ಕೋತಿ ಕಿತಾಪತಿಗೆ ಕಾರು ಶೋರೂಂ ಮೇಲ್ವಿಚಾರಕ ಬಲಿ! – ಆ ಸಂಜೆ ರಸ್ತೆಯಲ್ಲಿ ನಡೆದಿದ್ದೇನು?

ಕೋತಿ ಕಿತಾಪತಿಗೆ ಕಾರು ಶೋರೂಂ ಮೇಲ್ವಿಚಾರಕ ಬಲಿ! – ಆ ಸಂಜೆ ರಸ್ತೆಯಲ್ಲಿ ನಡೆದಿದ್ದೇನು?

ಕೋತಿಯೊಂದು ಮಾಡಿದ ಕಿತಾಪತಿಗೆ ಓರ್ವ ಮೃತಪಟ್ಟಿದ್ದು ನಾಲ್ಕೈದು ಜನ ಅಸ್ವಸ್ಥರಾಗಿರುವ ಘಟನೆ ತುಮಕೂರಿನ ಮಾರುತಿ ನಗರದಲ್ಲಿ ನಡೆದಿದೆ. ಕೋತಿ ಕೀಟಲೆ ಮಾಡಿದ ಹಿನ್ನೆಲೆ ಏಕಾಏಕಿ ಹಲವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ.

ಇದನ್ನೂ ಓದಿ: 9 ಗಲ್ಫ್ ರಾಷ್ಟ್ರಗಳ ಏರ್‌ಸ್ಪೇಸ್ ಪ್ರವೇಶಕ್ಕೆ ನಿರ್ಬಂಧ – ವಿಮಾನಯಾನ ಕಂಪನಿಗಳಿಗೆ DGCA ಸೂಚನೆ

ಕಾರು ಶೋರೂಂ ಮೇಲ್ವಿಚಾರಕರಾಗಿದ್ದ ವಿಜಯ್ ಪ್ರಕಾಶ್(65) ಮೃತ ದುರ್ದೈವಿ.  ವಿಜಯ್‌ ಕೆಲಸ ಮುಗಿಸಿ ನಿನ್ನೆ ಸಂಜೆ ಮನೆಗೆ ಬರುವಾಗ ಮಾರುತಿ ನಗರದ ಪಿಎನ್ ಟಿ ಕ್ವಾಟ್ರಸ್ ಬಳಿ ಮರದಲ್ಲಿದ್ದ ಹೆಜ್ಜೇನು ಹಲವರ ಜೊತೆ ಇವರ ಮೇಲೂ ದಾಳಿ ನಡೆಸಿತ್ತು. ಬೈಕ್​​ನಲ್ಲಿ ಬರುತ್ತಿದ್ದ ವೇಳೆ ಹೆಜ್ಜೇನು ದಾಳಿ ಮಾಡಲು ಆರಂಭಿಸಿದ ಕಾರಣ ಅವುಗಳಿಂದ ತಪ್ಪಿಸಿಕೊಳ್ಳಲು ವಿಜಯ್ ಪ್ರಕಾಶ್ ಹರಸಾಹಸ ಪಟ್ಟಿದ್ದರು. ಶರ್ಟ್ ಬಿಚ್ಚಿ ಅವನ್ನು ಓಡಿಸಲು ಪ್ರಯತ್ನ ಮಾಡಿದ್ದರು. ಹೀಗಿದ್ದರೂ ಐವತ್ತಕ್ಕೂ ಅಧಿಕ ಜೇನು ನೊಣಗಳು ಅವರ ಮುಖ ಸೇರದಂತೆ ದೇಹದ ಹಲವು ಭಾಗಗಳ ಮೇಲೆ ದಾಳಿ ನಡೆಸಿದ್ದವು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ತನ್ನದಲ್ಲದ ತಪ್ಪಿಗೆ ಜೀವ ತೆತ್ತಿದ್ದಾರೆ.

ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಂದೆಯ ಸಾವಿಗೆ ಕಂಗಾಲಾಗಿರುವ ಮಗಳು ಕಣ್ಣೀರಿಟ್ಟಿದ್ದಾರೆ. ನಮ್ಮ ಅಪ್ಪನಿಗೆ ಬಂದ ಪರಿಸ್ಥಿತಿ ಮತ್ತೆ ಯಾರಿಗೂ ಬಾರದಿರಲಿ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಿ ಎಂಬ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Shwetha M