ಚಂದ್ರಯಾನ -3 ಗೆ ಯಶಸ್ಸು – ಇಬ್ಬರು ಮಕ್ಕಳಿಗೆ ʼವಿಕ್ರಮ್, ಪ್ರಗ್ಯಾನ್ʼ ಎಂದು ಹೆಸರಿಟ್ಟ ಕುಟುಂಬ
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಚಂದ್ರಯಾನ – 3 ಯಶಸ್ವಿಯಾಗಿದೆ. ದೇಶ ವಿದೇಶಗಳಿಂದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು ಮಹಾಪೂರ ಹರಿದುಬರುತ್ತಿದೆ. ಚಂದ್ರಯಾನ – 3 ಆಗಸ್ಟ್ 23 ರಂದು ಸಂಜೆ 6.4 ನಿಮಿಷಕ್ಕೆ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗಿದೆ. ನಾಡಿನ ಹಲವು ಆಸ್ಪತ್ರೆಗಳಲ್ಲಿ ಹುಟ್ಟಿದ ನವಜಾತ ಶಿಶುಗಳಿಗೆ ಯಶಸ್ವಿ ಚಂದ್ರಯಾನ 3 ಯೋಜನೆಯ ಜಾತಕವನ್ನು ಆಧಾರವಾಗಿಟ್ಟುಕೊಂಡು ನಾಮಕರಣ ಮಾಡಲಾಗುತ್ತಿದೆ. ಇದೀಗ ಇಲ್ಲೊಂದು ಕುಟುಂಬ ಚಂದ್ರಯಾನ 3 ಯಶಸ್ಸಿನ ಸ್ಮರಣಾರ್ಥವಾಗಿ ಇಬ್ಬರು ಮಕ್ಕಳಿಗೆ ವಿಕ್ರಮ್ ಹಾಗೂ ಪ್ರಗ್ಯಾನ್ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: ರಾಖಿ ಕಟ್ಟಲು ಅಣ್ಣ ಬೇಕೆಂದು ಮಗಳ ಹಠ.. ಗಂಡು ಮಗುವನ್ನೇ ಕಿಡ್ನ್ಯಾಪ್ ಮಾಡಿದ್ರು ಈ ಖತರ್ನಾಕ್ ದಂಪತಿ!
ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಒಂದೇ ಕುಟುಂಬದ ಇಬ್ಬರು ಮಕ್ಕಳಿಗೆ ವಿಕ್ರಮ್ ಮತ್ತು ಪ್ರಗ್ಯಾನ್ ಎಂದು ಹೆಸರಿಟ್ಟು ದೇಶಕ್ಕೆ, ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಒಂದೇ ಕುಟುಂಬದಲ್ಲಿ ಈಚೆಗೆ ಇಬ್ಬರು ಮಕ್ಕಳು ಜನಿಸಿದ್ದರು. ಬಾಲಪ್ಪ ಹಾಗೂ ನಾಗಮ್ಮ ದಂಪತಿಯ ಮಗುವಿಗೆ ವಿಕ್ರಮ್ ಎಂದು ಹೆಸರಿಡಲಾಗಿದೆ. ಅಲ್ಲದೇ ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್ ಎಂದು ನಾಮಕರಣ ಮಾಡಲಾಗಿದೆ.
ವಿಕ್ರಮ್ ಹೆಸರಿನ ಮಗು ಜನಿಸಿದ್ದು ಜುಲೈ 28 ರಂದು ಹಾಗೂ ಪ್ರಗ್ಯಾನ್ ಹೆಸರಿನ ಮಗು ಜನಿಸಿದ್ದು ಆಗಸ್ಟ್ 18 ರಂದು. ಆಗಸ್ಟ್ 24 ರಂದು (ಇಸ್ರೋದ ಚಂದ್ರಯಾನ-3 ಸಕ್ಸಸ್ ಆದ ಮಾರನೇ ದಿನ) ಕುಟುಂಬಸ್ಥರು ಎರಡು ಮಕ್ಕಳ ನಾಮಕರಣ ಮಾಡಿದ್ದಾರೆ. ಆ ಮೂಲಕ ಚಂದ್ರಯಾನ-3 ಯಶಸ್ವಿಗೊಳಿಸಿದ ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ.