ಟ್ರೋಲ್‌ ಸಾಂಗ್ ಈ ಪಾರ್ಟ್ ಅರ್ಥ ಆಯ್ತಾ? – ಉಪ್ಪಿ‌ಗಿಂತ ರುಚಿ ಬೇರೆ ಇಲ್ಲ..!  

ಟ್ರೋಲ್‌ ಸಾಂಗ್ ಈ ಪಾರ್ಟ್ ಅರ್ಥ ಆಯ್ತಾ? – ಉಪ್ಪಿ‌ಗಿಂತ ರುಚಿ ಬೇರೆ ಇಲ್ಲ..!  

ವಿಭಿನ್ನ ಆಲೋಚನೆ..  ವಿಭಿನ್ನ ಸಿನಿಮಾಗಳಿಂದಲೇ ಸದ್ದು ಮಾಡ್ತಿರೋರು ಅಂದ್ರೆ.. ರಿಯಲ್ ಸ್ಟಾರ್ ಉಪೇಂದ್ರ. ಎಷ್ಟೇ ವರ್ಷಗಳು ಕಳೆದರೂ ಉಪ್ಪಿಯ ಹೊಸ ಆಲೋಚನೆಗಳಿಗೆ ಮಾತ್ರ ವಯಸ್ಸಾಗಲ್ಲ. ಸದಾ ಹೊಸತನವನ್ನು ಪ್ರೇಕ್ಷಕರಿಗೆ ಉಣಬಡಿಸ್ತಾರೆ.. ವಿಶ್ವದ ಬೆಸ್ಟ್ ಡೈರೆಕ್ಟರ್ ಪಟ್ಟ ಗಳಿಸಿರೋ ಉಪ್ಪಿ ಇದೀಗ ಮತ್ತೆ ‘UI’ ಸಿನಿಮಾದ ಮೂಲಕ ತೆರೆಮೇಲೆ ಬರ್ತಿದ್ದಾರೆ.. ಇತ್ತೀಚಿಗಷ್ಟೇ ರಿಲೀಸ್‌ ಮಾಡಿದ ಯುಐ ಸಿನಿಮಾದ  ಹಾಡಲ್ಲಿ ಟ್ರೋಲರ್ಸ್ ಗಳನ್ನೇ ಟ್ರೋಲ್ ಮಾಡಿದ್ದಾರೆ ಉಪ್ಪಿ.. ಇದೀಗ ಈ ಹಾಡು ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ..

ಇದನ್ನೂ ಓದಿ: ಆಸ್ಕರ್‌ ವೇದಿಕೆಗೆ ಬೆತ್ತಲಾಗಿ ಬಂದ ಖ್ಯಾತ ನಟ! – ಆಮೇಲೆ ಏನಾಯ್ತು?

ರಿಯಲ್ ಸ್ಟಾರ್ ಉಪೇಂದ್ರ ಅಂದ್ರೆ  ಸಖತ್ ಸಿಂಪಲ್.. ಆದ್ರೆ ಅವರ ಸಿನಿಮಾ ಮಾತ್ರ ಫುಲ್ ಡಿಫರೆಂಟ್ ಆಗಿರುತ್ತೆ. ಯಾವುದೋ ವಿಚಾರವನ್ನು ಮತ್ಯಾವುದೋ ರೀತಿಯಲ್ಲಿ ಹೇಳ್ತಾರೆ.. ಅವರ ಸಿನಿಮಾ ಹಾಡುಗಳೂ, ಅದರ ಸಾಹಿತ್ಯವೂ ಅಷ್ಟೇ. ವಿಶೇಷವಾಗಿಯೇ ಇರುತ್ತದೆ. ಸಮಾಜದಲ್ಲಿ ನಡೀತಿರೋ ಘಟನೆಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡ್ತಾರೆ.. ಇನ್ನು ಉಪ್ಪಿ ನಿರ್ದೇಶನ ಮಾಡ್ತಾರೆ ಅಂದ್ರೆ ಕೇಳ್ಬೇಕಾ? ಅದ್ರಲ್ಲಿ ಏನೋ‌ ಒಂದು‌‌ ಸ್ಪೆಷಲ್  ಇದೆ ಅಂತಾನೇ ಲೆಕ್ಕ.. ಎಲ್ಲರ ಕಾಲೆಳೆಯುತ್ತೆ ಕಾಲ ಅಂದಿದ್ದ ಉಪ್ಪಿ ಈಗ ಯುಐ   ಮೂಲಕ ಮತ್ತೊಂದು ಕಂಟೆಂಟ್ ಕೊಟ್ಟು ಸೌಂಡ್ ಮಾಡ್ತಿದ್ದಾರೆ. ಇದು ಟ್ರೋಲ್ ಆಗುತ್ತೆ.. ಇದು ಟ್ರೋಲ್ ಆಗುತ್ತೆ ಅಂತಾ ಸಾಂಗ್ ಮೂಲಕ ಸಿನಿ ಪ್ರೇಕ್ಷಕರನ್ನು ಥ್ರಿಲ್ ಮಾಡಿದ್ದಾರೆ.. ಟ್ರೋಲ್‌ಗಳನ್ನೇ ಇಟ್ಕೊಂಡು ಈ ರೀತಿ ಒಂದು ಹಾಡು ಮಾಡಬಹುದು ಅಂತ ಹೊಸ ಎಕ್ಸಾಂಪಲ್ ಸೆಟ್ ಮಾಡಿದ್ದಾರೆ. ಸ್ಯಾಂಡಲ್‌ವುಡ್ ನ ದೊಡ್ಡ ಸ್ಟಾರ್‌ಗಳಿಂದ ಹಿಡಿದು ಲೇಟೆಸ್ಟ್ ಟ್ರೋಲ್ ಕಂಟೆಂಟ್ ಬೆಳ್ಳುಳ್ಳಿ ಕಬಾಬ್ ವರೆಗೂ ಉಪ್ಪಿ ಹಾಡಿನಲ್ಲಿ ಸೇರಿಸಿ ಟ್ರೆಂಡ್ ಮಾಡಿದ್ದಾರೆ.

ಉಪ್ಪಿಯ ಈ ಹಿಂದಿನ ಸಿನಿಮಾಗಳಲ್ಲೂ ಹೊಸ ಯೋಚನೆಗಳೇ ಇವೆ. ಓಂ ಯಾರೂ ಟಚ್ ಮಾಡದೇ ಇರೋ ವಿಷಯವೇ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ನಿರ್ದೇಶಿಸಿದ್ದ ಓಂ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು.. ರಿಯಲ್ ರೌಡಿಗಳ ಕತೆಗಳನ್ನು ಆಧರಿಸಿ ಮಾಡಿದ್ದ ಸಿನಿಮಾದಿಂದಾಗಿ ಕನ್ನಡದಲ್ಲಿ ಲಾಂಗು ಸಂಸ್ಕೃತಿಯೂ ಶುರುವಾಗಿತ್ತು.. ಶಿವಣ್ಣ ಲಾಂಗು ಹಿಡಿದು ಬಂದ್ರೆ ಅದರ ಖದರ್ರೇ ಬೇರೆ ಎಂಬ ರೀತಿಯಲ್ಲಿ ಹೊಸ ಇತಿಹಾಸವನ್ನೇ ಉಪೇಂದ್ರ ಸೃಷ್ಟಿಸಿದ್ದರು. ಇದಾದ ನಂತರ ಎ ಸಿನಿಮಾದಲ್ಲಿ ಬಣ್ಣ ಹಚ್ಚಿ ತಾವೇ ನಿರ್ದೇಶಿಸುವ ಮೂಲಕ ಹೊಸ ಅಲೆಯನ್ನು ಸೃಷ್ಟಿಸಿದವರು ರಿಯಲ್ ಸ್ಟಾರ್.. ಇದಾದ ನಂತರ ಬಂದಿದ್ದ.. ಉಪೇಂದ್ರ ಸಿನಿಮಾದಲ್ಲಿ ಉಪ್ಪಿ ಸೃಷ್ಟಿಸಿದ ‘ನಾನು’ ಪಾತ್ರ ಈಗ ಯುಐ ವರೆಗೂ ಸಾಗಿ ಬರುತ್ತಿದೆ.. ಸೂಪರ್ ಸಿನಿಮಾದಲ್ಲಿ ಹೊಸ ಕನಸಿನ ಲೋಕವನ್ನೇ ಕನ್ನಡ ನಾಡಿನಲ್ಲಿ ಸೃಷ್ಟಿಸಿದ್ದ ಉಪೇಂದ್ರ ಅವರ ಒಂದೊಂದು ಸಿನಿಮಾವೂ ಭಿನ್ನ ವಿಭಿನ್ನವಾಗಿ ಮೂಡಿ ಬಂದಿವೆ.. ಉಪೇಂದ್ರ ತಮ್ಮ ಚಿತ್ರ ಜೀವನದಲ್ಲಿ ಹೆಚ್ಚು ಕಡಿಮೆ ಒಂದ್ 10 ಸಿನಿಮಾ ಡೈರೆಕ್ಟರ್ ಮಾಡಿದ್ದಾರೆ. ನಟನೆ ಅಂತ ಬಂದ್ರೆ 60 ಮೇಲೆ ಆಗಿರಬಹುದು. ಆದರೆ ಅಭಿನಯಿಸಿರೋ ಸಿನಿಮಾಗಳಲ್ಲಿ ತಮ್ಮದೇ ಒಂದು ಛಾಪು ಮೂಡಿಸಿದ್ದಾರೆ.  ಅಷ್ಟು ವಿಶೇಷ ಚಿತ್ರಗಳನ್ನ ಕೊಡ್ತಾನೇ ಬರ್ತಿರೋ ಡೈರೆಕ್ಟರ್ ಉಪೇಂದ್ರ, ವಿಶ್ವದ 50 ಜನ ದಿ ಬೆಸ್ಟ್ ಡೈರೆಕ್ಟರ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸ್ಕೊಂಡಿದ್ದಾರೆ. IMDb ವಿಶ್ವದ ದಿ ಬೆಸ್ಟ್ ಡೈರೆಕ್ಟರ್ಗಳ ಒಂದು ಪಟ್ಟಿಯಲ್ಲಿ ಉಪ್ಪಿ 8 ನೇ ಸ್ಥಾನ ಪಡ್ಕೊಂಡಿದ್ದಾರೆ.. ಇದ್ರಲ್ಲೇ ಗೊತ್ತಾಗುತ್ತೆ ಉಪೇಂದ್ರ ಪವರ್‌ ಎಷ್ಟಿದೆ ಅಂತಾ..

ಉಪೇಂದ್ರ ಸದಾ ಹೊಸತನವನ್ನೇ ಹುಡುಕುತ್ತಿರುತ್ತಾರೆ.. ಇದಕ್ಕೆ ಪೂರಕವಾಗಿಯೇ ಇದೆ ಈ ಯುಐ ಸಿನಿಮಾದ ಟ್ರೋಲ್ ಹಾಡು..  ಯಾರದ್ದೊ ಮನಸ್ಸಿನಲ್ಲಿ ಓಡಾಡುವ ಮಾತುಗಳನ್ನು ತೆರೆಯಮೇಲೆ ತರಬಲ್ಲ ಶಕ್ತಿಯಿರುವ ಉಪೇಂದ್ರ ಅವರು ಟ್ರೋಲ್‌ಗಳನ್ನು ಹೇಗೆ ಬಿಡೋಕೆ ಸಾಧ್ಯ ಎನ್ನುವುದು ಅವರ ಅಭಿಮಾನಿಗಳ ಮಾತು.. ಈಗ ಟ್ರೋಲ್ ಹಾಡಿಗಾಗಿ ಸೋಷಿಯಲ್ ಮೀಡಿಯಾದ ತುಂಬಾ ಉಪೇಂದ್ರ ಸಿಕ್ಕಾಪಟ್ಟೆ ರಿಸರ್ಚ್ ಮಾಡಿದ್ದಾರೆ.. ಅದರಲ್ಲೂ ಟ್ರೆಂಡಿಂಗ್‌ನಲ್ಲಿರುವ  ಮತ್ತು ಎವರ್‌ಗ್ರೀನ್ ಟ್ರೋಲ್‌ಗಳನ್ನೇ ಬಳಕೆ ಮಾಡಿಕೊಂಡಿದ್ದಾರೆ.. ಉದಾಹರಣೆಗೆ ನಿಖಿಲ್ ಎಲ್ಲಿದ್ದೀಯಪ್ಪಾ ಎನ್ನುವುದು ಐದು ವರ್ಷಗಳ ಹಿಂದೆ ಇದ್ದ ಟ್ರೋಲ್.. ಆದ್ರೆ ಅಂತ ಎವರ್‌ಗ್ರೀನ್ ಟ್ರೋಲ್ ಕೂಡ ಈ ಟ್ರೋಲ್ ಹಾಡಿನಲ್ಲಿ ಸೇರಿಕೊಂಡಿರುವುದು ವಿಶೇಷ..

ಇನ್ನು ಈ ಹಾಡನ್ನ ಕೇಳಿದಾಗ ಲೈಕ್ಸ್, ವೀವ್ಸ್ಗಾಗಿ ಬಟ್ಟೆಯನ್ನೇ ಬಲಿಕೊಟ್ಟು ಫೇಮಸ್ ಆದ ಲೇಡಿ ಟ್ರೋಲ್ ಸ್ಟಾರ್ನ ಟ್ರೋಲ್ ಮಾಡಿದ್ರಾ? ತಮ್ಮದೇ ಚಿತ್ರದ ಕರಿಮಣಿ ಮಾಲೀಕನನ್ನ ಟ್ರೋಲ್ ಮಾಡಿದ್ರಾ? ಯಶ್-ದರ್ಶನ್-ಸುಮಲತಾರನ್ನ ಟ್ರೋಲ್ ಮಾಡಿದ್ರಾ? ಕಾಂಗ್ರೆಸ್ ಸರ್ಕಾರದ ಫ್ರೀ ಗ್ಯಾರಂಟಿಗಳನ್ನ ಟ್ರೋಲ್ ಮಾಡಿದ್ರಾ? ಬೆಳ್ಳುಳ್ಳಿ ಕಬಾಬ್, ನಾನು ನಂದಿನಿ, ಎಲ್ಲಿದ್ದೀಯಪ್ಪ ನಿಖಿಲ್ ಹೀಗೆ ಎಲ್ಲರನ್ನ ಟ್ರೋಲ್ ಮಾಡಿದ್ರಾ? ಅಂತ ಈ ಹಾಡನ್ನ ಹಾಡಿನ ರೀತಿ ನೋಡಿದಾಗ ಯಾರಿಗಾದ್ರೂ ಅನಿಸುತ್ತೆ. ಆದ್ರೆ ಈ ಹಾಡಿನ ಅಸಲಿ ಕತೆ ಏನು ಅಂತಾ ಕೂಲಂಕುಷವಾಗಿ ಭೂತಗನ್ನಡಿ ಹಾಕಿ, ಕುಣಿತಿರೋ ನಾಯಕಿಯನ್ನ ಬಿಟ್ಟು ಆಕೆಯ ಸುತ್ತ ಮುತ್ತ ನೋಡಿದ್ರೆ ಉಪ್ಪಿ ಸಿನಿಮಾದ ಈ ಸಾಂಗ್ ಕತೆ ಗೊತ್ತಾಗುತ್ತೆ. ಹೌದು,  ಸಾಂಗ್ ನೋಡುವಾಗ ಬಹುತೇಕರ ಗಮನ ಹೀರೋಯಿನ್ ಡ್ಯಾನ್ಸ್ ಹಾಗೂ ಸಾಹಿತ್ಯದ ಮೇಲಿದೆ. ಆದರೆ, ಈ ಹಾಡಿನ ಮೂಲಕ ರಿಯಲ್ ಸ್ಟಾರ್ ಹಲವು ಸಮಸ್ಯೆಗಳನ್ನು ಹೇಳಲು ಪ್ರಯತ್ನಿಸಿದ್ದಾರೆ. ಸದ್ಯ ಬೆಂಗಳೂರಿನ ಹಲವೆಡೆ ನೀರಿಗಾಗಿ ಹಾಹಾಕಾರ ಎದುರಾಗುತ್ತಿದೆ. ಮಾತ್ರವಲ್ಲದೇ ರಾಜ್ಯದ ಹಲವು ಸ್ಥಳಗಳಲ್ಲಿ ಈ ಸಮಸ್ಯೆಯಿದೆ. ಯುಐ ಸಾಂಗ್ನಲ್ಲಿ  ನೀರಿನ ಸಮಸ್ಯೆ, ಗುಂಡಿಬಿದ್ದ ರಸ್ತೆ, ಟ್ರಾಫಿಕ್, ಜಗಳ ಇದೆಲ್ಲಾವನ್ನು ಬಿಟ್ಟು ಜನ ಮೊಬೈಲ್ನಲ್ಲಿ ಮುಳುಗಿರುವುದನ್ನು ತೋರಿಸಲಾಗಿದೆ.ಈ ಮೂಲಕ‌ ಲಿರಿಕ್ಸ್‌ ಮೂಲಕ ಮಾತ್ರವಲ್ಲದೆ ದೃಶ್ಯದ ಮೂಲಕವೂ ಜನರ ಬೇಜವಾಬ್ದಾರಿಗಳನ್ನು ಟ್ರೋಲ್ ಮಾಡಿದ್ದಾರೆ‌ ಉಪ್ಪಿ ಸಾರ್..

ಇದು ಈಗ ಅರ್ಥವಾಗಿರುವ ಅಂಶ.. ಉಪ್ಪಿ‌ ಸಿನಿಮಾದಲ್ಲಿ ಇನ್ನೂ ಅರ್ಥ ಆಗ್ಬೇಕಿರೋದು ಇನ್ನೆಷ್ಟಿದೆಯೋ ಗೊತ್ತಿಲ್ಲ.. ಅಂದ ಹಾಗೆ ಬೇರೆ ಭಾಷೆಗಳಲ್ಲಿ ಈ ಟ್ರೋಲ್‌ಸಾಂಗ್ ಅನ್ನು ಆಯಾ ಭಾಷೆಯ ಟ್ರೋಲ್‌‌ ಕಂಟೆಂಟ್ ಬಳಸಿಯೇ ಮಾಡಿದ್ದಾರೆ ಉಪೇಂದ್ರ. ಅದಕ್ಕೆ ಹೇಳೋದು ಉಪ್ಪಿಗಿಂತ ರುಚಿ ಬೇರೆಯಿಲ್ಲ.. ರಿಯಲ್‌ಸ್ಟಾರ್ ಯಾವಾಗಲೂ ಡಿಫರೆಂಟ್.

Shwetha M