ಸಿಲಿಕಾನ್‌ ಸಿಟಿ ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಜಪಾನ್‌ ತಂತ್ರಜ್ಞಾನ! – ಇದರ ವಿಶೇಷ ಏನು?

ಸಿಲಿಕಾನ್‌ ಸಿಟಿ ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಜಪಾನ್‌ ತಂತ್ರಜ್ಞಾನ! – ಇದರ ವಿಶೇಷ ಏನು?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಗಂಟೆಗಟ್ಟಲೇ ಟ್ರಾಫಿಕ್‌ನಲ್ಲಿ ಕಾಲಕಳೆಯುವಂತಾಗಿದೆ. ಸಂಚಾರಿ ಪೊಲೀಸರಿಗೂ ಇದು ತಲೆನೋವಾಗಿ ಪರಿಣಮಿಸಿದೆ. ಇದೀಗ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹೊಸ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ.

ಹೌದು, ರಾಜ್ಯರಾಜಧಾನಿ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಸರ್ಕಾರ  ಹತ್ತು ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಇದೀಗ ಜಪಾನ್‌ನ ಮೋಡ್‌ರಾಟೋ ಎಂಬ ತಂತ್ರಜ್ಞಾನವನ್ನು ನಗರ ಭೂ ಸಾರಿಗೆ ನಿರ್ದೇಶನಾಲಯವು ಬೆಂಗಳೂರಿನಲ್ಲಿ ಪರಿಚಯಿಸಿದೆ. ಈಗಾಗಲೇ ಹಲಸೂರು ಬಳಿಯ ಕೆನಿಂಗಟನ್‌ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್‌ಗಳಲ್ಲಿ ಹೊಸ ಟ್ರಾಫಿಕ್‌ ಸಿಗ್ನಲಿಂಗ್‌ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: ಇಡೀ ನಗರವನ್ನೇ ಆಕ್ರಮಿಸಿಕೊಂಡ ಮಂಗಗಳು! – ಕಪಿ ಸೈನ್ಯಗಳ ಹಾವಳಿಗೆ ನಗರವನ್ನೇ ತ್ಯಜಿಸುತ್ತಿದ್ದಾರೆ ವ್ಯಾಪಾರಿಗಳು!

ಜಪಾನ್‌ ಇಂಟರ್‌ನ್ಯಾಷನಲ್‌ ಕೋಆಪರೇಷನ್‌ ಏಜೆನ್ಸಿ ಈ ಯೋಜನೆಗೆ ಹಣಕಾಸಿನ ನೆರವು ನೀಡಿದೆ. ನಗರ ಭೂ ಸಾರಿಗೆ ನಿರ್ದೇಶನಾಲಯವು ಈ ಯೋಜನೆಯನ್ನು ಬೆಂಗಳೂರಿನಲ್ಲಿ ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಬೆಂಗಳೂರಿನ ಕೇಂದ್ರ ಪ್ರದೇಶದಲ್ಲಿ ಹೊಸ ಟ್ರಾಫಿಕ್‌ ಸಿಗ್ನಲ್‌ಗಳನ್ನು ಅಳವಡಿಸಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿರೀಕ್ಷೆಯಿದೆ.

ಕೆನಿಂಗಟನ್‌ ಹಾಗೂ ಮರ್ಫಿ ರಸ್ತೆಗಳ ಜಂಕ್ಷನ್‌ಗಳಲ್ಲಿ ಹೊಸ ಸಿಗ್ನಲ್‌ಗಳನ್ನು ಒಂದು ವಾರದ ಮಟ್ಟಿಗೆ ತಾತ್ಕಾಲಿಕವಾಗಿ ಸಕ್ರಿಯಗೊಳಿಸಲಾಗಿದ್ದು, ಸಿಗ್ನಲ್‌ಗಳ ಇನ್‌ಸ್ಟಾಲೇಶನ್‌ ಹಾಗೂ ಸ್ವಿಚ್ಚಿಂಗ್‌ ಕಾರ್ಯವಿಧಾನಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ, ಸಿಗ್ನಲ್‌ಗಳ ನಿಜವಾದ ಪರೀಕ್ಷೆ ಫೆಬ್ರವರಿ ಕೊನೆಯ ವಾರದಲ್ಲಿ ಪ್ರಾರಂಭವಾಗುತ್ತದೆ ಎಂದು ನಗರ ಭೂ ಸಾರಿಗೆ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2014ರಲ್ಲಿಯೇ ಈ ಹೊಸ ಸಿಗ್ನಲ್‌ಗಳನ್ನು ಪರಿಚಯಿಸುವ ಪ್ರಸ್ತಾಪವನ್ನು ಮಂಡಿಸಲಾಗಿತ್ತು. ಆದರೆ, ಆದರೆ, ಯೋಜನೆಯ ಕೆಲಸ ಆರಂಭವಾಗಿದ್ದು ಜುಲೈ 2021ರಲ್ಲಿ. ಅಕ್ಟೋಬರ್ 2022ರೊಳಗೆ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಡೆಡ್‌ಲೈನ್‌ ನೀಡಲಾಗಿತ್ತು. ಆದರೆ, ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗಿದ್ದು, ಇದುವರೆಗೂ ಉದ್ದೇಶಿತ ಯೋಜನೆ ಪೂರ್ಣಗೊಂಡಿಲ್ಲ.

ಸಂಚಾರ ದಟ್ಟಣೆ ಸಮಸ್ಯೆಯನ್ನು ನಿಯಂತ್ರಿಸಲು ಹಾಗೂ ಜಂಕ್ಷನ್‌ಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ ಅಡಾಪ್ಟಿವ್ ಸಿಗ್ನಲ್ ಕಂಟ್ರೋಲ್ ಟೆಕ್ನಾಲಜಿ (ASCT)ಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೊದಲು 29 ಜಂಕ್ಷನ್‌ಗಳಲ್ಲಿ ಹೊಸ ಸಿಗ್ನಲ್‌ ವ್ಯವಸ್ಥೆಯನ್ನು ಅಳವಡಿಸಲು ಯೋಜಿಸಲಾಗಿತ್ತು. ಆದರೆ, ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾರಣ ಒಂದು ಜಂಕ್ಷನ್‌ ಹೊರತುಪಡಿಸಿ, ಉಳಿದ 28 ಜಂಕ್ಷನ್‌ಗಳಲ್ಲಿ ಹೊಸ ಸಿಗ್ನಲ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಹೊಸ ಸಿಗ್ನಲ್ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸಲಿದೆ?

ಅಡಾಪ್ಟಿವ್ ಸಿಗ್ನಲ್ ಕಂಟ್ರೋಲ್ ಟೆಕ್ನಾಲಜಿ (ASCT)ಯ ವಾಹನ ಚಾಲಕರು ಮತ್ತು ಪಾದಚಾರಿಗಳಿಗೆ ಸಿಗ್ನಲ್‌ಗಳ ಮೂಲಕ ಸೇವೆ ಒದಗಿಸಲಿದೆ. ಈ ವ್ಯವಸ್ಥೆಯು ಸ್ವಯಂಚಾಲಿತ ಟ್ರಾಫಿಕ್ ಕೌಂಟರ್ ಮತ್ತು ವಾಹನ ಚಲನೆಯನ್ನು ಮಾಪನ ಮಾಡುತ್ತದೆ. ಅದಲ್ಲದೇ ಟ್ರಾಫಿಕ್‌ ಕ್ಯೂ ಎಷ್ಟು ದೂರ ಇದೆ ಎಂಬುದನ್ನು ಕೂಡ ಮೇಲ್ವಿಚಾರಣೆ ಮಾಡುವ ಎಎಸ್‌ಸಿಟಿ ತಂತ್ರಜ್ಞಾನವು ಸಿಗ್ನಲ್‌ ಸಮಯವನ್ನು ಕ್ರಿಯಾತ್ಮಕವಾಗಿ ಬದಲಾಯಿಸುತ್ತದೆ.

MODERATO ಎಂಬ ಕೇಂದ್ರಿಯ ನಿಯಂತ್ರಣ ಸಾಫ್ಟ್‌ವೇರ್‌ ಅನ್ನು ಈ ಯೋಜನೆಯಲ್ಲಿ ಬಳಸಲಾಗುತ್ತಿದ್ದು, ಇದರಿಂದ ಎಲ್ಲಾ ಜಂಕ್ಷನ್‌ಗಳಲ್ಲಿ ಸಿಗ್ನಲ್ ಹಂತ ಮತ್ತು ಸಮಯಗಳ ನೈಜ-ಸಮಯದ ಆಪ್ಟಿಮೈಸೇಶನ್ ಮಾಡಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ರಸ್ತೆ ಮೂಲಸೌಕರ್ಯಗಳ ಪರಿಣಾಮಕಾರಿ ಬಳಕೆಯಿಂದ ಈ ವ್ಯವಸ್ಥೆಯು ಜಂಕ್ಷನ್‌ಗಳಲ್ಲಿ ವಾಹನಗಳ ಉದ್ದ ಸಾಲನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

Shwetha M