ಭಾರತಕ್ಕೇ ಟ್ರಂಪ್ ಪ್ರಹಾರ – ವಲಸಿಗರಿಗಿಲ್ವಾ ಉಳಿಗಾಲ?
ಇದೇನಾ ಅಮೆರಿಕ ಫಸ್ಟ್ ನೀತಿ?

ಭಾರತಕ್ಕೇ ಟ್ರಂಪ್ ಪ್ರಹಾರ – ವಲಸಿಗರಿಗಿಲ್ವಾ ಉಳಿಗಾಲ?ಇದೇನಾ ಅಮೆರಿಕ ಫಸ್ಟ್ ನೀತಿ?

2ನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಹಲವು ಕ್ರಾಂತಿಕಾರಕ ನಿರ್ಧಾರ ಗಳನ್ನು ಘೋಷಿಸಿರುವ ಡೊನಾಲ್ಡ್ ಟ್ರಂಪ್, ಇದೀಗ ಜನಸಾಮಾನ್ಯರಿಗೆ ವಿಧಿಸುವ ಆದಾಯ ತೆರಿಗೆಯನ್ನೇ ರದ್ದು ಮಾಡುವ ಸುಳಿವು ನೀಡಿದ್ದಾರೆ.  ಜನರಿಗೆ ತೆರಿಗೆ ಹೇರಿ ಆದಾಯ ಸಂಗ್ರಹಿಸುವ ಬದಲು, ವಿದೇಶಗಳ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ಹೇರಿ ಅದರ ಮೂಲಕ ಖಜಾನೆ ಭರ್ತಿ ಮಾಡುವ ಪ್ರಸ್ತಾಪವನ್ನು ಟ್ರಂಪ್ ಮುಂದಿಟ್ಟಿದ್ದಾರೆ ಅಮೆರಿಕ ಶ್ರೀಮಂತ ಮತ್ತು ಶಕ್ತಿಯುತ ಇತಿಹಾಸಕ್ಕೆ ಮರಳುವ ಸಮಯ ಸಮೀಪದಲ್ಲಿದೆ. ಸುಂಕದ ವ್ಯವಸ್ಥೆ ಹಿಂದೆ ಅಮೆರಿಕವನ್ನು ಶ್ರೀಮಂತಗೊಳಿಸಿತ್ತು. ನಮ್ಮ ದೇಶದ ಜನರಿಗೆ ತೆರಿಗೆ ವಿಧಿಸಿ ಆದಾಯ ಸಂಗ್ರಹಿಸುವ ಬದಲು ನಾವು ವಿದೇಶಿ ರಾಷ್ಟ್ರಗಳಿಗೆ ಸುಂಕ ಮತ್ತು ತೆರಿಗೆ ವಿಧಿಸಬೇಕು ಎಂದಿದ್ದಾರೆ. ಅಲ್ಲದೇ ಅಮೆರಿಕದ ಸರಕುಗಳಿಗೆ ಭಾರತ, ಚೀನಾ, ಬ್ರೆಜಿಲ್‌ ಅಧಿಕ ಸುಂಕ ವಿಧಿಸುತ್ತಿರುವ ದೇಶಗಳೆಂದು ಗುರುತಿಸಿರುವ ಟ್ರಂಪ್‌, ”ಅಮೆರಿಕನ್ನರ ಹಿತ ಕಾಯಲು ನಮ್ಮ ದೇಶದ ಹಿತಸಾಕ್ತಿಗೆ ವಿರುದ್ಧ ನಿಲುವು ಹೊಂದಿರುವ, ಹಾನಿ ಮಾಡುವ ದೇಶಗಳ ಮೇಲೆ ಅಧಿಕ ಸುಂಕ ವಿಧಿಸಲಾಗುವುದು..” ಎಂದು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಫ್ಲೋರಿಡಾದಲ್ಲಿ ರಿಪಬ್ಲಿಕನ್ನರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್‌, ”ನಮ್ಮ ದೇಶದ ಉತ್ಪನ್ನಗಳಿಗೆ ಚೀನಾ ಅತ್ಯಧಿಕ ಆಮದು ಸುಂಕ ವಿಧಿಸುತ್ತಿದೆ. ಭಾರತ, ಬ್ರೆಝಿಲ್‌ ಸಹ ಇದೇ ಹಾದಿಯಲ್ಲಿವೆ. ಪರಿಸ್ಥಿತಿಯನ್ನು ಹೀಗೆ ಮುಂದುವರಿಯಲು ನಾವು ಬಿಡುವುದಿಲ್ಲ..” ಎಂದು ಗುಡುಗಿದ್ದಾರೆ.  ನಮಗೆ ನಮ್ಮ ರಾಷ್ಟ್ರ , ನಮ್ಮ ಜನರು ಮುಖ್ಯ. ಅಮೆರಿಕ ನಮ್ಮ ಮೊದಲ ಆದ್ಯತೆ. ಅಮೆರಿಕದ ಆರ್ಥಿಕ ಸ್ಥಿತಿ ಮೊದಲಿನಂತಾಗಬೇಕು. ನಮ್ಮ ದೇಶದ ಬೊಕ್ಕಸ ತುಂಬಬೇಕು. ಶ್ರೀಮಂತ ರಾಷ್ಟ್ರವನ್ನಾಗಿ ರೂಪಿಸಲು ನ್ಯಾಯಯುತ ಮಾರ್ಗವನ್ನು ಅನುಸರಿಸಲಾಗುವುದು..” ಎಂದು ಡೊನಾಲ್ಡ್‌ ಟ್ರಂಪ್‌ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಹಳೇ ನೀತಿ ಮತ್ತೆ ಜಾರಿಗೆ ಬರುತ್ತಾ?

1870ರಿಂದ 1913 ರವರೆಗೆ ಆಮೆರಿಕದಲ್ಲಿ ಆದಾಯ ತೆರಿಗೆ ಇರಲಿಲ್ಲ. ಆಗಿನ ಸುಂಕಗಳು, ತೆರಿಗೆಗಳು ಅಮೆರಿಕದ ಇತಿಹಾಸವನ್ನು ಶ್ರೀಮಂತವಾಗಿರಿಸಿತ್ತು. ಇದರಿಂದ ಎಷ್ಟು ಆದಾಯ ಸಂಗ್ರಹವಾಗುತ್ತಿತ್ತು ಎಂದರೆ ದುಡ್ಡನ್ನು ಏನು ಮಾಡಬೇಕು ಎಂದು ಶಿಫಾರಸು ಮಾಡಲೇ ಒಂದು ಸಮಿತಿ ರಚಿಸಲಾಗಿತ್ತು. ಈ ಆದಾಯಗಳೇ ದೇಶವನ್ನು ಮುನ್ನಡೆಸಲು ಆಗಿನ ಅಧ್ಯಕ್ಷರುಗಳಿಗೆ ಬಂಡವಾಳ ಒದಗಿಸಿದ್ದವು. ಹೀಗಾಗಿ 1913ರವರೆಗೆ ದೇಶದಲ್ಲಿ ಆದಾಯ ಸಂಗ್ರಹಕ್ಕೆ ಯಾವ ನೀತಿ ಪಾಲಿಸಲಾಗುತ್ತಿತ್ತೋ ಆ ನೀತಿಯನ್ನೇ ಮತ್ತೆ ನಾವು ಜಾರಿ ಮಾಡಬೇಕಿದೆ. ನಮ್ಮ ಜನರ ಮೇಲೆ ತೆರಿಗೆ ಹೇಳಿ ವಿದೇಶಗಳನ್ನು ಶ್ರೀಮಂತ ಮಾಡುವ ಬದಲು, ವಿದೇಶಿ ವಸ್ತುಗಳ ಮೇಲೆ ತೆರಿಗೆ ನಮ್ಮ ದೇಶವನ್ನು ಶ್ರೀಮಂತ ಮಾಡಬೇಕು. ನಮ್ಮ ನಾಗರಿಕರ ಮೇಲೆ ಹೇರುವ ಆದಾಯ ತೆರಿಗೆ ರದ್ದು ಮಾಡಬೇಕು ಎಂದು ಟ್ರಂಪ್ ಹೇಳಿದ್ದಾರೆ. ಚುನಾವಣಾ ಪ್ರಚಾರದ ವೇಳೆಯೂ ಡೊನಾಲ್ಡ್ ಟ್ರಂಪ್, ಆದಾಯ ತೆರಿಗೆ ರದ್ದತಿ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದರು.

ಅಮೆರಿಕದಲ್ಲಿ ಟ್ಯಾಕ್ಸ್ ಕ್ಯಾನ್ಸಲ್ ಮಾಡಿದ್ರೆ ಏನಾಗುತ್ತೆ?

ಆರ್ಥಿಕ ತಜ್ಞರ ಲೆಕ್ಕಾಚಾರದ ಅನ್ವಯ, ಒಂದು ವೇಳೆ ಟ್ರಂಪ್ ಆದಾಯ ತೆರಿಗೆ ರದ್ದು ಪಡಿಸಿದರೆ ಅದು ಅಮೆರಿಕದ ಖಜಾನೆಯ ಮೇಲೆ 170 ಲಕ್ಷ ಕೋಟಿ ರು. ಹೊರೆ ಹೊರಿಸಲಿದೆ. ಇಷ್ಟು ಹಣವನ್ನು ತುಂಬಿಸಲು ಟ್ರಂಪ್ ಸರ್ಕಾರ ಭಾರೀ ಸಾಹಸ ಮಾಡಬೇಕಾಗುತ್ತದೆ. ಕಾರಣ ಅಮೆರಿಕದ ಒಟ್ಟು ಜಿಡಿಪಿಯಲ್ಲಿ ಆಮದಿನ ಪಾಲು ಶೇ.14ರಷ್ಟು ಪಾಲಿದೆ. ಈ ಆಮದು ವಸ್ತುಗಳ ಮೇಲೆ ತೆರಿಗೆ ಹಾಕುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕಾದರೆ, ಈಗ ಆ ವಸ್ತುಗಳ ಮೇಲೆ ಹಾಕುತ್ತಿರುವ ತೆರಿಗೆಯನ್ನು ಶೇ.133ರಷ್ಟು ಹೆಚ್ಚಿಸಬೇಕು ಅಂದಾಜಿಸಲಾಗಿದೆ.

 ವಲಸಿಗರಿಗಿಲ್ವಾ ಉಳಿಗಾಲ?

ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ವಿಷಯವನ್ನು ಅಮೆರಿಕಾ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಅದರಲ್ಲೂ ಅಮೆರಿಕಾಗೆ ಅತಿಹೆಚ್ಚು ಅಕ್ರಮವಾಗಿ ವಲಸೆ ಬರುವವರು ಮೆಕ್ಸಿಕೋದವರು ಅವರನ್ನು ಈಗ ಗುರುತಿಸಿ ಗಡಿಪಾರು ಮಾಡಲಾಗುತ್ತಿದೆ. ಯಾರು ಅಕ್ರಮ ವಲಸಿಗರು ಅಂತ  ಕಂಡು ಬರ್ತಾರೋ ಅವರನ್ನ ಹಿಡಿದ ವಿಮಾನ ಹತ್ತಿಸಿ ಕಳುಹಿಸಲಾಗುತ್ತಿದೆ. ಭಾರತದವರಿಗೂ ಕೂಡ ಇದ್ರ ಎಫೆಕ್ಟ್ ಆಗುತ್ತಿದೆ. ಅಮೆರಿಕದಲ್ಲಿ ವಿದ್ಯಾಭ್ಯಾಸಕ್ಕೆಂದು ತೆರಳಿರುವ ಸಾಕಷ್ಟು ಭಾರತೀಯ ವಿದ್ಯಾರ್ಥಿಗಳು ತನ್ನ ಖರ್ಚು ವೆಚ್ಚ ನಿಭಾಯಿಸಿಕೊಳ್ಳಲು ಪಾರ್ಟ್‌ಟೈಮ್‌ ಕೆಲಸಕ್ಕೆ ಹೋಗುತ್ತಾರೆ. F-1 ವೀಸಾದಲ್ಲಿರುವ ವಿದ್ಯಾರ್ಥಿಗಳು ವಾರಕ್ಕೆ 20 ಗಂಟೆ ಕೆಲಸ ಮಾಡುವ ಅವಕಾಶವೂ ಇದೆ. ಅದಾಗಿಯೂ ಹೆಚ್ಚಿನ ಸಮಯ ಕೆಲಸ ಮಾಡಿ ಅಲ್ಲಿನ ಭಾರೀ ಖರ್ಚುಗಳನ್ನು ನಿರ್ವಹಣೆ ಮಾಡುತ್ತಾರೆ. ಪ್ರಮುಖವಾಗಿ ಪೆಟ್ರೋಲ್‌ ಬಂಕ್‌, ಗ್ಯಾಸ್‌ ಸ್ಟೇಷನ್‌ಗಳು, ಕೆಫೆಗಳು ಸೇರಿದಂತೆ ಇತರೆ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಸ ಆಡಳಿತದ ವಲಸೆ ನೀತಿಗಳು ಕಠಿಣವಾಗುವ ಸಾಧ್ಯತೆ ಇರುವುದರಿಂದ, ಗಡೀಪಾರು ಭೀತಿಯಿಂದ ವಿದ್ಯಾರ್ಥಿಗಳು ಈ ಹೆಚ್ಚುವರಿ ಕೆಲಸಗಳನ್ನು ತ್ಯಜಿಸುತ್ತಿದ್ದಾರೆ.  ಈ ಮಧ್ಯೆ, ಜೀವನ ನಿರ್ವಹಣೆಗೆ ಅವರು ತಮ್ಮ ಉಳಿತಾಯದ ಮೇಲೆ ಅಥವಾ ಭಾರತದಲ್ಲಿರುವ ಸ್ನೇಹಿತರು ಮತ್ತು ಕುಟುಂಬದಿಂದ ಸಾಲ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಭಾರತ ಮತ್ತು ಚೀನಾಗೆ ಸುಂಕ ಬೆದರಿಕೆ ಹಾಕಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ವಲಸಿಗರನ್ನೂ ಅಮೆರಿಕದಿಂದ ಓಡಿಸುತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *