ಟ್ವಿಟ್ಟರ್ನಲ್ಲಿ ಅಕ್ಷರ ಮಿತಿ ಹೆಚ್ಚಳ – ಎಲಾನ್ ಮಸ್ಕ್ ಹೇಳಿದ್ದೇನು?
ಟ್ವಿಟ್ಟಾರಾಧಿಪತಿ ಎಲಾನ್ ಮಸ್ಕ್ ಟ್ವಿಟ್ಟರ್ನಲ್ಲಿ ಹೊಸ ಬದಲಾವಣೆ ತರಲು ನಿರ್ಧರಿಸಿದ್ದಾರೆ. ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟ್ಟರ್ನಲ್ಲಿ ಅಕ್ಷರಗಳ ಮಿತಿಯನ್ನು 280 ರಿಂದ 4 ಸಾವಿರ ಪದಗಳಿಗೆ ಹೆಚ್ಚಿಸಲಾಗುತ್ತದೆ ಎಂದು ಮಸ್ಕ್ ಖಚಿತ ಪಡಿಸಿದ್ದಾರೆ.
ಇಂದು ಎಲಾನ್ ಮಸ್ಕ್, ಬಳಕೆದಾರರಲ್ಲಿ ತಮ್ಮ ಬಳಿ ಯಾವ ಪ್ರಶ್ನೆಗಳನ್ನು ಬೇಕಾದರೂ ಕೇಳಬಹುದು ಎಂದು ಹೇಳಿದ್ದರು. ಈ ವೇಳೆ ಟ್ವಿಟ್ಟರ್ 280 ಅಕ್ಷರಳಿಂದ 4,000 ಕ್ಕೆ ಹೆಚ್ಚಿಸಲು ನಿರ್ಧರಿಸಿರುವುದು ನಿಜವೇ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಮಸ್ಕ್ ಹೌದು ಎಂದಿದ್ದಾರೆ.
ಇದನ್ನೂ ಓದಿ: ಮಕ್ಕಳಿಂದ ಮೊಬೈಲ್ ದೂರವಿರಿಸಲು ಪೋಷಕರಿಂದ ಲಿಖಿತ ಆಶ್ವಾಸನೆ -ಶಾಲೆಗಳ ಕ್ರಮಕ್ಕೆ ಉತ್ತಮ ಸ್ಪಂದನೆ
ಆದರೆ ಟ್ವೀಟ್ ಅಕ್ಷರ ಮಿತಿಯನ್ನು ಹೆಚ್ಚಿಸುವ ವಿಚಾರಕ್ಕೆ ಬಳಕೆದಾರದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಿರುವ ಟ್ವೀಟ್ನ ಅಕ್ಷರಮಿತಿ ಸರಿಯಾಗಿದೆ. ಟ್ವೀಟ್ ಎನ್ನುವುದಕ್ಕೆ ಪೂರಕವಾಗಿ 280 ಅಕ್ಷರಗಳು ಸರಿಯಾಗಿದೆ. 280 ರಿಂದ 4000ಕ್ಕೆ ಹೆಚ್ಚಿಸುವುದು ದೊಡ್ಡ ಸಮಸ್ಯೆಯಾಗುತ್ತದೆ. ಟ್ವಿಟ್ಟರ್ ತ್ವರಿತವಾಗಿ ಸುದ್ದಿ ನೀಡುವುದು. ಒಂದು ವೇಳೆ ಅಕ್ಷರಗಳ ಮಿತಿಯನ್ನು ಹೆಚ್ಚಿಸಿದರೆ ನೈಜ ಮಾಹಿತಿ ಕಳೆದುಹೋಗುತ್ತದೆ. ಅಲ್ಲದೇ ಇದು ಟ್ವೀಟ್ ಆಗುವುದಿಲ್ಲ, ಟಿಪ್ಪಣಿಯಾಗುತ್ತದೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.