ಹಾರಿ ಹೋಗಲಿದೆ ಟ್ವಿಟರ್‌ ಹಕ್ಕಿ! – ಟ್ವಿಟರ್‌ ಗೆ ಹೊಸ ಲೋಗೊ, ಹೊಸ ಹೆಸರು?

ಹಾರಿ ಹೋಗಲಿದೆ ಟ್ವಿಟರ್‌ ಹಕ್ಕಿ! – ಟ್ವಿಟರ್‌ ಗೆ ಹೊಸ ಲೋಗೊ, ಹೊಸ ಹೆಸರು?

ಸ್ಯಾನ್ಫ್ರಾನ್ಸಿಸ್ಕೋ: ಜಗತ್ತಿನ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟ್ವೀಟರ್‌ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಪದೇ ಪದೇ ಮಾಡಲಾಗುತ್ತಿದೆ. ಟ್ವಿಟರ್‌ ನಲ್ಲಿ ಬ್ಲ್ಯೂ ಟಿಕ್ ಪಡೆಯಲು ಹಣ ಪಾವತಿಸುವಂತೆ ಹೇಳಿ ಬಳಕೆದಾರರಿಗೆ ಶಾಕ್ ನೀಡಿದ್ದ ಟೆಕ್ ಬಿಲಿಯನೇರ್ ಮತ್ತು ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಅವರು, ಇದೀಗ ಬಳಕೆದಾರರಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

ಟ್ವಿಟರ್‌ನ ಹೆಸರು ಹಾಗೂ ಲಾಂಛನ ಸದ್ಯದಲ್ಲೇ ಬದಲಾಗುವ ಸಾಧ್ಯತೆ ಇದೆ. ಈ ಕುರಿತು ಆ ಕಂಪನಿಯ ಮಾಲೀಕ ಹಾಗೂ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಅವರೇ ಸ್ಪಷ್ಟ ಸುಳಿವು ನೀಡಿದ್ದಾರೆ. ಶೀಘ್ರದಲ್ಲೇ ಟ್ವಿಟರ್‌ ಬ್ರ್ಯಾಂಡ್‌, ಬಳಿಕ ಹಂತಹಂತವಾಗಿ ಎಲ್ಲ ಹಕ್ಕಿಗಳಿಗೂ ವಿದಾಯ ಹೇಳುತ್ತೇವೆ ಎಂದು ಮಸ್ಕ್‌ ಅವರು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಶ್ರೀಮಂತ ಉದ್ಯಮಿಗಳ ಮಧ್ಯೆ ಹೊಸ ರೇಸ್! – ಟ್ವಿಟರ್‌ಗೆ ಟಕ್ಕರ್‌ ಕೊಡಲು ಮೆಟಾದಿಂದ ʼಥ್ರೆಡ್ಸ್ʼ ಬಿಡುಗಡೆ

ತಮ್ಮ ಕನಸಿನ ‘ಎಕ್ಸ್’ ಆ್ಯಪ್ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಈ ಆ್ಯಪ್ ಜನರು ತಮ್ಮ ಅನಿಸಿಕೆಗಳನ್ನು ಜಗತ್ತಿನ ಜೊತೆ ಹಂಚಿಕೊಳ್ಳಲು ಇರುವ ವೇದಿಕೆಗಳಿಗಿಂತಲೂ ವಿಭಿನ್ನ ಹಾಗೂ ದೊಡ್ಡದು ಎಂದು ಎಂದು ಹೇಳಿದ್ದಾರೆ. ಸಾಕಷ್ಟು ಉತ್ತಮ ಎನ್ನಬಹುದಾದ ‍X ಲೋಗೋ ದೊರೆತರೆ, ನಾಳೆಯೇ ನಾವು ಜಗತ್ತಿನಾದ್ಯಂತ ಲೈವ್ ಹೋಗಲಿದ್ದೇವೆ” ಎಂದು ಎಕ್ಸ್‌ ಆ್ಯಪ್ ಶೀಘ್ರವೇ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಮಸ್ಕ್ ಅವರು ಟ್ವೀಟರ್‌ ಎಂಬ ಬ್ರ್ಯಾಂಡ್‌ನೇಮ್‌ ಅನ್ನು ಬದಲಿಸಬಹುದು, ಟ್ವಿಟರ್‌ನ ಹೆಗ್ಗುರುತಾಗಿರುವ ನೀಲಿ ಹಕ್ಕಿಗಳ ಬದಲಿಗೆ ಹೊಸ ಲಾಂಛನ ಬಿಡುಗಡೆ ಮಾಡಬಹುದು. ಆದರೆ ಟ್ವಿಟರ್‌ ಕಾರ್ಯನಿರ್ವಹಣೆ ಈಗಿನಂತೆಯೇ ಇರಬಹುದು ಎಂದು ಹೇಳಲಾಗುತ್ತಿದೆ.

2022ರ ಅಕ್ಟೋಬರ್‌ನಲ್ಲಿ ಟ್ವಿಟರ್‌ ಕಂಪನಿಯನ್ನು ಖರೀದಿಸಿದ ಬಳಿಕ ಹಲವಾರು ಬದಲಾವಣೆಗಳನ್ನು ಮಸ್ಕ್ ಅವರು ತಂದಿದ್ದಾರೆ. ಈ ಪೈಕಿ ಬಹುತೇಕ ರೂಪಾಂತರಗಳು ವಿವಾದದ ಅಲೆ ಎಬ್ಬಿಸಿದ್ದೂ ಉಂಟು. ಅಲ್ಪಾವಧಿಗೆ ಟ್ವಿಟರ್‌ ಲೋಗೋದಲ್ಲಿ ಹಕ್ಕಿಗಳ ಬದಲಾಗಿ ನಾಯಿಯ ಚಿತ್ರವನ್ನೂ ಅವರು ಅಳವಡಿಸಿ ಟೀಕೆ ಎದುರಿಸಿದ್ದರು. ಮಸ್ಕ್ ತೆಕ್ಕೆಗೆ ಬರುವ ಮುನ್ನ ಟ್ವಿಟರ್‌ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಯಾಗಿತ್ತು. ಆದರೆ ಈಗ ಅದು ಮಸ್ಕ್‌ ಅವರು ಅಧ್ಯಕ್ಷರಾಗಿರುವ ಎಕ್ಸ್‌ ಕಾಪರ್‌ ಅಡಿ ಇರುವ ಒಂದು ಅಂಗಸಂಸ್ಥೆಯಾಗಿದೆ. ಎಕ್ಸ್‌ ಕಾಪರ್ ದೂರದೃಷ್ಟಿಗೆ ಅನುಗುಣವಾಗಿ ಟ್ವಿಟರ್‌ನ ಹೊಸ ಲೋಗೋ ಇರುವ ಸಾಧ್ಯತೆ ಇದೆ.

suddiyaana