ತುಕಾಲಿ ಸಂತುಗೆ ಮಾತೇ ಮುಳುವಾಗುತ್ತಾ? – ಹಾಸ್ಯ ಮಾಡುವುದನ್ನು ಬಿಟ್ಟು ಗೇಲಿ ಮಾಡುವದರಲ್ಲಿ ಕಾಲ ಕಳೆದ ನಟ
ಬಿಗ್‌ಬಾಸ್ ಮನೆ ಬದುಕಿನ ಪಾಠ ಕಲಿಸುತ್ತದೆ. ಯಾರು ಎಷ್ಟೇ ಹಾರಾಡಿದ್ರೂ ಯಾರು ಎಷ್ಟೇ ಆಟ ಆಡಿಸಿದ್ರೂ ಯಾರು ಎಷ್ಟೇ ಸ್ವಾರ್ಥಿಯಾಗಿದ್ರೂ ಕೊನೆಗೇ ಗೆಲ್ಲೋದು ಅವರವರ ಸಾಮರ್ಥ್ಯ ಮಾತ್ರ. ಒಮ್ಮೆ ದೊಡ್ಮನೆಗೆ ಎಂಟ್ರಿಯಾದ ಮೇಲೆ ಎಲ್ಲರೂ ಸಮಾನರೇ ಎಂಬ ಧ್ಯೇಯವಿದೆ. ಆದರೆ, ಈ ಬಾರಿ ಹ್ಯಾಪಿ ಬಿಗ್‌ಬಾಸ್ ಎಂಬ ಥೀಮ್‌ನೊಂದಿಗೆ ಶುರುವಾದ ಈ ರಿಯಾಲಿಟಿ ಶೋನಲ್ಲಿ ಜಗಳವಿದೆ. ಸ್ವಾರ್ಥವಿದೆ. ಪ್ರೀತಿಯಿದೆ. ಸ್ನೇಹವಿದೆ. ಜೊತೆಗೆ ಹಿಂದೆನೇ ಮಾಡುವ, ಮಾತಾಡುವ ಕುತಂತ್ರ ಬುದ್ದಿಯೂ ಬಯಲಾಗಿದೆ. ಅದರಲ್ಲೂ ಈ ಬಾರಿ ತುಕಾಲಿ ಸಂತೋಷ್ನ ತಮಾಷೆ ಬಿಗ್‌ಬಾಸ್ ಮನೆಯನ್ನು ನಗೆಗಡಲಲ್ಲಿ ತೇಲಿಸುತ್ತದೆ. ವೀಕ್ಷಕರಿಗೂ ತುಕಾಲಿಯ ಕಾಮಿಡಿ ಇಷ್ಟವಾಗುತ್ತದೆ ಎನ್ನಲಾಗಿತ್ತು. ಆದರೆ, ತುಕಾಲಿ ಸಂತೋಷ್ ಆಟ ಆಡುವ ಭರದಲ್ಲಿ ತನ್ನ ನಾಲಗೆಯನ್ನು ಸಿಕ್ಕಾಪಟ್ಟೆ ಹರಿಬಿಟ್ಟಿದ್ದಾರೆ. ಸಂತು ಬಾಯಿಯೇ ಸಂತುಗೆ ನೆಗೆಟಿವ್ ಆಗ್ತಿದೆ ಎಂಬಂತೆ ಕಾಣ್ತಿದೆ.
ಇದನ್ನೂ ಓದಿ: ಸಂಗೀತಾ ಮತ್ತು ಕಾರ್ತಿಕ್ ಜೋಡಿಯಾಗುವ ಸಮಯ – ನೈಸ್ ಆಗಿ ಮಸಾಜ್ ಮಾಡ್ತಾ ಮತ್ತಷ್ಟು ಹತ್ತಿರವಾದ ಸ್ನೇಹಿತರು..!
ತುಕಾಲಿ ಸಂತುಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಅದು ಕೂಡಾ ಲಾರ್ಡ್ ಪ್ರಥಮ್ ಸರ್ ಕಡೆಯಿಂದ. ಲಾಸ್ಟ್ ವೀಕ್ ಬಿಗ್‌ಬಾಸ್‌ಗೆ ಗೆಸ್ಟ್ ಆಗಿ ಬಂದಿರುವ ಪ್ರಥಮ್ ತುಕಾಲಿ ಸಂತುಗೆ ಪರೋಕ್ಷವಾಗಿಯೇ ಎಚ್ಚರಿಕೆ ನೀಡಿದ್ದರು. ನಿಮ್ಮ ಸಿಂಗಲ್ ವರ್ಡ್ ಕಾಮಿಡಿ ಟೆಲಿಕಾಸ್ಟ್ ಮಾಡಬಹುದು. ಆದರೆ, ಡಬಲ್ ಆದರೆ ಅಲ್ಲಿಯೇ ಕಟ್ ಆಗಿ ಬರುತ್ತೆ ಅಂತಾ. ಇದನ್ನ ತುಕಾಲಿ ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣ್ತಿಲ್ಲ. ಇದರ ಜೊತೆಗೆ ತುಕಾಲಿ ಡ್ರೋನ್ ಪ್ರತಾಪ್ ನನ್ನು ಟಾರ್ಗೆಟ್ ಮಾಡಿ ಹೋದಲ್ಲಿ ಬಂದಲ್ಲಿ ಬೇಡದ ಜೋಕ್ ಮಾಡುವುದು ಕೂಡಾ ಅಲ್ಲಿದ್ದವರಿಗೆ ಹಿಡಿಸುತ್ತಿರಲಿಲ್ಲ. ಡ್ರೋನ್ ಪ್ರತಾಪ್ ಬಗ್ಗೆ ದಿನಕ್ಕೆ ಹತ್ತಾರು ಬಾರಿ ಜೋಕ್ ಮಾಡುತ್ತಲೇ ಇರುವ ಸಂತುಗೆ ಇದು ಕೂಡಾ ನೆಗೆಟಿವ್ ಆಗಿತ್ತೇ ವಿನಃ ಪ್ಲಸ್ ಅಂತೂ ಆಗಿರಲಿಲ್ಲ. ಯಾರು ಹೇಗೆ ಇದ್ದರೂ ಅದು ಅವರ ವೈಯಕ್ತಿಕ. ಅವರ ವಿಚಾರವನ್ನು ಪದೇ ಪದೇ ಆಡಿಕೊಳ್ಳುವುದು ಸರಿಯಲ್ಲ ಎಂಬ ಬಗ್ಗೆ ಅನೇಕರು ತಮ್ಮ ಅಭಿಪ್ರಾಯವನ್ನು ಕೂಡಾ ಹೊರಹಾಕಿದ್ದರು. ಈ ಬಗ್ಗೆ ಮೊದಲ ವಾರವೇ ತುಕಾಲಿ ಸಂತುಗೆ ಕಿಚ್ಚ ಸುದೀಪ್ ಸ್ಪೆಷಲ್ ಕ್ಲಾಸ್ ಬೇರೆ ತೆಗೆದುಕೊಂಡಿದ್ದರು. ಡ್ರೋನ್ ಪ್ರತಾಪ್ ಬಗ್ಗೆ ತುಕಾಲಿ ಸಂತು ಆಂಡ್ ಗ್ಯಾಂಗ್ ಲೇವಡಿ ಮಾಡುವುದು, ಗೇಲಿ ಮಾಡಿ ನಗುವುದಕ್ಕೆ ಸುದೀಪ್ ಖಡಕ್ ಆಗಿಯೇ ತಿರುಗೇಟು ನೀಡಿದ್ದರು. ತುಕಾಲಿ ಸಂತುಗೆ ಪಂಚಾಯತಿ ಸಂಚಿಕೆ ವೇಳೆ ಕಿಚ್ಚ ಸುದೀಪ್ ಸ್ಪೆಷಲ್ ಟ್ರೀಟ್ಮೆಂಟ್ ಕೊಟ್ಟಿದ್ದರು. ಅದಾದ್ಮೇಲೂ ತುಕಾಲಿ ಸಂತು ಯಾಕೋ ಬಾಯಿ ಕಂಟ್ರೋಲ್ ಮಾಡಿಕೊಳ್ತಿಲ್ಲ.
ತುಕಾಲಿ ಸಂತೋಷ್ ವರ್ತನೆ, ಮಾತು, ಹಾಸ್ಯದ ಬಗ್ಗೆ ಸ್ಪರ್ಧಿಗಳೇ ತಕರಾರು ಎತ್ತಿದ್ದರು. ತುಕಾಲಿ ಸಂತು ಮಾತುಗಳು ವೈಯಕ್ತಿಕವಾಗಿ ಹರ್ಟ್ ಮಾಡುತ್ತವೆ. ಹಾಸ್ಯಕ್ಕಿಂತಲೂ ಹೆಚ್ಚಾಗಿ ವ್ಯಂಗ್ಯವಾಗಿಯೂ ಹೀಯಾಳಿಕೆಯೂ ಇರುತ್ತದೆ ಎಂದು ಸ್ಪರ್ಧಿಗಳೇ ದೂರಿದ್ದರು. ಈಗ ಎರಡನೇ ವಾರವೂ ತುಕಾಲಿಗೆ ಬುದ್ದಿಬಂದಂಗೆ ಕಾಣಿಸ್ತಿಲ್ಲ. ಈಶಾನಿ ಕೋಪಕ್ಕೆ ತುಕಾಲಿ ಸಂತು ಅಕ್ಷರಶಃ ಹೈರಾಣ ಆಗಬೇಕಾಯ್ತು. ಹಠಾತ್ತನೆ ತುಕಾಲಿ ಸಂತು ವಿರುದ್ಧ ಈಶಾನಿ ರೋಷಾವೇಷ ಪ್ರದರ್ಶಿಸಿದರು. ಇದು ಸ್ವತಃ ತುಕಾಲಿ ಸಂತುಗೆ ಆಶ್ಚರ್ಯ ಮೂಡಿಸಿತು. ಬಳಿಕ ಸಂತು ಕೂಡಾ ಇಶಾನಿ ಮೇಲೆ ತುಸು ಸಿಟ್ಟಾದರು. ಆಗ ಇಶಾನಿ ಸಂತುಗೆ ಕೆಟ್ಟದಾಗಿ ಬೈಯ್ಯಲು ಪ್ರಾರಂಭಿಸಿದರು. ಈಶಾನಿಯವರನ್ನು ಮನೆಯ ಕೆಲ ಸದಸ್ಯರು ಪಕ್ಕಕ್ಕೆ ಕರೆದುಕೊಂಡು ಹೋಗಿ ಸಮಾಧಾನ ಮಾಡಿದರು. ಮಾತನ್ನು ಹಿಡಿದಲ್ಲಿಟ್ಟುಕೊಂಡು ಹೋರಾಡುವಂತೆ ಹೇಳಿದರು. ಬಳಿಕ ಮತ್ತೆ ರಕ್ಷಕ್ ಬಳಿ ಬಂದ ಇಶಾನಿ, ನೀರನ್ನು ರಕ್ಷಕ್ ಮೇಲೆ ಚೆಲ್ಲುತ್ತಾ ಭಾವುಕರಾಗಿ ಬಿಟ್ಟರು. ಅಳುತ್ತಾ, ನೀನು ನನ್ನ ತಮ್ಮನಿದ್ದಂತೆ ಅವನಂಥಹಾ ವ್ಯಕ್ತಿಯ ಪರವಾಗಿ ನೀನು ನಿಲ್ಲಬೇಡ, ಇದಕ್ಕಿಂತಲೂ ಹೆಚ್ಚಿನದನ್ನು ನಾನು ಹೇಳಲಾರೆ ಎಂದರು. ಇದು ಕೂಡಾ ತುಕಾಲಿಗೆ ಬೇಸರ ಆಗುವಂತೆ ಮಾಡಿತು. ಟಾಸ್ಕ್ ಎಲ್ಲ ಮುಗಿದ ಬಳಿಕ ತುಕಾಲಿ ಸಂತೋಶ್, ಗೌರೀಶ್ ಅಕ್ಕಿ, ನಮ್ರತಾ ಇನ್ನಿತರರನ್ನು ಸೇರಿಸಿಕೊಂಡು ಇಶಾನಿ ಬಳಿ ಮಾತನಾಡಿ, ಕಾಂಪ್ರೊಮೈಸ್ ಆಗಲು ಪ್ರಯತ್ನಿಸಿದರು. ಈಶಾನಿ ಸಹ ಎಲ್ಲವನ್ನೂ ಮರೆತು ಮುಂದಕ್ಕೆ ಹೋಗೋಣವೆಂದು ಪರಸ್ಪರ ಕೈ-ಕೈ ಕುಲುಕಿದರು. ಅದೇನೇ ಇದ್ದರೂ ತುಕಾಲಿ ಸಂತು ಬಾಯಿ ಸ್ವಲ್ಪ ಕಂಟ್ರೋಲ್ ನಲ್ಲಿ ಇದ್ದರೆ ಅವರಿಗೆ ಒಳ್ಳೆಯದು ಎಂಬ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ತುಕಾಲಿ ಸಂತು ಹೇಳಿ ಕೇಳಿ ಕಾಮಿಡಿ ಕಲಾವಿದ. ತುಕಾಲಿ ಸಂತುವಿನಲ್ಲಿ ಜನ ಹಾಸ್ಯ ಬಯಸುತ್ತಾರೆ. ಉಳಿದ ಸ್ಪರ್ಧಿಗಳು ಕೂಡಾ ಮುಗ್ಧನಂತೆ ಕಾಣುವ ತುಕಾಲಿ ಸಂತೋಷ್ ಬಳಿ ಮನರಂಜನೆಯನ್ನು ಬಯಸುತ್ತಿದ್ದಾರೆ. ಆದರೆ, ತುಕಾಲಿ ಸಂತೋಷ್ ತನ್ನ ಆಟವನ್ನು ಬೇರೆ ರೀತಿಯಲ್ಲೇ ಆಡುತ್ತಿದ್ದಾರೆ. ಅವರಲ್ಲಿ ಹಾಸ್ಯಪ್ರಜ್ಞೆ ಕಾಣುತ್ತಿಲ್ಲ. ಇನ್ನೊಬ್ಬರನ್ನು ಆಡಿಕೊಳ್ಳುವುದೇ ಹಾಸ್ಯ ಎಂದು ತಿಳಿದುಕೊಂಡಂತೆ ಆಡುತ್ತಿದ್ದಾರೆ. ಇದು ವೀಕ್ಷಕರ ಅಸಮಾಧಾನಕ್ಕೂ ಕಾರಣವಾಗಿದೆ.