ಡೊನಾಲ್ಡ್​ ಟ್ರಂಪ್‌ರಿಂದ ಮಹತ್ವದ ನಿರ್ಧಾರ – ಕದನ ವಿರಾಮ ವಿಸ್ತರಿಸುವುದಾಗಿ ಘೋಷಣೆ

ಡೊನಾಲ್ಡ್​ ಟ್ರಂಪ್‌ರಿಂದ ಮಹತ್ವದ ನಿರ್ಧಾರ – ಕದನ ವಿರಾಮ  ವಿಸ್ತರಿಸುವುದಾಗಿ ಘೋಷಣೆ

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಬಿಗುವಿನ ವಾತಾವರಣದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇರಾನ್ ವಿರುದ್ಧದ ದಾಳಿಯನ್ನು ಸದ್ಯಕ್ಕೆ ತಡೆಹಿಡಿದಿರುವ ಟ್ರಂಪ್, ರಾಜತಾಂತ್ರಿಕತೆಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಸ್ಫೋಟಕ ಹಂತ ತಲುಪಿರುವಾಗಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ನಾಯಕರ ವಿಶೇಷ ವಿನಂತಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಈ ಒಂದು ತಪ್ಪು ಮಾಡಿದ್ರೆ ನಿಮಗೆ ಚರ್ಮದ ಸಮಸ್ಯೆ ಬರುತ್ತೆ ಹುಷಾರ್!‌

ಡೊನಾಲ್ಡ್​ ಟ್ರಂಪ್ ತಮ್ಮ ಟ್ರುತ್ ಸೋಶಿಯಲ್​​ ಪ್ಲಾಟ್​ಫಾರ್ಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಾಕಿಸ್ತಾನದ ಫೀಲ್ಡ್​ ಮಾರ್ಷಲ್ ಆಸಿಮ್ ಮುನೀರ್ ಮತ್ತು ಶೆಹಬಾಜ್ ಷರೀಫ್ ಅವರು ಅಮೆರಿಕವನ್ನು ಸಂಪರ್ಕಿಸಿ ಮಾತುಕತೆಗೆ ಸಮಯ ಕೋರಿದ್ದಾರೆ ಎಂದು ತಿಳಿಸಿದ್ದಾರೆ. ಇರಾನ್ ನಾಯಕರು ಮತ್ತು ಪ್ರತಿನಿಧಿಗಳು ಒಂದು ಏಕೀಕೃತ ಪ್ರಸ್ತಾಪವನ್ನು ಮಂಡಿಸುವವರೆಗೆ ದಾಳಿಯನ್ನು ತಡೆ ಹಿಡಿಯುವಂತೆ ಪಾಕಿಸ್ತಾನ ಮನವಿ ಮಾಡಿದೆ. ಅವರ ಪ್ರಸ್ತಾಪ ಬರುವವರೆಗೆ ಮತ್ತು ಚಚರ್ಚಗಳು ತಾರ್ಕಿಕ ಅಂತ್ಯ ಕಾಣುವವರೆಗೆ ತಾವು ಕದನ ವಿರಾಮ ವಿಸ್ತರಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ.

ಟ್ರಂಪ್ ಅವರ ದಿಗ್ಬಂಧನ ತಂತ್ರ ಜಾಗತಿಕ ತೈಲ ವ್ಯಾಪಾರದ ನಾಡಿಮಿಡಿತವಾಗಿರುವ ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಟ್ರಂಪ್ ಅತ್ಯಂತ ಕಠಿಣ ನಿಲುವು ತಳೆದಿದ್ದಾರೆ. ಹಾರ್ಮುಜ್ ಜಲಸಂಧಿ ಮುಕ್ತವಾಗಿದ್ದರೆ ಇರಾನ್ ದಿನಕ್ಕೆ ಸುಮಾರು 500 ಮಿಲಿಯನ್ ಡಾಲರ್ ಆದಾಯ ಗಳಿಸುತ್ತದೆ. ಆದರೆ ಅಮೆರಿಕದ ನೌಕಾಪಡೆಯು ಈ ಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವುದರಿಂದ ಇರಾನ್ ಆರ್ಥಿಕವಾಗಿ ಕಂಗೆಟ್ಟಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಮೊದಲ ಹಂತದ ಕದನ ವಿರಾಮ ಬುಧವಾರಕ್ಕೆ ಅಂತ್ಯಗೊಂಡಿತ್ತು. ಎರಡನೇ ಸುತ್ತಿನ ಮಾತುಕತೆಗಳು ಯಾವುದೇ ಫಲ ನೀಡದೆ ಸ್ಥಗಿತಗೊಂಡಿದ್ದವು. ಟ್ರಂಪ್ ಮೊದಲು ಕದನ ವಿರಾಮ ವಿಸ್ತರಣೆ ನಿರಾಕರಿಸಿದ್ದರೂ, ಕೊನೆಯ ಕ್ಷಣದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಮನಸ್ಸು ಬದಲಿಸಿದ್ದಾರೆ. ಆದರೂ ಅಮರಿಕ ಸೇನೆಗೆ ಯಾವುದೇ ಕ್ಷಣದಲ್ಲಿ ದಾಳಿಗೆ ಸಿದ್ದರಾಗಿರಿ ಎಂದು ಅವರು ಆದೇಶಿಸಿದ್ದಾರೆ.

Kishor KV