ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ನ್ಯೂಸ್! – ಭಕ್ತರ ಅನುಕೂಲಕ್ಕಾಗಿ ವೆಂಕಟಾದ್ರಿ ಆಪ್ ಬಿಡುಗಡೆ!

ಕಲಿಯುಗದ ವೈಕುಂಠ ಅಂತಾನೆ ಪ್ರಸಿದ್ಧಿ ಪಡೆದ ಸ್ಥಳ ಅಂದ್ರೆ ಅದು ತಿರುಪತಿ ತಿರುಮಲ. ಬರೀ ದೇಶಗಳಿಂದಷ್ಟೇ ಅಲ್ಲ, ವಿದೇಶಗಳಿಂದಲೂ ಭಕ್ತರನ್ನು ಸೆಳೆಯುವ ದೇವರು ತಿಮ್ಮಪ್ಪ. ಇಲ್ಲಿ ಸದಾ ಕಾಲ ಭಕ್ತರಿಂದ ತುಂಬಿ ತುಳುಕುತ್ತಾ ಇರುತ್ತದೆ. ಇತ್ತೀಚಿಗೆ ತಿರುಮಲದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಇದೀಗ ಟಿಟಿಡಿ ಭಕ್ತರ ಅನುಕೂಲಕ್ಕಾಗಿ ಹೊಸ ಆಪ್ ಪರಿಚಯಿಸಿದೆ. ಇದ್ರಿಂದ ದೇಗುಲದ ಸುತ್ತಮುತ್ತ ಓಡಾಡಲು ಸಹಾಯಕವಾಗಲಿದೆ.
ಇದನ್ನೂ ಓದಿ: ನವರಾತ್ರಿಯಲ್ಲಿ ಯಾಕೆ ಆಯುಧ ಪೂಜೆ ಮಾಡುತ್ತಾರೆ? – ಇದರ ಉದ್ದೇಶ ಏನು ಗೊತ್ತಾ?
ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕೆಲವರಿಗೆ ಭಾಷೆಯ ತೊಂದರೆಯಾಗುವುದು ಸಾಮಾನ್ಯ. ಇದ್ರಿಂದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಕಷ್ಟವಾಗುತ್ತದೆ. ಇದೀಗ ತಿರುಮಲ ಶ್ರೀವಾರಿಯ ದರ್ಶನಕ್ಕೆ ತೆರಳುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಮಹತ್ವದ ಹಾಗೂ ಉಪಯುಕ್ತವಾದ ಸೌಲಭ್ಯವನ್ನು ಪರಿಚಯಿಸಿದೆ. ತಿರುಮಲ ಬೆಟ್ಟದಲ್ಲಿ ಮೊಬೈಲ್ ನೆಟ್ವರ್ಕ್ ಅಥವಾ ಇಂಟರ್ನೆಟ್ ಇಲ್ಲದಿದ್ದರೂ ಸರಾಗವಾಗಿ ಕಾರ್ಯನಿರ್ವಹಿಸುವ ‘ವೆಂಕಟಾದ್ರಿ’ ನ್ಯಾವಿಗೇಷನ್ ಮೊಬೈಲ್ ಅಪ್ಲಿಕೇಶನ್ ಅನ್ನು ಟಿಟಿಡಿ ಬಿಡುಗಡೆ ಮಾಡಿದೆ.
ತಿರುಮಲಕ್ಕೆ ಹೊಸದಾಗಿ ಭೇಟಿ ನೀಡುವ ಭಕ್ತರಿಗೆ ದರ್ಶನ ಸರತಿ ಸಾಲುಗಳು, ಉಚಿತ ಬಸ್ ನಿಲ್ದಾಣಗಳು, ಅನ್ನಪ್ರಸಾದ ಕೇಂದ್ರಗಳು, ವಸತಿ ಕೊಠಡಿಗಳು ಹಾಗೂ ಕಲ್ಯಾಣಕಟ್ಟೆಗಳಂತಹ ಪ್ರಮುಖ ಸ್ಥಳಗಳನ್ನು ಹುಡುಕುವುದು ಕೆಲವೊಮ್ಮೆ ಸವಾಲಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ವೆಂಕಟಾದ್ರಿ ಆಪ್ ಅನ್ನು ರೂಪಿಸಲಾಗಿದೆ.
ತಿರುಮಲದ ಕೆಲವು ಪ್ರದೇಶಗಳಲ್ಲಿ ಸಿಗ್ನಲ್ ಇಲ್ಲದಿದ್ದರೂ ಆಫ್ಲೈನ್ ಮೋಡ್ನಲ್ಲಿಯೂ ಇದು ದಾರಿ ತೋರಿಸುತ್ತದೆ. ಶ್ರೀವಾರಿ ದೇಗುಲ, ಲಡ್ಡು ಕೌಂಟರ್ಗಳು, ಕುಡಿಯುವ ನೀರಿನ ಕೇಂದ್ರಗಳು, ಆಸ್ಪತ್ರೆಗಳು ಸೇರಿದಂತೆ ನೂರಕ್ಕೂ ಹೆಚ್ಚು ಪ್ರಮುಖ ಸ್ಥಳಗಳನ್ನು ಇದರಲ್ಲಿ ನಿಖರವಾಗಿ ಗುರುತಿಸಲಾಗಿದೆ.
ಎಐ (AI) ಆಧಾರಿತ ಧ್ವನಿ ಸಹಾಯಕವಿದ್ದು, ಹತ್ತಿರದ ಕುಡಿಯುವ ನೀರು ಎಲ್ಲಿದೆ? ಅಥವಾ ದರ್ಶನ ಮಾರ್ಗ ಯಾವುದು? ಎಂದು ಧ್ವನಿಯ ಮೂಲಕವೇ ಪ್ರಶ್ನಿಸಿ ಕೆಲವೇ ಸೆಕೆಂಡುಗಳಲ್ಲಿ ಉತ್ತರ ಪಡೆಯಬಹುದು. ಅಲ್ಲದೆ, ಭಕ್ತರು ತಮ್ಮ ವಾಹನಗಳನ್ನು ನಿಲ್ಲಿಸಿದ ಸ್ಥಳವನ್ನು ಅಥವಾ ತಾವಿದ್ದ ಪ್ರಮುಖ ಜಾಗವನ್ನು ಮಾರ್ಕ್ ಮೈ ಸ್ಪಾಟ್ ಮೂಲಕ ಸೇವ್ ಮಾಡಿಕೊಳ್ಳಬಹುದು. ಇದರಿಂದ ವಾಹನಗಳನ್ನು ಹುಡುಕುವ ಅಲೆದಾಟ ತಪ್ಪುತ್ತದೆ.
ಪ್ರಸ್ತುತ ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದ್ದು, ಶೀಘ್ರದಲ್ಲೇ ಆಪಲ್ (iOS) ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ಟಿಟಿಡಿ ತಿಳಿಸಿದೆ.
ಅಂದ್ಹಾಗೆ ಇದು ಬೆಟ್ಟದ ಮೇಲೆ ದಾರಿ ಹುಡುಕಲು ಮಾತ್ರ ನೆರವಾಗುವ ನಾವಿಗೇಷನ್ ಆಪ್ ಆಗಿದೆ. ದರ್ಶನ ಮತ್ತು ವಸತಿ ಕೊಠಡಿಗಳ ಕಾಯ್ದಿರಿಸುವಿಕೆಗಾಗಿ ಭಕ್ತರು ಎಂದಿನಂತೆ ಟಿಟಿಡಿಯ ಅಧಿಕೃತ ವೆಬ್ಸೈಟ್ ಅಥವಾ ಇತರ ಅಧಿಕೃತ ಆಪ್ಗಳನ್ನು ಬಳಸಬೇಕು.

ನೋಡಿರಿ

