದಲ್ಲಿ ಭಾರತೀಯರನ್ನು ಯುಎಸ್‌ಗೆ ಸಾಗಿಸುವ ಸಲುವಾಗಿ ರಾಜಿಂದರ್ ಸುಮಾರು 600ಕ್ಕೂ ಹೆಚ್ಚು ಪ್ರವಾಸ ಬೆಳೆಸಿದ್ದ ಎಂದು ತಿಳಿದುಬಂದಿದೆ ಎಂದು ವರದಿಯಾಗಿದೆ.
ಪ್ರಕರಣದ ತನಿಖೆಯ ಪ್ರಕಾರ, 2018ರಿಂದ 2022ರ ಒಳಗಾಗಿ ಸುಮಾರು 80,000 ಅಮೆರಿಕನ್ ಡಾಲರ್ ಹಣಕ್ಕೆ 17 ಉಬರ್ ಖಾತೆಗಳು ಇದರೊಂದಿಗೆ ಕೈಜೋಡಿಸಿದ್ದವು. ಜನರನ್ನು ಸಾಗಿಸುವ ಸಲುವಾಗಿ ರಾಜಿಂದರ್ ಸಹಚರರು ಬಾಡಿಗೆಯ ಏಕಮುಖ ವಾಹನವನ್ನು ಬಳಸುತ್ತಿದ್ದರು. ಬಳಿಕ ಅವರನ್ನು ವಾಷಿಂಗ್ಟನ್‌ನ ಹೊರಪ್ರದೇಶಕ್ಕೆ ಸಾಗಿಸುತ್ತಿದ್ದರು. ಕ್ಯಾಲಿಫೋರ್ನಿಯಾದ ರಾಜಿಂದರ್ ಮನೆಯಿಂದ ತನಿಖಾಧಿಕಾರಿಗಳು ಸುಮಾರು 45,000 ಡಾಲರ್ ಹಣವನ್ನು ಮತ್ತು ನಕಲಿ ಗುರುತಿನ ದಾಖಲೆಯನ್ನು ಪತ್ತೆಹಚ್ಚಿದ್ದಾರೆ. ಕಾನೂನುಬದ್ದವಾಗಿ ಹಾಜರಾಗದ ರಾಜಿಂದರ್‌ನನ್ನು ಜೈಲುಶಿಕ್ಷೆಯ ಬಳಿಕ ಗಡಿಪಾರು ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.