ಒಂಟಿ ಸಲಗದ ದಾಳಿಗೆ ಆಶಾಕಾರ್ಯಕರ್ತೆ ಸೇರಿ ಇಬ್ಬರು ಮಹಿಳೆಯರ ದಾರುಣ ಸಾವು – ಯಾವ ತಪ್ಪಿಗೆ ಈ ಸಾವಿನ ಶಿಕ್ಷೆ?

ಒಂಟಿ ಸಲಗದ ದಾಳಿಗೆ ಆಶಾಕಾರ್ಯಕರ್ತೆ ಸೇರಿ ಇಬ್ಬರು ಮಹಿಳೆಯರ ದಾರುಣ ಸಾವು – ಯಾವ ತಪ್ಪಿಗೆ ಈ ಸಾವಿನ ಶಿಕ್ಷೆ?

ಆ ಒಂಟಿಸಲಗಕ್ಕೆ ಅದೇನು ಮದ ಬಂದಿತ್ತೋ.. ಭಾನುವಾರ ಗ್ರಾಮದೊಳಗೆ ಯಮರಾಜ ಎಂಟ್ರಿಕೊಟ್ಟಂಗೆ ಬಂದೇ ಬಿಟ್ಟಿತ್ತು. ಹಾಗೆ ಬಂದ ಆನೆ ಬಲಿ ಪಡೆದಿದ್ದು ಇಬ್ಬರು ಮಹಿಳೆಯರನ್ನು. ಜೊತೆಗೆ ಮೂರು ಹಸುಗಳು ಕೂಡಾ ದಾರುಣವಾಗಿ ಸಾವಿಗೀಡಾಗಿವೆ.

ಇದನ್ನೂ ಓದಿ:ಕಾಫಿನಾಡಿನಲ್ಲಿ ಕಾಡಾನೆಗಳ ಉಪಟಳ – ಬೀಟಮ್ಮ ಗ್ಯಾಂಗ್‌ ಅನ್ನು ಹೆಡೆಮುರಿಕಟ್ಟಲು ಅಭಿಮನ್ಯು ಟೀಮ್‌ ಎಂಟ್ರಿ!

ಆನೇಕಲ್ ಗೆ ಹೊಂದಿಕೊಂಡಿರುವ ತಮಿಳುನಾಡಿನ ಅಣ್ಣಿಯಾಳ ಗ್ರಾಮದಲ್ಲಿ ಜನ ಭಾನುವಾರದ ರಜೆಯ ಮೂಡ್‌ನಲ್ಲಿದ್ದರು. ಆದರೆ, ಅದ್ಯಾವಾಗ ಒಂಟಿ ಸಲಗ ಗ್ರಾಮಕ್ಕೆ ಕಾಲಿಡ್ತೋ.. ನಂತರ ಆ ಗ್ರಾಮದಲ್ಲಿ ತುಂಬಿದ್ದು ಶೋಕ, ಸೂತಕ, ನೋವು, ಕಣ್ಣೀರು, ಆಕ್ರೋಶ. ಹೌದು.. ಭಾನುವಾರ ಒಂಟಿ ಕಾಡಾನೆ ಆಶಾ ಕಾರ್ಯಕರ್ತೆ ಸೇರಿದಂತೆ ಇಬ್ಬರು ಮಹಿಳೆಯರನ್ನು ಬಲಿ ಪಡೆದಿದೆ. ಜೊತೆಗೆ ಮೂರು ಹಸುಗಳು ಕೂಡಾ ದಾರುಣ ಸಾವು ಕಂಡಿವೆ.

ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ದಾಳಿ ಮಾಡಿದೆ. ಅಣ್ಣಿಯಾಳ ಗ್ರಾಮದ ಆಶಾ ಕಾರ್ಯಕರ್ತೆ 37 ವರ್ಷದ ವಸಂತ ಹಾಗೂ ದಾಸರಪಲ್ಲಿ ವಾಸಿ 40 ವರ್ಷದ ಅಶ್ವಥಮ್ಮ ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿಗಳು. ಕಳೆದ ಎರಡು ಮೂರು ದಿನಗಳಿಂದ ಗುಮ್ಮಳಾಪುರ, ಅಣ್ಣಿಯಾಳು, ತಳಿ ಸುತ್ತಮುತ್ತ ಈ ಕಾಡಾನೆ ದಾಂಧಲೆ ನಡೆಸುತ್ತಲೇ ಇತ್ತು. ಆದರೆ, ಪಾಪ.. ಅರಣ್ಯಾಧಿಕಾರಿಗಳಿಗೆ ಮಾತ್ರ ಅದೆಂಥಾ ಬ್ಯುಸಿ ಕೆಲಸವಿತ್ತೋ.. ಒಂಟಿ ಸಲಗವನ್ನು ಸೆರೆ ಹಿಡಿಯುವ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ನಿನ್ನೆ ಭಾನುವಾರ ಬೆಳಿಗ್ಗೆ ಅಣ್ಣಿಯಾಳು ಗ್ರಾಮಕ್ಕೆ ನುಗ್ಗಿದೆ. ಗ್ರಾಮಕ್ಕೆ ಬಂದ ಆನೆಯನ್ನು ಓಡಿಸಲು ಗ್ರಾಮಸ್ಥರು ಮುಂದಾಗಿದ್ದ ವೇಳೆ, ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಮೂರು ಹಸುಗಳ ಮೇಲೆ ಕಾಡಾನೆ ದಾಳಿ ಮಾಡಿದೆ.

ಒಂಟಿ ಸಲಗ ಇಬ್ಬರನ್ನು ಬಲಿ ಪಡೆದ ಮೇಲೆ ಗ್ರಾಮಸ್ಥರ ಆಕ್ರೋಶ ಇನ್ನೂ ಹೆಚ್ಚಾಗಿದೆ. ತಳಿ ಶಾಸಕ ರಾಮಚಂದ್ರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಕಾಡಾನೆ ಹಾವಳಿ ನಿಯಂತ್ರಿಸದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತ ಮಹಿಳೆಯರ ಸಾವಿಗೆ ತಲಾ 20 ಲಕ್ಷ ಪರಿಹಾರದ ಜೊತೆಗೆ ಮೃತರ ಕುಟುಂಬದವರಿಗೆ ಸರ್ಕಾರಿ ಉದ್ಯೋಗಕ್ಕೆ ಒತ್ತಾಯಿಸಿದರು. ರಸ್ತೆ ತಡೆ ಹಿನ್ನೆಲೆ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರ ಮನವೊಲಿಕೆ ಬಳಿಕೆ ಪ್ರತಿಭಟನೆ ವಾಪಸ್ ಪಡೆಯಲಾಯಿತು.

Sulekha