ಕಲುಷಿತ ನೀರು ಸೇವಿಸಿ ಇಬ್ಬರು ಸಾವು ಪ್ರಕರಣಕ್ಕೆ ಟ್ವಿಸ್ಟ್ – ಪೋಕ್ಸೋ ಕೇಸ್ ಹಾಕಿದ್ದಕ್ಕೆ ಟ್ಯಾಂಕ್ ಗೆ ವಿಷ ಬೆರೆಸಿದ್ರಾ?

ಕಲುಷಿತ ನೀರು ಸೇವಿಸಿ ಇಬ್ಬರು ಸಾವು ಪ್ರಕರಣಕ್ಕೆ ಟ್ವಿಸ್ಟ್ – ಪೋಕ್ಸೋ ಕೇಸ್ ಹಾಕಿದ್ದಕ್ಕೆ ಟ್ಯಾಂಕ್ ಗೆ ವಿಷ ಬೆರೆಸಿದ್ರಾ?

ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದು, 48ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೋಕ್ಸೊ ಕೇಸ್​ ದಾಖಲಿಸಿದ ದ್ವೇಷಕ್ಕೆ ವಿಷ ಹಾಕಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.

ಚಿತ್ರದುರ್ಗದ (Chitradurga) ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು (contaminated water) ಸೇವಿಸಿ ಇಬ್ಬರು ಮೃತಪಟ್ಟಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ನೀರು ಕಲುಷಿತವಾಗಿಲ್ಲ. ಯಾರೋ ಬೇಕಂತಲೇ ನೀರಿಗೆ ವಿಷ ಹಾಕಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಳೆದ ವರ್ಷ ದಲಿತ ಯುವಕನನೋರ್ವನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿರುವ ದ್ವೇಷಕ್ಕೆ ನೀರಿನ ಟ್ಯಾಂಕ್​ಗೆ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ನೀರುಗಂಟೆಯೇ(ನೀರು ಬಿಡುವ ವ್ಯಕ್ತಿ) ಟ್ಯಾಂಕ್​ನಲ್ಲಿ ವಿಷ ಹಾಕಿದ್ದಾನೆ ಎಂದು ಮೃತ ಮಂಜುಳಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ – 50 ದಿನಗಳಲ್ಲಿ 30 ಕೋ. ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ.. 700 ಕೋ. ಟಿಕೆಟ್‌ ಮೊತ್ತ!

ನೀರಗಂಟಿ ಸುರೇಶ್ ಎಂಬಾತನೇ ವಾಟರ್ ಟ್ಯಾಂಕ್ ನಲ್ಲಿ ವಿಷ ಬೆರೆಸಿದ್ದಾನೆಂದು ಮೃತ ಮಂಜುಳಾ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದು, ದ್ವೇಷದಿಂದ ನೀರಿನ ಟ್ಯಾಂಕಿನಲ್ಲಿ ವಿಷ ಬೆರೆಸಲಾಗಿದೆ. ಹೀಗಾಗಿ ನೀರಗಂಟಿನನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇನ್ನು ಮೃತ ಮಂಜುಳಾ ಪತಿ ಆಂಜನೇಯ ಸಹ ಆಕ್ರೋಶಗೊಂಡಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಸೂಕ್ತ ಪರಿಹಾರ ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇನ್ನು ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟಿದ್ದು, 48ಜನ ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ನೀರು ಶುದ್ಧೀಕರಣ ಘಟಕದ ಗ್ಲಾಸ್​ ಹೊಡೆದು ಆಕ್ರೋಶ ಹೊರಹಾಕಿದ್ದಾರೆ.

ಕವಾಡಿಗರಹಟ್ಟಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ಕವಾಡಿಗರಹಟ್ಟಿಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದೇವೆ. ಕುಡಿಯುವ ನೀರು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ಕವಾಡಿಗರಹಟ್ಟಿಯಲ್ಲಿ ತಾತ್ಕಾಲಿಕವಾಗಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಮಂಜುಳಾ ಸಾವಿನ ಕಾರಣ ಏನೆಂಬುದು ಪರೀಕ್ಷೆ ಬಳಿಕ ತಿಳಿಯಲಿದೆ ಎಂದರು. ಹಾಗೂ ಇದೇ ವೇಳೆ ಕುಡಿಯುವ ನೀರು ಸರಬರಾಜು ಟ್ಯಾಂಕ್ ಗೆ ವಿಷಪ್ರಾಶನ ಶಂಕೆ ಇರುವ ವಿಚಾರಕ್ಕೆ ನೀರಿನ ಪರೀಕ್ಷಾ ವರದಿ ಬಳಿಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತೆ ಎಂದಿದ್ದಾರೆ. ಇದೀಗ ಚಿತ್ರದುರ್ಗ ನಗರಸಭೆ ಸಿಬ್ಬಂದಿ, ಲ್ಯಾಬ್ ಟೆಸ್ಟ್​ಗೆ ಕಳಿಸಲು ಟ್ಯಾಂಕ್​ನ ನೀರು ಸಂಗ್ರಹಿಸಿದ್ದು, ಕಲುಷಿತ ನೀರು ಪ್ರಕರಣಕ್ಕೆ ಈ ಹಿಂದಿನ ಪೋಕ್ಸೋ ಕೇಸ್ ತಳಕು ಹಾಕಿಕೊಂಡಿದೆಯಾ? ನೀರುಗಂಟೆ ನೀರಿಗೆ ವಿಷ ಹಾಕಿದ್ದಾನಾ? ಈ ಎಲ್ಲಾ ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ಸಹ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.

suddiyaana