U19 ಏಷ್ಯಾಕಪ್‌ನಲ್ಲಿ ಅಭಿಗ್ಯಾನ್ ಕುಂಡು ಅದ್ಭುತ ದ್ವಿಶತಕ – 125 ಎಸೆತ, 17 ಬೌಂಡರಿ, 9 ಸಿಕ್ಸ 209 ರನ್

U19 ಏಷ್ಯಾಕಪ್‌ನಲ್ಲಿ ಅಭಿಗ್ಯಾನ್ ಕುಂಡು ಅದ್ಭುತ ದ್ವಿಶತಕ –  125 ಎಸೆತ, 17 ಬೌಂಡರಿ, 9 ಸಿಕ್ಸ  209 ರನ್

ಮಂಗಳವಾರ ನಡೆದ U19 ಪುರುಷರ ಏಷ್ಯಾಕಪ್‌ನಲ್ಲಿ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಅಭಿಗ್ಯಾನ್ ಕುಂಡು ಅದ್ಭುತ ದ್ವಿಶತಕ ಬಾರಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ದುಬೈನ ಸೆವೆನ್ಸ್ ಕ್ರೀಡಾಂಗಣದಲ್ಲಿ, 17 ವರ್ಷದ ಅಭಿಗ್ಯಾನ್ ಕುಂಡು ಅಜೇಯ 209 ರನ್‌ ಬಾರಿಸುವ ಮೂಲಕ ಯೂತ್ ಏಕದಿನ ಪಂದ್ಯಗಳಲ್ಲಿ ದ್ವಿಶತಕ ಗಳಿಸಿದ ಎರಡನೇ ಹಾಗೂ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವರ್ಷದ ಆರಂಭದಲ್ಲಿ, ದಕ್ಷಿಣ ಆಫ್ರಿಕಾದ ಜೋರಿಚ್ ವ್ಯಾನ್ ಶಾಲ್ಕ್‌ವೈಕ್ ಈ ಸಾಧನೆ ಮಾಡಿದ ಮೊದಲ ಆಟಗಾರ.

ಗ್ರೂಪ್ ಎ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಪರ ಕುಂದು, 125 ಎಸೆತಗಳಲ್ಲಿ 17 ಬೌಂಡರಿ ಮತ್ತು 9 ಸಿಕ್ಸರ್‌ಗಳೊಂದಿಗೆ 209 ರನ್ ಗಳಿಸಿದರು. ಅವರ ಈ ಬ್ಯಾಟಿಂಗ್‌ ಆರ್ಭಟದ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 408 ರನ್ ಗಳಿಸಿತು. ಬೃಹತ್‌ ಮೊತ್ತ ಬೆನ್ನಟ್ಟಿದ ಮಲೇಷ್ಯಾ ತಂಡ ಕೇವಲ 93ರನ್‌ಗೆ ಸರ್ವಪತನ ಕಂಡಿತು. ಭಾರತ 315 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

2002 ರಲ್ಲಿ ಟೌಂಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಂಬಾಟಿ ರಾಯುಡು ಅಜೇಯ 177 ರನ್‌ಗಳನ್ನು ಬಾರಿಸಿದ್ದು ಯೂತ್ ಏಕದಿನ ಪಂದ್ಯಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಇದುವರೆಗಿನ ದಾಖಲೆ ಆಗಿತ್ತು. ಆದರೆ ಈ ದಾಖಲೆ ಈಗ ಪತನಗೊಂಡಿತು.

ಇದನ್ನೂ ಓದಿ: RCBಗೆ ಎಂಟ್ರಿ ಕೊಟ್ಟ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ – 4 ತಂಡಗಳ ಪೈಪೋಟಿಯಲ್ಲಿ ಗೆದ್ದ ಬೆಂಗಳೂರು

ಉಳಿದಂತೆ ವೈಭವ್‌ ಸೂರ್ಯವಂಶಿ ಮತ್ತು ವೇದಾಂತ್ ತ್ರಿವೇದಿ ಅರ್ಧಶತಕ ಬಾರಿಸಿದರು. ಸೂರ್ಯವಂಶಿ ಭರ್ತಿ 50 ರನ್‌ ಗಳಿಸಿ ಔಟಾದರೆ, ತ್ರಿವೇದಿ 90 ರನ್‌ ಗಳಿಸಿ ಕೇವಲ 10 ರನ್‌ ಅಂತರದಿಂದ ಶತಕ ವಂಚಿತರಾದರು. ಅಂಬಟಿ ರಾಯುಡು ಅವರ 23 ವರ್ಷಗಳ ಹಳೆಯ ದಾಖಲೆಯನ್ನು ಮುರಿದ ಬಗ್ಗೆ ಮಾತನಾಡಿದ ಅಭಿಗ್ಯಾನ್ ಕುಂಡು, “ನಾನು ದಾಖಲೆ ಸೃಷ್ಟಿಸಿದ್ದೇನೆ ಎಂದು ತಿಳಿದುಕೊಳ್ಳುವುದು ನಿಜಕ್ಕೂ ಸಂತೋಷ ತಂದಿದೆ. ಮುಂದೆ, ದೊಡ್ಡ ವೇದಿಕೆಯಲ್ಲಿ ನನ್ನದೇ ದಾಖಲೆಯನ್ನು ಮತ್ತೊಮ್ಮೆ ಮುರಿಯಲು ಪ್ರಯತ್ನಿಸುತ್ತೇನೆ  ಎಂದು ಹೇಳಿದರು. ಕುಂಡು ಪ್ರಸ್ತುತ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಮೂರು ಪಂದ್ಯಗಳಿಂದ 263 ಸರಾಸರಿ ಮತ್ತು 151.14 ಸ್ಟ್ರೈಕ್ ರೇಟ್‌ನೊಂದಿಗೆ 263 ರನ್ ಗಳಿಸಿದ್ದಾರೆ.

Kishor KV