ಭಾರತದಲ್ಲಿ ಹಿಂದೆಂದೂ ನೋಡದ ಬರಗಾಲ – ಎಲ್ ನಿನೋ ಪ್ರಭಾವದಿಂದ ಕಾದಿದೆ ಸಂಕಷ್ಟ

ಭಾರತದಲ್ಲಿ ಹಿಂದೆಂದೂ ನೋಡದ ಬರಗಾಲ – ಎಲ್ ನಿನೋ ಪ್ರಭಾವದಿಂದ ಕಾದಿದೆ ಸಂಕಷ್ಟ

ಕೃಷಿ ಕೆಲಸ ಸಾಗುತ್ತಿದೆ. ಆದರೆ, ಮಳೆರಾಯನ ಸುಳಿವೇ ಇಲ್ಲ. ಮಳೆಗಾಗಿ ರೈತರು ಕಾಯುತ್ತಿದ್ದಾರೆ. ಜಲಾಶಯಗಳಲ್ಲಿ ನೀರಿಲ್ಲ. ನದಿ, ತೊರೆಗಳು ತುಂಬಿಲ್ಲ. ವಾಡಿಕೆಯ ಮಳೆ ಬಂದೇ ಇಲ್ಲ. ಇದರ ಮಧ್ಯೆ ಶೇಕಡಾ 54 ಜಿಲ್ಲೆಗಳಲ್ಲಿ ಮಳೆಯೇ ಬಂದಿಲ್ಲ. ಇದರಿಂದಾಗಿ ಈ ಬಾರಿ ಹಿಂದೆಂದೂ ನೋಡದ ಬರಗಾಲ ಈ ವರ್ಷ ಕಾದಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕರಾವಳಿಯಲ್ಲಿ ಮೀನಿನ ಬರಗಾಲ – ಮೀನುಗಾರರಿಗೆ ನಷ್ಟದ ಜೊತೆ ಬದುಕುವ ದಾರಿಯೇ ಬಂದ್..!

ಜೂನ್‌ನಲ್ಲಿ ಮಳೆ ಅಷ್ಟೇನು ಬಂದಿರಲಿಲ್ಲ. ಹೀಗಾಗಿ ಜುಲೈನಲ್ಲಿ ಮಳೆ ಗ್ಯಾರಂಟಿ ಎಂದು ರೈತರು ಕಾಯುತ್ತಿದ್ದರು. ಮೂರು ನಾಲ್ಕು ದಿನ ಮಳೆ ಬಂದಿದ್ದು ಬಿಟ್ಟರೆ ಮತ್ತೆಲ್ಲಾ ದಿನಗಳಲ್ಲಿ ರಣ ಬಿಸಿಲು ಸುಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಎಲ್​​ ನಿನೋ ಪ್ರಭಾವ. ಅಮೆರಿಕದ ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರ್ ಅಡ್ಮಿನಿಸ್ಟ್ರೇಷನ್ (ಎನ್​ಒಎಎ) ಈ ವರ್ಷದ ಅಂತ್ಯದ ವೇಳೆಗೆ ತಾಪಮಾನ ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ. ಹವಾಮಾನ ತಜ್ಞ ಜೆಕೆ ಹೌಸ್‌ಫಾದರ್ ಅವರು 14 ರೀತಿಯ ಹವಾಮಾನ ಮಾದರಿಗಳಿಂದ ಸಂಗ್ರಹಿಸಿದ 667 ಮುನ್ಸೂಚನೆಗಳ ವಿಶ್ಲೇಷಣೆಯ ಅನ್ವಯ, ಸದ್ಯ ಇರುವ ಎಲ್ ನಿನೋ ಈ ಹಿಂದಿಗಿಂತ ಹೆಚ್ಚಿನ ನಷ್ಟವನ್ನು ಸೃಷ್ಟಿ ಮಾಡುತ್ತದೆ ಎಂದು ಅಂದಾಜು ಮಾಡಿದ್ದಾರೆ. 2015-16ರಲ್ಲಿ ಗರಿಷ್ಠ ಅಂದರೆ 2.70 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವ್ಯತ್ಯಾಸ ದಾಖಲಾಗಿತ್ತು. ಆದರೆ ಈ ಬಾರಿ ಇದು 3.6 ಡಿಗ್ರಿ ಸೆಲ್ಸಿಯಸ್ ವರೆಗೂ ಹೆಚ್ಚಳವಾಗುವ ಮುನ್ಸೂಚನೆ ಇದೆ ಎಂದು  ಹೇಳಿದ್ದಾರೆ.

ಭಾರತ ಹವಾಮಾನ ಇಲಾಖೆ (ಐಎಂಡಿ) ಅನ್ವಯ, ಈ ವರ್ಷ ಭಾರತ ಮಾನ್ಸೂನ್ ಮಾರುತಗಳು ಸುರಿಸುವ ಮಳೆಯ ಪ್ರಮಾಣ ದೀರ್ಘಕಾಲದ ಸರಾಸರಿಯಲ್ಲಿ ಶೇಕಡಾ 90ರಷ್ಟು ಮಾತ್ರ ಆಗುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಎಲ್ ನಿನೊದ ಪರಿಣಾಮವನ್ನು ಕಡಿಮೆ ಮಾಡುವ ‘ಹಿಂದೂ ಮಹಾಸಾಗರದ ದ್ವಿಧ್ರುವಿ’ ಈ ಬಾರಿ ತಟಸ್ಥವಾಗಿದೆ. ಅಂದರೆ, ಎಲ್ ನಿನೊದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವ ನೈಸರ್ಗಿಕ ಪರಿಹಾರವೂ ಈ ಬಾರಿ ಕೆಲಸ ಮಾಡಿಲ್ಲ. ಈ ಕಾರಣದಿಂದಲೇ ಕಳೆದ ಜೂನ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಶೇಕಡಾ 40ರಷ್ಟು ಮಳೆ ಕಡಿಮೆಯಾಗಿದೆ. ಕಳೆದ 126 ವರ್ಷಗಳಿಗೆ ಹೋಲಿಕೆ ಮಾಡಿದರೆ, ದೇಶದಲ್ಲಿ ದಾಖಲಾದ ಐದನೇ ಅತ್ಯಂತ ಕಡಿಮೆ ಮಳೆಯ ಪ್ರಮಾಣ ಜೂನ್‌ನಲ್ಲಿ ದಾಖಲಾಗಿದೆ. ಇದು ಭಾರತದ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಿದ್ದು, ದೇಶದ 741 ಜಿಲ್ಲೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳು ಮಳೆಯ ಕೊರತೆಯನ್ನು ಎದುರಿಸುತ್ತಿದೆ.

ಭಾರತ ಕೃಷಿ ಸಚಿವಾಲಯದ ಮಾಹಿತಿಯ ಅನ್ವಯ, ಭಾರತದ ಅತಿದೊಡ್ಡ ಬೆಳೆಯಾದ ಭತ್ತದ ನಾಟಿಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇಕಡಾ 8.6ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ 114.69 ಲಕ್ಷ ಹೆಕ್ಟೇರ್ ಗಳಲ್ಲಿ ಭತ್ತ ನಾಟಿ ಮಾಡಲಾಗುತ್ತದೆ. ಕಳೆದ ವರ್ಷ 125.33 ಲಕ್ಷ ಹೆಕ್ಟೇರ್​ನಲ್ಲಿ ಭತ್ತ ನಾಟಿ ಮಾಡಲಾಗಿತ್ತು, ಆದರೆ ಈ ಬಾರಿ ಇದು ಶೇಕಡಾ 8.6ರಷ್ಟು ಕಡಿಮೆಯಾಗಿದೆ. ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಹೊಸ ಚಂಡಮಾರುತದ ರಚನೆ ಆಗುತ್ತಿರುವುದರಿಂದ ಮಧ್ಯ ಮತ್ತು ಪೂರ್ವ ಭಾರತದಲ್ಲಿ ಅಲ್ಪಾವಧಿ ಮಳೆಯಾಗುವ ನಿರೀಕ್ಷೆ ಇದೆ. ಆದರೆ, ಕರ್ನಾಟಕದಲ್ಲಿ ರೈತರು ಮಾತ್ರ ಮಳೆಯಿಲ್ಲದೆ ಕಂಗೆಟ್ಟಿದ್ದಾರೆ. ಕರಾವಳಿಯಲ್ಲಿ ಸ್ವಲ್ಪ ಮಳೆ ಬಂದಿದ್ದು ಬಿಟ್ಟರೆ ಒಂದು ವಾರದಿಂದ ರಣಬಿಸಿಲು ರೈತರನ್ನು ಕಂಗೆಡಿಸಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯೇ ಇಲ್ಲ.

Sulekha

Leave a Reply

Your email address will not be published. Required fields are marked *