ಚಲಿಸುತ್ತಿದ್ದ ಬಸ್‌ನ ಡೋರ್‌ ಏಕಾಏಕಿ ಓಪನ್!‌ – ರಸ್ತೆಗೆ ಬಿದ್ದ ಅಕ್ಕ-ತಂಗಿ!

ಚಲಿಸುತ್ತಿದ್ದ ಬಸ್‌ನ ಡೋರ್‌ ಏಕಾಏಕಿ ಓಪನ್!‌ – ರಸ್ತೆಗೆ ಬಿದ್ದ ಅಕ್ಕ-ತಂಗಿ!

ಬಸ್‌ನಲ್ಲಿ ಪ್ರಯಾಣಿಸುವಾಗ ಎಷ್ಟು ಎಚ್ಚರಿಕೆಯಿಂದ ಇದ್ರೂ ಸಾಕಾಗಲ್ಲ. ಸ್ವಲ್ಪ ಎಚ್ಚರ ತಪ್ಪಿದ್ರೂ ಅನಾಹುತ ಕಟ್ಟಿಟ್ಟ ಬುತ್ತಿ. ಇದೀಗ ಇಲ್ಲೊಂದು ಕಡೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಡೋರ್‌ ಏಕಾಏಕಿ ಓಪನ್‌ ಆಗಿದ್ದು, ವಿದ್ಯಾರ್ಥಿನಿಯರಿಬ್ಬರು ರಸ್ತೆಗೆ ಬಿದ್ದಿದ್ದಾರೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ರೈತರಿಗೆ ಮತ್ತೆ ಶಾಕ್‌ ಕೊಟ್ಟ ವರುಣ! – ಇನ್ನೆರಡು ದಿನ ಭಾರಿ ಮಳೆ.. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!  

ಈ ಬೆಚ್ಚಿಬೀಳಿಸುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಇಬ್ಬರು ವಿದ್ಯಾರ್ಥಿನಿಯರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಏನಿದು ಘಟನೆ?

ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಗೇರುಕಟ್ಟೆ ಎಂಬಲ್ಲಿ ಅಕ್ಕ-ತಂಗಿ ಹತ್ತಿದ್ದರು. ಬಸ್ ಕಳಿಯ ಗ್ರಾಮದ ರೇಷ್ಮೆರೋಡ್ ಎಂಬಲ್ಲಿನ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ, ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡಿದೆ. ಈ ವೇಳೆ ಬಾಗಿಲ ಬಳಿಯೇ ನಿಂತಿದ್ದ ಅಕ್ಕ ಮೊದಲು ರಸ್ತೆಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋದ ತಂಗಿ ಕೂಡ ನಿಯಂತ್ರಣ ತಪ್ಪಿ ಬಸ್ಸಿನಿಂದ ಹೊರಕ್ಕೆ ಬಿದ್ದಿದ್ದಾಳೆ. ಈ ಇಡೀ ದೃಶ್ಯವು ರಸ್ತೆಯ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುವವರ ಎದೆ ನಡುಗಿಸುವಂತಿದೆ. ಬಿದ್ದ ತಕ್ಷಣ ಸ್ಥಳೀಯರು ಓಡಿ ಬಂದು ವಿದ್ಯಾರ್ಥಿನಿಯರನ್ನು ರಕ್ಷಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ಸಿನ ನಿರ್ವಹಣೆ ಮತ್ತು ಚಾಲಕನ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shwetha M