ಮೋದಿ ಬಗ್ಗೆ ಟ್ರಂಪ್ ಹೇಳಿದ್ದೇನು- ಭಾರತಕ್ಕೆ F_35 ಯುದ್ಧ ವಿಮಾನ ಪೂರೈಕೆಗೆ ಒಪ್ಪಿಗೆ
ಭಾರತಕ್ಕೆ ನಾವು ಟ್ಯಾಕ್ಸ್ ಹಾಕುತ್ತೇವೆ ಎಂದ ಟ್ರಂಪ್

ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆಯ ನಂತರ, ವ್ಯಾಪಾರ ಕೊರತೆಯನ್ನು ತಗ್ಗಿಸಲು ಭಾರತವು ಅಮೆರಿಕದಿಂದ ಹೆಚ್ಚಿನ ತೈಲ, ಅನಿಲ ಮತ್ತು ಮಿಲಿಟರಿ ಯಂತ್ರಾಂಶಗಳನ್ನು ಖರೀದಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಆದರೆ ಅಮೆರಿಕಾ ಭಾರತದ ಮೇಲೆ ವ್ಯಾಪಾರದಲ್ಲಿ ಸುಂಕ ಹೇರುವ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದರು.
ಶ್ವೇತಭವನದಲ್ಲಿರುವ ತಮ್ಮ ಓವಲ್ ಕಚೇರಿಯಲ್ಲಿ, ಟ್ರಂಪ್ ಮೋದಿ ಅವರನ್ನು ಹಸ್ತಾಲಾಘವ ನೀಡಿ ಅಪ್ಪುಗೆಯೊಂದಿಗೆ ಸ್ವಾಗತಿಸಿ ಪ್ರಧಾನಿ ಮೋದಿ ತಮ್ಮ ದೀರ್ಘಕಾಲದ ಸ್ನೇಹಿತ ಮತ್ತು ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದರು.
ಉಭಯ ನಾಯಕರು ಮಾತುಕತೆಯ ನಂತರ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷರು, ಎರಡೂ ಕಡೆಯಿಂದಲೂ ಶೀಘ್ರದಲ್ಲೇ ಪ್ರಮುಖ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ನೋಡುತ್ತಿದ್ದಾರೆ. ಕೆಲವು ಅಮೆರಿಕನ್ ಉತ್ಪನ್ನಗಳ ಮೇಲೆ ಭಾರತ ವಿಧಿಸಿರುವ ಆಮದು ಸುಂಕಗಳನ್ನು ತೀರಾ ಅನ್ಯಾಯದ ಕಠಿಣ ಕ್ರಮ ಎಂದು ಕರೆದರು. ಭಾರತ ಏನೇ ವಿಧಿಸಿದರೂ, ನಾವು ಅವುಗಳಿಗೆ ಶುಲ್ಕ ವಿಧಿಸುತ್ತೇವೆ. ಆದರೂ ಭಾರತದೊಂದಿಗೆ ಸಂಬಂಧ ಮುಂದುವರಿಸಲು ನೋಡುತ್ತಿದ್ದೇವೆ ಅಂತ ಟ್ರಂಪ್ ಹೇಳಿದ್ದಾರೆ.
ಭಾರತಕ್ಕೆ ಎಫ್ -35 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಒದಗಿಸಲು ನಾವು ದಾರಿ ಮಾಡಿಕೊಡುತ್ತಿದ್ದೇವೆ. ಎಫ್ 35 ಜೆಟ್‌ಗಳನ್ನು ವಿಶ್ವದ ಅತ್ಯಂತ ಮಾರಕ, ಬದುಕುಳಿಯಬಹುದಾದ ಮತ್ತು ಸಂಪರ್ಕಿತ ಯುದ್ಧ ವಿಮಾನಗಳು ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯಂತದ ಮೂಲಭೂತ ಇಸ್ಲಾಮಿಕ್ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ಭಾರತ ಮತ್ತು ಅಮೆರಿಕ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಿ ಕೆಲಸ ಮಾಡುತ್ತದೆ ಎಂದರು.