ಸೆಲೆಬ್ರಿಟಿಗಳ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ಮಾಯ – ಕಾರಣವೇನು ಗೊತ್ತಾ?
ವಿಶ್ವದ ಬಿಲಿಯನೇರ್ಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿ ಮಾಡಿದಾಗಿಂದಲೂ ಅಪ್ಲಿಕೇಶನ್ನಲ್ಲಿ ಒಂದಲ್ಲ ಒಂದು ಬದಲಾವಣೆಗಳು ಆಗುತ್ತಲೇ ಇದೆ. ಇದೀಗ ಅದರಲ್ಲಿ ಒಂದು ಬದಲಾವಣೆ ಎಂದರೆ ಅದು ಬ್ಲೂಟಿಕ್ ಸೇವೆಯನ್ನು ಪ್ರಿಮಿಯಮ್ ಮಾಡುವುದು. ಇದೀಗ ಬ್ಲೂಟಿಕ್ ಸೇವೆಯನ್ನು ಪಡೆಯಲು ಶುಲ್ಕ ಪಾವತಿಸದ ಸೆಲೆಬ್ರಿಟಿಗಳ ಖಾತೆಯಿಂದ ಟ್ವಿಟರ್ ಬ್ಲೂಟಿಕ್ ತೆಗೆದುಹಾಕಿದೆ.
ಇದನ್ನೂ ಓದಿ:ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಪೋಟಗೊಂಡ ಸ್ಪೇಸ್ ಎಕ್ಸ್ ರಾಕೆಟ್
ಹಣ ಪಾವತಿ ಮಾಡದ ಬಹುತೇಕ ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳ ಟ್ವಿಟರ್ ಖಾತೆಯ ಬ್ಲೂಟಿಕ್ ಗುರುವಾರವೇ ಮಾಯವಾಗಿದೆ. ಸ್ಯಾಂಡಲ್ ವುಡ್ ನ ಯಶ್, ಸುದೀಪ್, ರಮ್ಯಾ, ರಾಹುಲ್ ಗಾಂಧಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟ ಶಾರುಖ್ ಖಾನ್ ಸೇರಿದಂತೆ ಉದ್ಯಮಿಗಳಾದ ರತನ್ ಟಾಟಾ, ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಮತ್ತು ಗೌತಮ್ ಅದಾನಿ ಅವರ ಬ್ಲೂಟಿಕ್ ನ್ನು ಸಹ ಟ್ವಿಟರ್ ತೆಗೆದು ಹಾಕಿದೆ. ಸತೀಶ್ ನೀನಾಸಂ ಸೇರಿದಂತೆ ಬೆರಳೆಣಿಕೆಯ ಕಲಾವಿದರ ಬ್ಲೂಟಿಕ್ ಉಳಿದುಕೊಂಡಿದೆ.
ಟ್ವಿಟರ್ ಖಾತೆಯಲ್ಲಿನ ಬ್ಲೂಟಿಕ್ ಮಾಯವಾಗಿದ್ದನ್ನು ನೋಡಿದ ಕೆಲ ಸೆಲೆಬ್ರಿಟಿಗಳು ಗೊಂದಲವಾಗಿದ್ದಾರೆ. ನಟಿ ಖುಷ್ಬು ಸುಂದರ್ ‘ ನನ್ನ ಖಾತೆ ಸಕ್ರಿಯವಾಗಿದ್ರೂ ಬ್ಲೂಟಿಕ್ ಯಾಕೆ ಹೋಗಿದೆ’ ಅಂತಾ ಪ್ರಶ್ನೆ ಮಾಡಿದ್ದಾರೆ. ಬಹುಬಾಷಾ ನಟ ಪ್ರಕಾಶ್ ರಾಜ್ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದು, ‘ಬೈ ಬೈ ಬ್ಲೂಟಿಕ್’ ಅಂತಾ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲ ಸಮಯದ ಹಿಂದೆ ಇನ್ನು ಮುಂದೆ ಬ್ಯೂಟಿಕ್ ಇರುವವರು ತಿಂಗಳಿಗೆ ಇಂತಿಷ್ಟು ಪಾವತಿಸಬೇಕು ಅಂತಾ ಟ್ವಿಟರ್ ನಿಯಮವನ್ನು ಜಾರಿಗೆ ತಂದಿತ್ತು. ಇದೀಗ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಹೊರಟಿದ್ದು, ಶುಲ್ಕ ಪಾವತಿಸದ ಅನೇಕ ನಟ ನಟಿಯರ, ಗಣ್ಯ ವ್ಯಕ್ತಿಗಳ ಖಾತೆಗಳ ಬ್ಲೂಟಿಕ್ ತೆಗೆದಿದೆ. ಇಷ್ಟು ದಿನ ಬ್ಲೂಟಿಕ್ ಬಳಕೆದಾರರಿಗಿದ್ದ ವಿಶೇಷ ಟ್ವಿಟರ್ ಫೀಚರ್ಸ್ ಗಳು ಬ್ಲೂಟಿಕ್ ಕಳೆದುಕೊಂಡವರಿಗೆ ಲಭ್ಯವಾಗುವುದಿಲ್ಲ. ಟ್ವಿಟರ್ ನಲ್ಲಿ ಪ್ರೀಮಿಯಮ್ ಸಬ್‌ಸ್ಕ್ರಿಪ್ಶನ್ ಬ್ಲೂಟಿಕ್ ಸೇವೆಯನ್ನು ಹೊಂದಿರುವವರಿಗೆ ಅಕ್ಷರ ಮಿತಿ ಹಾಗೂ 60 ನಿಮಿಷದವರೆಗಿನ ವಿಡಿಯೋ ಆಪ್ಲೋಡ್ ಮಾಡುವ ಸೇವೆಯೂ ಲಭ್ಯವಿದೆ. ಭಾರತದಲ್ಲಿ ಬ್ಲ್ಯೂ ಟಿಕ್ ಸೇವೆಗೆ ತಿಂಗಳಿಗೆ ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ 900 ರೂ.ವಿದೆ. ಇನ್ನು ವೆಬ್ ಬಳಕೆದಾರರಿಗೆ 650 ರೂ. ಇದೆ.