ಟ್ರೈ ಜಂಕ್ಷನ್ ಕಿಂಗ್ ಇನ್ನು ಬರಿ ನೆನಪು ಮಾತ್ರ – ಹಠಾತ್ ಕುಸಿದು ಬಿದ್ದು ಅಕ್ಕಿ ಕಳ್ಳ ವಿನಾಯಕನ್ ಸಾವು

ಟ್ರೈ ಜಂಕ್ಷನ್ ಕಿಂಗ್ ಇನ್ನು ಬರಿ ನೆನಪು ಮಾತ್ರ – ಹಠಾತ್ ಕುಸಿದು ಬಿದ್ದು ಅಕ್ಕಿ ಕಳ್ಳ ವಿನಾಯಕನ್ ಸಾವು

ಟ್ರೈ ಜಂಕ್ಷನ್ ಕಿಂಗ್ ಇನ್ನು ಬರಿ ನೆನಪು ಮಾತ್ರ. ಅಕ್ಕಿ ಕಳ್ಳ ಆನೆ ಎಂದು ಫೇಮಸ್ ಆಗಿರುವ ವಿನಾಯಕನ್ ಇನ್ನಿಲ್ಲ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರದಲ್ಲಿ ಮಂಗಳವಾರ ಅಕ್ಕಿ ಕಳ್ಳ ಗಂಡಾನೆ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದೆ. ಅಭಿಮನ್ಯು ನಂತರ ದಸರಾ ಅಂಬಾರಿ ಹೊರಲು ಈ ಆನೆಯೇ ಸೂಕ್ತ ಎಂದು ಅಂದಾಜಿಸಲಾಗಿತ್ತು.

ಇದನ್ನೂ ಓದಿ: ಗುಂಡ್ಲುಪೇಟೆಯಲ್ಲೂ ಇದೆ ‘ಅಕ್ಕಿ ಕಳ್ಳ’ ಆನೆ – ಒಂಟಿ ಮನೆಗಳೇ ಪುಂಡಾನೆಯ ಟಾರ್ಗೆಟ್..!

35 ವರ್ಷದ ವಿನಾಯಕನ್ ಟ್ರೈ ಜಂಕ್ಷನ್ ಕಿಂಗ್ ಎಂದೇ ಖ್ಯಾತಿ ಪಡೆದಿದ್ದ. ಅಭಿಮನ್ಯು ಬಳಿಕ ದಸರಾ ಅಂಬಾರಿ ಹೊರಲು ಈತನೇ ಸೂಕ್ತ ಎನ್ನಲಾಗಿತ್ತು. ಹೀಗಾಗಿ ಈ ಆನೆಗೆ ತರಬೇತಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜಿಸಿದ್ದರು. ಆದರೆ, ಅಕ್ಕಿ ಕಳ್ಳ ವಿನಾಯಕನ್‌ ದಿಢೀರ್ ಅಂತಾ ಪ್ರಾಣ ಬಿಟ್ಟಿದ್ದಾನೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರದಲ್ಲಿ ವಿನಾಯಕನ್,  ಮಂಗಳವಾರ ಹಠಾತ್ ಕುಸಿದು ಬಿದ್ದಿದ್ದಾನೆ. ಸ್ಥಳದಲ್ಲಿದ್ದ ಪಶುವೈದ್ಯರು ಮತ್ತು ಇತರ ಅರಣ್ಯ ಸಿಬ್ಬಂದಿ ಆನೆಯನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯಲ್ಲಿ ಚಿಕಿತ್ಸೆ ನೀಡಿ ಪ್ರಯತ್ನಿಸಿದರು. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.

2021 ರಲ್ಲಿ ಕೊಯಮತ್ತೂರಿನಲ್ಲಿ ಆನೆಯನ್ನು ಸೆರೆಹಿಡಿಯಲಾಗಿತ್ತು. ಮತ್ತು ತಮಿಳುನಾಡು ಅರಣ್ಯ ಇಲಾಖೆಯು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಆನೆಯನ್ನು ಬಿಟ್ಟಿತ್ತು. ಇದು ಬಂಡೀಪುರದ ಎಲಚಟ್ಟಿ ಗ್ರಾಮದ ಕಾಡಂಚಿನ ಮನೆಗಳಿಗೆ ಲಗ್ಗೆ ಇಟ್ಟು ಅಕ್ಕಿ, ತರಕಾರಿ ಕದ್ದು ತಿನ್ನುತ್ತಿತ್ತು. ಬೆಳೆ ನಾಶ ಮಾಡುತ್ತಿತ್ತು. ಹೀಗಾಗಿ ಬಂಡೀಪುರದ ಎಲಚಟ್ಟಿಯ ಗುಡ್ಡೇಕೇರಿ ಸಮೀಪ ಐದು ತಿಂಗಳ ಹಿಂದೆ ಕರ್ನಾಟಕ ಅರಣ್ಯ ಇಲಾಖೆ ಈ ಆನೆಯನ್ನು ಸೆರೆ ಹಿಡಿದಿತ್ತು. ಮತ್ತು ರಾಮಾಪುರ ಶಿಬಿರದಲ್ಲಿ ಆನೆಯನ್ನು ಇರಿಸಲಾಗಿತ್ತು. ಈ ಆನೆ ಅಕ್ಕಿ ಕಳ್ಳ ಎಂದೇ ಫೇಮಸ್ ಆಗಿತ್ತು.

ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಯಲಿದ್ದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Sulekha