ರಾಜಧಾನಿಯಲ್ಲಿ ನಿರ್ಮಾಣಗೊಳ್ಳಲಿದೆ ಸುರಂಗ ಮಾರ್ಗ – ಕಿ.ಮೀ.ಗೆ 450 ಕೋಟಿ ರೂ. ವೆಚ್ಚ!  

ರಾಜಧಾನಿಯಲ್ಲಿ ನಿರ್ಮಾಣಗೊಳ್ಳಲಿದೆ ಸುರಂಗ ಮಾರ್ಗ – ಕಿ.ಮೀ.ಗೆ 450 ಕೋಟಿ ರೂ. ವೆಚ್ಚ!  

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಕಿರಿಕಿರಿಯಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಸರ್ಕಾರ ಕೂಡ ವಾಹನ ದಟ್ಟಣೆ ತಗ್ಗಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ವಾಹನ ದಟ್ಟಣೆ ಕಡಿಮೆ ಮಾಡಲು ನಗರದಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಿಸಿದೆ. ಇದೀಗ ರಾಜಧಾನಿಗೆ ಪ್ರವೇಶ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ತಗ್ಗಿಸಲು ತೀರ್ಮಾನಿಸಿರುವ ರಾಜ್ಯ ಸರಕಾರವು ಸುರಂಗ ರಸ್ತೆಗಳನ್ನು ನಿರ್ಮಿಸಲು ಮುಂದಡಿ ಇಟ್ಟಿದೆ.

ಬೆಂಗಳೂರಿನಲ್ಲಿ ವಾಹನ ದಟ್ಟನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದೀಗ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಬೆಂಗಳೂರಿನಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸಲು ಚಿಂತನೆ ನಡೆಸಿದ್ದು, ಈ ಸುರಂಗ ರಸ್ತೆಗಳ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿಕೊಡಲು ಹಲವು ಸಂಸ್ಥೆಗಳು ಒಲವು ತೋರಿವೆ!

ನಗರದ 12 ಹೈಡೆನ್ಸಿಟಿ ಕಾರಿಡಾರ್‌ಗಳ (ಅತಿ ದಟ್ಟಣೆ ರಸ್ತೆಗಳು) ಪೈಕಿ ಕೆಲವೊಂದು ರಸ್ತೆಗಳಲ್ಲಿ ಸುರಂಗ ನಿರ್ಮಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 65 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಿಸಲು ಚಿಂತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಪಿಆರ್‌ ಸಿದ್ಧಪಡಿಸಿಕೊಡಲು ದೇಶ-ವಿದೇಶಗಳ ಸಂಸ್ಥೆಗಳನ್ನು ಕೋರಲಾಗಿತ್ತು. ದಿ ಅರ್ಬನ್‌ ಲ್ಯಾಬ್‌, ಸ್ಮೆಕ್‌ ಇಂಡಿಯಾ ಪ್ರೈ.ಲಿ., ದಿ ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ ಇಂಡಿಯಾ ಪ್ರೈ.ಲಿ., ಐಬಿಐ ಗ್ರೂಪ್‌ ಇಂಡಿಯಾ ಪ್ರೈ.ಲಿ. ಆ್ಯಂಡ್‌ ಇನ್ಫ್ರಾ ಸಪೋರ್ಟ್‌ ಎಂಜಿನಿಯರಿಂಗ್‌ ಕನ್ಸಲ್ಟೆಂಟ್ಸ್‌ ಪ್ರೈ.ಲಿ., ರೋಡಿಕ್‌ ಕನ್ಸಲ್ಟೆಂಟ್ಸ್‌ ಪ್ರೈ.ಲಿ. ಸೇರಿದಂತೆ 10 ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿದ್ದು, ಇದರಲ್ಲಿ 8 ಸಂಸ್ಥೆಗಳು ಅರ್ಹತೆ ಪಡೆದಿವೆ ವರದಿಯಾಗಿದೆ.

ಇದನ್ನೂ ಓದಿ: ಸೊಪ್ಪು ಎಂದು ಗಾಂಜಾ ತಿಂದ ಕುರಿಗಳ ಹಿಂಡು! – 100 ಕೆಜಿ ಗಾಂಜಾ ಸ್ವಾಹ!

ಕಿ.ಮೀ.ಗೆ 450 ಕೋಟಿ ರೂ. ವೆಚ್ಚ!

ಸುರಂಗ ರಸ್ತೆಗಳನ್ನು ಈಗಾಗಲೇ ದೇಶ-ವಿದೇಶಗಳಲ್ಲಿ ನಿರ್ಮಿಸಲಾಗಿದೆ. ಅದೇ ಮಾದರಿಯಲ್ಲಿ ಐಟಿ-ಬಿಟಿ ಸಿಟಿ ಬೆಂಗಳೂರಿನಲ್ಲೂ ಸುರಂಗ ರಸ್ತೆ ನಿರ್ಮಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಸಕ್ತಿ ತೋರಿದ್ದಾರೆ. ಸುರಂಗ ರಸ್ತೆ ನಿರ್ಮಾಣ ಸಲಹಾ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಸಮಾಲೋಚನೆ ನಡೆಸಿದ್ದಾರೆ. ಈ ಸಂಸ್ಥೆಗಳು ಸುರಂಗ ರಸ್ತೆ ನಿರ್ಮಿಸುವ ಸಾಧ್ಯತೆಗಳ ಕುರಿತು ಸಲಹೆ ನೀಡಿದ್ದಾರೆ.

ಸುಮಾರು 50 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ 100 ಕಿ.ಮೀ. ಉದ್ದದ ಸುರಂಗ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಮೊದಲ ಹಂತದಲ್ಲಿ65 ಕಿ.ಮೀ. ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರತಿ ಕಿ.ಮೀ. ಸುರಂಗ ಮಾರ್ಗ ನಿರ್ಮಾಣಕ್ಕೆ 450 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

ಬಿಬಿಎಂಪಿಯು ಸುರಂಗ ರಸ್ತೆ ನಿರ್ಮಾಣ ಸಂಬಂಧ ಡಿಪಿಆರ್‌ ಸಿದ್ಧಪಡಿಸಿಕೊಡಲು ಟೆಂಡರ್‌ ಆಹ್ವಾನಿಸಲಿದೆ. ಕಾರ್ಯಸಾಧ್ಯತಾ ವರದಿ ಮತ್ತು ಡಿಪಿಆರ್‌ ತಯಾರಿಕೆಗೆ ಕಡಿಮೆ ಮೊತ್ತದ ಬಿಡ್‌ ಸಲ್ಲಿಸುವ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತದೆ. ಈ ಸಂಸ್ಥೆಯು ಹೈಡೆನ್ಸಿಟಿ ಕಾರಿಡಾರ್‌ಗಳ ಪೈಕಿ ಯಾವ್ಯಾವ ರಸ್ತೆಗಳು ಸುರಂಗ, ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ ನಿರ್ಮಾಣಕ್ಕೆ ಸೂಕ್ತ ಎಂಬುದರ ಕುರಿತು ಅಧ್ಯಯನ ನಡೆಸಿ ವರದಿ ನೀಡಲಿದೆ. ಜತೆಗೆ ವಾಹನ ದಟ್ಟಣೆ, ಸುರಂಗ ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚ, ಭೂಸ್ವಾಧೀನ ಸೇರಿದಂತೆ ಅಗತ್ಯ ವಿವರವನ್ನು ಒದಗಿಸಲಿದೆ. ಆನಂತರ ಡಿಪಿಆರ್‌ ಆಧರಿಸಿ, ಕೆಲವೊಂದು ರಸ್ತೆಗಳಲ್ಲಿ ಸುರಂಗ ಮಾರ್ಗ ನಿರ್ಮಿಸಲು ತೀರ್ಮಾನಿಸಲಾಗಿದೆ.

ಮೊದಲ ಹಂತದಲ್ಲಿ 65 ಕಿ.ಮೀ. ಉದ್ದದ ಸುರಂಗ ರಸ್ತೆ!

ಮೊದಲ ಹಂತದಲ್ಲಿ ಸುಮಾರು 65 ಕಿ.ಮೀ. ಉದ್ದದ ಸುರಂಗ ಮಾತ್ರ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ. ನಿರ್ಮಾಣ, ನಿರ್ವಹಣೆ, ವರ್ಗಾವಣೆ (ಬಿಒಟಿ-ಟೋಲ್) ಸೇರಿದಂತೆ ಹಲವು ಆಯ್ಕೆಗಳಿವೆ. ಬಿಒಟಿ- ಟೋಲ್‌ ಆಯ್ಕೆಯನ್ನೇ ಬಹುತೇಕ ಅಂತಿಮಗೊಳಿಸುವ ಸಾಧ್ಯತೆ ಇದ್ದು, ನಾಗರಿಕರು ಸುರಂಗ ರಸ್ತೆ ಬಳಸುವಾಗ ಶುಲ್ಕ ಪಾವತಿಸಬೇಕಾಗುತ್ತದೆ. ಇದರಿಂದ ಸರಕಾರಕ್ಕೆ ಆರ್ಥಿಕ ಹೊರೆ ಬೀಳುವುದಿಲ್ಲ. ಖಾಸಗಿಯವರೇ ನಿರ್ಮಾಣ, ನಿರ್ವಹಣೆ ಮಾಡಿ ಶುಲ್ಕ ಸಂಗ್ರಹಿಸಲಿದ್ದಾರೆ.

6 ಪಥಗಳಲ್ಲಿ ಸುರಂಗ ಮಾರ್ಗ!

ಸುರಂಗ ಮಾರ್ಗವನ್ನು 6 ಪಥಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಅಧಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಮತ್ತು ಸುರಕ್ಷತೆ ದೃಷ್ಟಿಯಿಂದ ಏಕಮುಖ ರಸ್ತೆಗಳನ್ನೇ ನಿರ್ಮಿಸಲು ಚಿಂತಿಸಲಾಗಿದೆ. ಲೋಕೋಪಯೋಗಿ ಇಲಾಖೆ ಕೂಡ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆ ಯೋಜನೆಗೆ ಸುಮಾರು 50 ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ ಎಂದು ಹೇಳಿದೆ.

ಎಲ್ಲೆಲ್ಲಿ ಸುರಂಗ ಮಾರ್ಗ?

ಮೇಖ್ರಿ ವೃತ್ತದಿಂದ ಕೇಂದ್ರೀಯ ರೇಷ್ಮೆ ಮಂಡಳಿ, ಕೆ.ಆರ್‌.ಪುರದಿಂದ ಗೊರಗುಂಟೆಪಾಳ್ಯ, ವರ್ತೂರು ಕೋಡಿಯಿಂದ ಜ್ಞಾನಭಾರತಿ, ಹಲಸೂರಿನಿಂದ ಡಿಸೋಜಾ ವೃತ್ತ, ಸೇಂಟ್‌ ಜಾನ್ಸ್‌ ಆಸ್ಪತ್ರೆ ಜಂಕ್ಷನ್‌ನಿಂದ ಅಗರ, ವೀಲರ್ಸ್‌ ರಸ್ತೆ ಜಂಕ್ಷನ್‌ನಿಂದ ಕಲ್ಯಾಣನಗರದತ್ತ ಸುರಂಗ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ.

Shwetha M