ಮತದಾನದ ಶಕ್ತಿ ಅವಮಾನಿಸಿದ್ರಾ? USAID ಡಾಲರ್ ಆಟವೇನು?
ಟ್ರಂಪ್ ಫಂಡ್ ನಿಲ್ಲಿಸಿದ್ದು ಸರಿಯೇ?

ಮತದಾನದ ಶಕ್ತಿ ಅವಮಾನಿಸಿದ್ರಾ? USAID ಡಾಲರ್ ಆಟವೇನು?ಟ್ರಂಪ್ ಫಂಡ್ ನಿಲ್ಲಿಸಿದ್ದು ಸರಿಯೇ?

ಭಾರತದ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅಮೆರಿಕ ಇರಿಸಿದ್ದ 21 ದಶಲಕ್ಷ ಡಾಲರ್ ನಿಧಿಯನ್ನು ಡೊನಾಲ್ಡ್ ಟ್ರಂಪ್ ಆಡಳಿತ ರದ್ದುಗೊಳಿಸಿದೆ. ಬಾಂಗ್ಲಾದೇಶದ ರಾಜಕೀಯ ಸುಧಾರಣೆಗೆ ಇರಿಸಿದ್ದ ನಿಧಿಯನ್ನೂ ರದ್ದುಗೊಳಿಸಲಾಗಿದೆ. ಅಂದಹಾಗೇ ಭಾರತದ ಚುನಾವಣೆಗಳಲ್ಲಿ ಮತದಾನ ಹೆಚ್ಚಿಸಲು ಅಮೆರಿಕಾದ ಯುಎಸ್‌ಎಯ್ಡ್‌ ಮೂಲಕ 180 ಕೋಟಿ ರುಪಾಯಿಗಳಷ್ಟು ಹಣವನ್ನು ಬಳಸಲಾಗುತ್ತದೆ ಎನ್ನುವುದು ಇದರಲ್ಲಿರುವ ಮಹತ್ವದ ಅಂಶ.. ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಾಗುವುದರಿಂದ ನಮಗೇನು ಲಾಭ? ಅದಕ್ಕೆ ನಮ್ಮ ದುಡ್ಡನ್ನೇಕೆ ಖರ್ಚು ಮಾಡಬೇಕು ಎಂದು ಡೊನಾಲ್ಡ್‌ ಟ್ರಂಪ್‌, ಅಮೆರಿಕಾದ ರಿಪಬ್ಲಿಕನ್‌ ಪಕ್ಷದ ಗವರ್ನರ್‌ಗಳ ಸಭೆಯನ್ನ ಉದ್ದೇಶಿಸಿ ಮಾತಾನಾಡುತ್ತಾ ಪ್ರಶ್ನಿಸಿದ್ದರು.. ಅಲ್ಲದೆ ಆ ಹಣವನ್ನು ಒಂದು ರೀತಿಯ ಕಿಕ್‌ಬ್ಯಾಕ್‌ಗಾಗಿ ಬಳಕೆ ಮಾಡಲಾಗಿದೆ ಎನ್ನುವುದು ಟ್ರಂಪ್‌ ಮಾಡಿರುವ ಆರೋಪ.. ಇಷ್ಟಕ್ಕೂ ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಬಳಕೆ ಮಾಡಲೆಂದು ಅಮೆರಿಕ ಇರಿಸಿದ್ದ 180 ಕೋಟಿ ರು. ನಿಧಿಯನ್ನು ಆ ದೇಶದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ ಎಲಾನ್‌ ಮಸ್ಕ್‌ ಅಧ್ಯಕ್ಷತೆಯ ಡಾಜ್ ರದ್ದು ಮಾಡಿದೆ. ಇದರ ನಡುವೆಯೇ, ಹಿಂದೂಗಳ ಮೇಲೆ ದಾಳಿ ಮಾಡಿ ಕುಖ್ಯಾತಿ ಪಡೆದಿರುವ ಬಾಂಗ್ಲಾದೇಶ ರಾಜಕೀಯ ಸುಧಾರಣೆಗೆ ಅಮೆರಿಕ ಇರಿಸಿದ್ದ 29 ದಶಲಕ್ಷ ಡಾಲರ್‌ ನಿಧಿಯನ್ನೂ ಮಸ್ಕ್‌ ರದ್ದು ಮಾಡಿದ್ದಾರೆ. ಈ ಹಣ ರದ್ದು ಮಾಡುತ್ತಿದ್ದಂತೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.. ನಮ್ಮ ದೇಶ ಬೇರೆ ದೇಶದ ಮೇಲೆ ಅವಲಂಬಿತವಾಗಿದ್ಯಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಅಂದಹಾಗೇ ಮಾರ್-ಎ-ಲಾಗೊದಲ್ಲಿ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುವಾಗ ಟ್ರಂಪ್, ಭಾರತದಲ್ಲಿ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು 21 ಮಿಲಿಯನ್ ಯುಎಸ್ ಡಾಲರ್ ಹಣ ನಾವು ಏಕೆ ನೀಡಬೇಕು. ಅವರಿಗೆ ಅಲ್ಲಿ ಬಹಳಷ್ಟು ಹಣ ಇದೆ. ನಮ್ಮ ವಿಷಯಕ್ಕೆ ಬಂದರೆ, ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಒಂದಾಗಿದೆ. ಅವರ ಸುಂಕಗಳು ತುಂಬಾ ಹೆಚ್ಚಾಗಿದೆ ಅಂತ ಹೇಳಿದ್ದಾರೆ. ಹಾಗೇ ಸಾಕಷ್ಟು ಆರೋಪಗಳನ್ನ ಕೂಡ ಟ್ರಂಪ್ ಮಾಡಿದ್ದಾರೆ. ಇನ್ನು ಕಳೆದ ನಾಲ್ಕು ವರ್ಷಗಳಲ್ಲಿ ಅಮೆರಿಕ ಭಾರತಕ್ಕೆ 720 ಮಿಲಿಯನ್ ಡಾಲರ್ ಸಹಾಯವನ್ನು ಒದಗಿಸಿದೆ, ಅದರಲ್ಲಿ ಶೇಕಡಾ 64ರಷ್ಟು ಆರೋಗ್ಯ ಉಪಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ. ಈ ನಡುವೆ ಆರೇಳು ದಶಕಗಳಿಂದ ಸದ್ದಿಲ್ಲದೇ ಕೆಲಸ ಮಾಡುತ್ತಿದ್ದ ಅಮೆರಿಕದ ಯುಎಸ್ಏಡ್ ಸಂಸ್ಥೆ ಈಗ ವಿವಾದದ ಕೇಂದ್ರವಾಗಿದೆ. ಎಲೋನ್ ಮಸ್ಕ್ ನೇತೃತ್ವದಲ್ಲಿ ರಚನೆಯಾಗಿರುವ ಡೋಜೆ ಇಲಾಖೆ ಯುಎಸ್ಏಡ್ನಿಂದ ವಿದೇಶಗಳಿಗೆ ನೀಡಲಾದ ಧನಸಹಾಯಗಳ ಪಟ್ಟಿಯನ್ನು ಪ್ರಕಟಿಸಿ, ಆ ನೆರವನ್ನು ನಿಲ್ಲಿಸಿದೆ. ಡೊನಾಲ್ಡ್ ಟ್ರಂಪ್ ಅವರು ಯುಎಸ್ಏಡ್ ಸಂಸ್ಥೆಯನ್ನು ಒಂದು ಪಕ್ಕಾ ಕ್ರಿಮಿನಲ್ ಸಂಘಟನೆ ಎಂದು ಕರೆದಿದ್ದಾರೆ. ಅಮೆರಿಕದ ತೆರಿಗೆ ಪಾವತಿದಾರರ ಹಣವನ್ನು ಇದು ದುರುಪಯೋಗಪಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

 ಮೋದಿ ಬದಲಾವಣೆಗೆ ಬೈಡನ್ ಸ್ಕೆಚ್?

ಹಿಂದಿನ ಬೈಡನ್ ಸರ್ಕಾರ ಭಾರತೀಯ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು 21 ಮಿಲಿಯನ್ ಡಾಲರ್ ಹಣದ ನೆರವು ಘೋಷಿಸಿದ್ದರ ಉದ್ದೇಶ ಏನು ಅಂತ ಟ್ರಂಪ್ ಪ್ರಶ್ನಿಸಿದ್ದಾರೆ. ಇದು ಮೋದಿ ಸರ್ಕಾರವನ್ನು ಬದಲಿಸುವ ಪಿತೂರಿಯಾಗಿದ್ದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತೀಯ ಚುನಾವಣೆಗಳಲ್ಲಿ ಅಮೆರಿಕಾದ ಹಸ್ತಕ್ಷೇಪದ ಬಗ್ಗೆಯೂ ಟ್ರಂಪ್ ಸುಳಿವು ನೀಡಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಜೋ ಬೈಡನ್‌ ಸರ್ಕಾರ ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಬೇರೊಂದು ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಪ್ರಯತ್ನ ನಡೆಸಿತ್ತು ಅನ್ನೋದನ್ನ ಟ್ರಂಪ್ ಹೇಳಿದ್ದಾರೆ. ಆದರೆ ಇಲ್ಲಿ ಉದ್ಭವಿಸುವ ಪ್ರಶ್ನೆ.. ಇದ್ದಕ್ಕಿದ್ದಂತೆ ಮೋದಿ ಪರವಾಗಿ ಮಾತಾಡಿರುವ ಟ್ರಂಪ್‌.. ಒಂದು ವೇಳೆ ಭಾರತದ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ ಗೆದ್ದಿರುತ್ತಿದ್ದರೂ ಇದೇ ರೀತಿಯ ಅಭಿಪ್ರಾಯ ಹೇಳಲು ಸಾಧ್ಯವಿತ್ತೇ? ಈಗ ಮೋದಿಯವರೇ ಮತ್ತೆ ಗೆದ್ದಿರುವ ಕಾರಣಕ್ಕಷ್ಟೇ ಅಮೆರಿಕಾ ಬಿಲ್ಡಪ್‌ ಕೊಡಲು ಇಂತದ್ದೊ ಪ್ರಯತ್ನ ಮಾಡುವ ಮೂಲಕ ಮಾರ್ಕೆಟಿಂಗ್‌ ನೀತಿ ಅನುಸರಿಸುತ್ತಿದ್ದಾರಾ ಎಂಬುದು.. ಯಾಕಂದ್ರೆ, ನಮ್ಮ ದೇಶದ ಚುನಾವಣೆ ಪದ್ಧತಿ ಅಮೆರಿಕಾಗಿಂತ ವಿಭಿನ್ನವಾಗಿರುವಂತದ್ದು.. ಇಲ್ಲಿ ದೇಶದ ಜನ ಸಂಸದರ ಮೂಲಕ ಪ್ರಧಾನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಿದೆ.. ಅಮೆರಿಕಾ ಅಧ್ಯಕ್ಷ ಹೇಳಿದಂತೆಯೇ ನಡೆದಿದೆ ಅಂತಾದ್ರೆ, ಮೋದಿಯವರು ಆಡಳಿತದಲ್ಲಿದ್ದೂ ಭಾರತದ ಚುನಾವಣಾ ಪ್ರಕ್ರಿಯೆಯ ಒಳಗೆ ವಿದೇಶಿ ಶಕ್ತಿಗಳು ಅಷ್ಟು ದೊಡ್ಡ ಪ್ರಭಾವ ಬೀರುತ್ತದೆ ಅಂತಾದ್ರೆ, ಆಡಳಿತದಲ್ಲಿ ಬಿಗಿ ಇರಲಿಲ್ಲವಾ  ಎನ್ನುವ ಸಾಮಾನ್ಯ ಜ್ಞಾನವನ್ನೂ ಇಲ್ಲಿ ಬಳಸಿಕೊಳ್ಳಬೇಕಿದೆ..

 ಕಾಂಗ್ರೆಸ್ ಮೇಲೆ ಬಿಜೆಪಿ ಚಾಟ

ಇನ್ನು ಮಸ್ಕ್ ಆದೇಶವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷದ ಮೇಲೆ ಬಿಜೆಪಿ ಚಾಟಿ ಬೀಸಿದೆ.ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಹಾಗೂ ಸಾರ್ವಭೌಮತೆ ವಿಚಾರದಲ್ಲಿ ಅನ್ಯ ದೇಶಗಳ ಹಸ್ತಕ್ಷೇಪ ಸರಿಯಲ್ಲ. ಆದರೆ ಹಿಂದಿನ ಯುಪಿಎ ಸರ್ಕಾರವು ಭಾರತ ವಿರೋಧಿ ಜಾರ್ಜ್ ಸೊರೋಸ್ ಜತೆಗೂಡಿ ಭಾರತದ ಆಂತರಿಕ ವಿಷಯದಲ್ಲಿ ಬಾಹ್ಯ ಹಸ್ತಕ್ಷೇಪಕ್ಕೆ ಅವಕಾಶ ನೀಡಿತ್ತು. ಅದರ ಫಲವೇ ಅಮೆರಿಕವು ಭಾರತದಲ್ಲಿ ಮತದಾನ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲು ಇರಿಸಿದ್ದ 21 ದಶಲಕ್ಷ ಡಾಲರ್ ಹಣ. ಈಗ ಇದನ್ನ ರದ್ದು ಮಾಡಿದ್ದು ತಂಬಾ ಒಳ್ಳೆಯದ್ದು ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಹೇಳಿದ್ದಾರೆ. ಇದೇ ವೇಳೆ, 2012ರಲ್ಲಿ ಯುಪಿಎ ಸರ್ಕಾರ ಇದ್ದಾಗ ಎಸ್.ವೈ. ಖುರೇಷಿ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದರು. ಆಗ ಸೊರೋಸ್ ಜತೆ ನಂಟು ಹೊಂದಿದ್ದ ಸಂಸ್ಥೆ ಜತೆ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಯೋಗ ಒಪ್ಪಂದ ಮಾಡಿಕೊಂಡಿತ್ತು. ಇದು ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಅಮೆರಿಕಕ್ಕೆಯುಪಿಎ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದಕ್ಕೆ ನಿದರ್ಶನ ಎಂದಿದ್ದಾರೆ.

 ಮೋದಿ ಕೆಳಗಿಳಿಸೋಕೆ ಮೆಗಾ ಪ್ಲ್ಯಾನ್ ?

ಇನ್ನೂ 2024 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊನೆಗೆ ಬಿಜೆಪಿ ಸರ್ಕಾರ ರಚಿಸಲು ತಮ್ಮ ಎನ್ಡಿಎ ಮಿತ್ರಪಕ್ಷಗಳ ಬೆಂಬಲವನ್ನು ಪಡೆಯಬೇಕಾಯಿತು. ಈ ಬಾರಿಯ ಚುನಾವಣೆಯಲ್ಲಿ ಬಹಳ ಮುಖ್ಯವಾಗಿ ಸಂವಿಧಾನ ರಕ್ಷಣೆ ಮತ್ತು ಮೀಸಲಾತಿ ಹೊರಟುಹೋಗುತ್ತೆ ಎಂಬ ವಿಷಯವೇ ಪ್ರತಿಪಕ್ಷಗಳ ಪ್ರಧಾನ ಅಸ್ತ್ರವಾಗಿತ್ತು..  ಬಿಜೆಪಿಯಲ್ಲಿ ನಡೆದಿದ್ದ ಆಂತರಿಕ ಚರ್ಚೆಯ ಪ್ರಕಾರ, 2024ರ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡಿರಲಿಲ್ಲ.. ಆರ್‌ಎಸ್‌ಎಸ್‌ ಕಾರ್ಯಕರ್ತರು ಸಂಪೂರ್ಣವಾಗಿ ತೊಡಗಿಸಿಕೊಳ್ಳದ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿತ್ತು ಎಂಬ ಚರ್ಚೆಯೂ ನಡೆದಿತ್ತು.. ಆದರೆ ಫಲಿತಾಂಶಕ್ಕೂ ಮೊದಲು ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಸರಿಸುಮಾರು 3509 ಸೀಟುಗಳವರೆಗೆ ಗೆದ್ದೇ ಗೆಲ್ಲುತ್ತದೆ ಎಂದೇ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿದ್ದವು.. ಒಂದು ವೇಳೆ ನಿಜಕ್ಕೂ ಭಾರತದ ಮತದಾರರ ಮೇಲೆ ಪ್ರಭಾವ ಬೀರುವುದೇ ಆಗಿದ್ದರೆ, ಈ ಸಮೀಕ್ಷಾ ಫಲಿತಾಂಶಗಳು ಜನರ ಮೇಲೆ ಪ್ರಭಾವ ಬೀರಬೇಕಿತ್ತು.. ಆದ್ರೆ ಹಾಗೇನೂ ಆಗಲಿಲ್ಲ.. ಚುನಾವಣಾ ಸಮೀಕ್ಷೆಗಳು.. ಎಕ್ಸಿಟ್‌ ಪೋಲ್‌ ಫಲಿತಾಂಶಗಳ ಹೊರತಾರದ ರಿಸಲ್ಟ್‌ ಅನ್ನು ಭಾರತೀಯ ಮತದಾರ ನೀಡಿದ್ದ.. ಯಾಕಂದ್ರೆ ಈ ದೇಶದಲ್ಲಿ ಯಾರ ಆಡಳಿತ ಇರಬೇಕು. ಯಾರ ವೇಗಕ್ಕೆ ಯಾವಾಗ ಕಡಿವಾಣ ಹಾಕಬೇಕು.. ಯಾರಿಗೆ ಎಚ್ಚರಿಕೆಯ ಸಂದೇಶವನ್ನು ಯಾವಾಗ ನೀಡಬೇಕು ಎನ್ನುವ ಪ್ರಜ್ಞಾವಂತಿಕೆಯನ್ನು ಭಾರತೀಯ ಮತದಾರರು ತೋರುತ್ತಲೇ ಬಂದಿದ್ದಾರೆ.. 2004 ರ ಚುನವಾಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಿದ್ದ ಮತದಾರರು 2009ರ ಚುನಾವಣೆಯಲ್ಲಿ ಯುಪಿಎಗೆ ಭರ್ಜರಿ ಬೆಂಬಲ ಕೊಟ್ಟಿದ್ದರು.. ಹಾಗೆಯೇ 2014ರ ಚುನಾವಣೆಯಲ್ಲಿ ಬಿಜೆಪಿಗೆ ಸಿಂಗಲ್‌ ಪಾರ್ಟಿ ಅಧಿಕಾರಕ್ಕೆ ಬೇಕಾದ ಸಂಪೂರ್ಣ ಬಹುಮತವನ್ನು ಬಹುತೇಕ 30 ವರ್ಷಗಳ ನಂತರ ಭಾರತದ ಮತದಾರರು ಕೊಟ್ಟಿದ್ದರು. 2019ರಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಗುರುತಿಸಿ ಅದೇ ಪಕ್ಷಕ್ಕೆ ಮುನ್ನೂರ ಎರಡು ಸ್ಥಾನಗಳನ್ನು ಕೊಟ್ಟು ಅಧಿಕಾರ ನಡೆಸುವಂತೆ ಮತದಾರ ಪ್ರಭುಗಳು ಆದೇಶಿಸಿದ್ದು.. ಆದ್ರೆ 2024ರ ವೇಳೆಗೆ ಮೋದಿ ಸರ್ಕಾರ ಹಲವು ನೀತಿ ನಿರ್ಧಾರಗಳು ದೇಶದ ಜನರಿಗೆ ಹೊಡೆತ ನೀಡಿದ್ದರಿಂದ.. ವಿಶೇಷವಾಗಿ ಆರ್ಥಿಕ ನೀತಿಗಳಿಂದಾಗಿ ಮಧ್ಯಮವರ್ಗ ಹೊಡೆತ ಅನುಭವಿಸಿದ್ದರಿಂದ, ಬಿಜೆಪಿಗೆ ಎಚ್ಚರಿಕೆ ಕೊಟ್ಟು ಎನ್‌ಡಿಎ ಕೈಯಲ್ಲಿ ಅಧಿಕಾರ ಉಳಿಸಿದ್ದು ಭಾರತದ ಮತದಾರರು.. ಮತದಾರರ ಅಂತಹ ತೀರ್ಪಿನ ಕಾರಣದಿಂದಲೇ ಈಗ ಆದಾಯ ತೆರಿಗೆಯಲ್ಲಿ ಸುಧಾರಣೆ ಕಂಡು ಬಂದಿದೆ.. 12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿ, ಮಧ್ಯಮವರ್ಗದ ನೆರವಿಗೆ ಕೇಂದ್ರ ಸರ್ಕಾರ ಬಂದಿದೆ.. ಇವೆಲ್ಲವೂ ಭಾರತದ ಮತದಾರರ ವೋಟ್‌ನಲ್ಲಿರುವ ಪವರ್‌.. ಆದ್ರೆ ಈಗ ಆ ಶಕ್ತಿಯನ್ನು ಮರೆಮಾಚಿ, ವಿದೇಶಿ ಶಕ್ತಿಗಳೇ ಮೇಲುಗೈ ಸಾಧಿಸಲು ಹೊರಟಿದ್ದವು ಎಂದು ಬಿಂಬಿಸುವ ಪ್ರಯತ್ನ ಸಾಗಿದಂತೆ ಭಾಸವಾಗುತ್ತಿದೆ.. ಯಾವುದೇ ವಿಚಾರಗಳನ್ನು ವಿವೇಚನೆಯಿಂದ ಗಮನಿಸುತ್ತಾ ಹೋದರೆ, ಭಾರತದ ಪ್ರಜಾಪ್ರಭುತ್ವದ ಶಕ್ತಿ ಸರಿಯಾಗಿ ಅರ್ಥವಾಗುತ್ತದೆ.. ಆದ್ರೆ ಕಡೆಯಲ್ಲಿ ಒಂದು ಮಾತು ಹೇಳಲೇಬೇಕು.. ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತ ಸರ್ಕಾರಕ್ಕೆ ಯುಎಸ್‌ಎಯ್ಡ್‌ ಮೂಲಕ ಸಿಗುತ್ತಿದ್ದ ಫಂಡ್‌.. ಎನ್‌ಡಿಎ ಅಧಿಕಾರದಲ್ಲಿರುವಾಗ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ.. ಯುಪಿಎ ಸರ್ಕಾರದ ಅವಧಿಯಲ್ಲಿ 204 ದಶಲಕ್ಷ ಡಾಲರ್‌ ಭಾರತಕ್ಕೆ ಬರುತ್ತಿದ್ದರೆ, ಮೋದಿ ಸರ್ಕಾರದ ಅವಧಿಯಲ್ಲಿ ಇದು ಕೇವಲ 1.5 ಮಿಲಿಯನ್‌ ಡಾಲರ್‌ ಭಾರತ ಸರ್ಕಾರಕ್ಕೆ ಯುಎಸ್‌ಎಯ್ಡ್‌ ಮೂಲಕ ಬರುತ್ತಿದೆ.. ಹಾಗೆಯೇ ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ಎನ್‌ಜಿಒಗಳಿಗೆ ಸಿಗುತ್ತಿದ್ದ ಯುಎಸ್‌ಎಯ್ಡ್‌ ಈಗ ಮೋದಿ ಸರ್ಕಾರ ಅವಧಿಯಲ್ಲಿ ಏರಿಕೆಯಾಗಿದೆ.. ಯುಪಿಎ ಸರ್ಕಾರದ ಅವಧಿಯಲ್ಲಿ 2114 ಮಿಲಿಯನ್‌ ಡಾಲರ್‌ ಭಾರತದ ಎನ್‌ಜಿಒಗಳಿಗೆ ಯುಎಸ್‌ಎಯ್ಡ್‌ ಮೂಲಕ ಬರುತ್ತಿತ್ತು. ಅದು ಮೋದಿ ಸರ್ಕಾರ ಅವಧಿಯಲ್ಲಿ 2579 ಮಿಲಿಯನ್‌ ಯುಸ್‌ ಡಾಲರ್‌ಗಳಿಗೆ ಏರಿಕೆಯಾಗಿದೆಯೆಂದು ರಾಷ್ಟ್ರೀಯ ಮಾಧ್ಯಮಗಳ ವರದಿಯಲ್ಲಿ ಉಲ್ಲೇಖವಾಗಿದೆ.  ಹೀಗೆ ಎನ್‌ಜಿಒಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಯುಎಸ್‌ಎಯ್ಡ್‌ ಸಿಗುತ್ತಿರುವುದೇ ಮೋದಿ ಸರ್ಕಾರದ ವಿರುದ್ಧದ ಹಾಗೂ ಭಾರತದ ವಿರುದ್ಧ ಕೆಲಸ ಮಾಡುವ ಸಂಸ್ಥೆಗಳನ್ನು ಪೋಷಿಸಲು ಎಂದು ಬಿಜೆಪಿ ವಕ್ತಾರರು ಆರೋಪಿಸುತ್ತಿದ್ದಾರೆ.. ಈ ಎಲ್ಲಾ ಆರೋಪಗಳು ಪ್ರತ್ಯಾರೋಪಗಳು ಇರುವಂತದ್ದೇ.. ಆದ್ರೆ ಬಿಜೆಪಿ ಮಾಡುತ್ತಿರುವ ಆರೋಪ ನಿಜವೇ ಆಗಿದ್ದರೆ, ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸುವ ಜವಾಬ್ದಾರಿ ಕೂಡ ಕೇಂದ್ರ ಸರ್ಕಾರ ಮೇಲಿದೆ..

Kishor KV

Leave a Reply

Your email address will not be published. Required fields are marked *