2 ಕ್ಷೇತ್ರಗಳಿಂದ ನಟ ದಳಪತಿ ವಿಜಯ್ ಸ್ಪರ್ಧೆ! – ಕಾರು ಡ್ರೈವರ್ ಮಗನಿಗೂ MLA ಟಿಕೆಟ್!

ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಕಣ ಈಗ ಅಧಿಕೃತವಾಗಿ ಕಳೆಗಟ್ಟಿದೆ. ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಧಿಕೃತವಾಗಿ ಕಣಕ್ಕಿಳಿದಿದೆ. ಪಕ್ಷದ ಸಂಸ್ಥಾಪಕ ಮತ್ತು ನಟ ದಳಪತಿ ವಿಜಯ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ರಾಜಕೀಯ ವಿರೋಧಿಗಳಿಗೆ ಪ್ರಬಲ ಸಂದೇಶ ರವಾನಿಸಿದ್ದಾರೆ. ಸ್ವತಃ ವಿಜಯ್ ಅವರು ಈ ಬಾರಿ ಭದ್ರಕೋಟೆ ಎನ್ನಲಾದ ಎರಡು ಪ್ರಮುಖ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ರಾಜ್ಯದ ಜನರಿಗೆ ಬಿಗ್ ಶಾಕ್! – ಲೀಟರ್ ಪೆಟ್ರೋಲ್ ಬೆಲೆ 6 ರೂ., ಡೀಸೆಲ್ 7 ರೂ. ಹೆಚ್ಚಳ!
ಚೆನ್ನೈನ ನುಂಗಂಬಾಕಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿಜಯ್, ತಮ್ಮ ಪಕ್ಷದ ಎಲ್ಲಾ 234 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪರಿಚಯಿಸುವ ಮೂಲಕ ರಾಜಕೀಯ ವಿರೋಧಿಗಳಿಗೆ ಪ್ರಬಲ ಎಚ್ಚರಿಕೆ ನೀಡಿದ್ದಾರೆ. ಈ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದು ವಿಜಯ್ ಅವರ ಸರಳತೆ ಮತ್ತು ಮಾನವೀಯತೆ. ವಿಜಯ್ ಅವರು ತಮ್ಮ ದಶಕಗಳ ಕಾಲದ ನಂಬಿಕಸ್ಥ ಕಾರು ಡ್ರೈವರ್ ರಾಜೇಂದ್ರನ್ ಪುತ್ರ ಶಬರಿನಾಥನ್ಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಘೋಷಿಸಿದ್ದಾರೆ. ಮಗನಿಗೆ ಟಿಕೆಟ್ ಸಿಕ್ಕ ಸುದ್ದಿ ಕೇಳಿ ವೇದಿಕೆಯಲ್ಲೇ ರಾಜೇಂದ್ರನ್ ಮತ್ತು ಶಬರಿನಾಥನ್ ಕಣ್ಣೀರು ಹಾಕಿದರು. ಈ ವೇಳೆ ವಿಜಯ್ ಅವರು ಶಬರಿನಾಥನ್ ಅವರನ್ನು ತಬ್ಬಿಕೊಂಡು ಸಮಾಧಾನಪಡಿಸಿದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. ನನ್ನ ಜೊತೆಗಿರುವವರ ಏಳಿಗೆಯೇ ನನ್ನ ಗುರಿ ಎಂಬ ಸಂದೇಶವನ್ನು ವಿಜಯ್ ಈ ಮೂಲಕ ರವಾನಿಸಿದ್ದಾರೆ.
ಸ್ವತಃ ವಿಜಯ್ ಅವರು ಈ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಚೆನ್ನೈನ ಪೆರಂಬೂರು ಮತ್ತು ಮಧ್ಯ ತಮಿಳುನಾಡಿನ ತಿರುಚಿ ಈಸ್ಟ್ (ತಿರುಚಿ ಪೂರ್ವ) ಕ್ಷೇತ್ರಗಳಿಂದ ಕಣಕ್ಕಿಳಿಯುವ ಮೂಲಕ ಅವರು ಇಡೀ ರಾಜ್ಯದ ಮೇಲೆ ಹಿಡಿತ ಸಾಧಿಸಲು ತಂತ್ರ ರೂಪಿಸಿದ್ದಾರೆ.
ಅಭ್ಯರ್ಥಿಗಳನ್ನು ಘೋಷಿಸಿದ ಬಳಿಕ ಮಾತನಾಡಿದ ವಿಜಯ್, ಈ ಹೋರಾಟವು ನಮ್ಮ ಜನರ ಮೈತ್ರಿ ಹಾಗೂ ಸ್ಟಾಲಿನ್ ಸರ್ ಅವರ ಮೈತ್ರಿ ನಡುವೆ ನಡೆಯಲಿದೆ ಎಂದು ಹೇಳುವ ಮೂಲಕ ನೇರವಾಗಿ ಆಡಳಿತಾರೂಢ ಡಿಎಂಕೆ ವಿರುದ್ಧ ಸಮರ ಸಾರಿದ್ದಾರೆ. ನಾನು ಭ್ರಷ್ಟಾಚಾರ ಮುಕ್ತ ಮತ್ತು ಉತ್ತಮ ಆಡಳಿತ ನೀಡುತ್ತೇನೆ. ನನ್ನ ಅಭ್ಯರ್ಥಿಗಳು ಕೇವಲ ಶಾಸಕರಲ್ಲ, ಅವರು ಜನರ ರಕ್ಷಕರು ಎಂದು ವಿಜಯ್ ಘೋಷಿಸಿದರು.

ನೋಡಿರಿ

