ಚಾರಣ ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ – ಟ್ರೆಕ್ಕಿಂಗ್ ನಿಷೇಧ!
ಕೆಲವ್ರಿಗೆ ಬೆಟ್ಟ ಹತ್ತೋದು ಟ್ರೆಕ್ಕಿಂಗ್ ಹೋಗೋದು ಅಂದ್ರೆ ತುಂಬಾನೇ ಇಷ್ಟ. ಆದ್ರೆ ಇಂತಹ ಅಡ್ವೆಂಚರಸ್ ಪ್ರವಾಸಿಗರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಚಾರಣಕ್ಕೆ ನಿಷೇಧ ವಿಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಹೌದು, ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಅರಣ್ಯ ಪ್ರದೇಶದಲ್ಲಿ ಟ್ರೆಕ್ಕಿಂಗ್ ನಿಷೇಧಿಸುವಂತೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದರು. ಅರಣ್ಯವ್ಯಾಪ್ತಿಯ ಗಿರಿ ಶಿಖರಗಳಲ್ಲಿ ಚಾರಣ ಮಾಡುವ ಹವ್ಯಾಸ ಅಧಿಕವಾಗಿದ್ದು, ಇದು ವಾರಾಂತ್ಯದಲ್ಲಿ ಜನದಟ್ಟಣೆಗೆ ಕಾರಣವಾಗಿದೆ. ಹೀಗೆ ಬರುವವರು ಅರಣ್ಯದ ಅಂಚಿನ ಗ್ರಾಮಗಳಲ್ಲಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಉಳಿದ ಆಹಾರ ಪದಾರ್ಥ ಇತ್ಯಾದಿಗಳನ್ನು ಎಸೆಯುತ್ತಿದ್ದು, ಇದು ವನ್ಯಜೀವಿಗಳಿಗೆ ಅಪಾಯ ತರುತ್ತಿದೆ. ಹೀಗಾಗಿ ನಿಷೇಧ ಹೇರಲಾಗಿದೆ.
ಇದನ್ನೂ ಓದಿ: ಟಾಲಿವುಡ್ ಸ್ಟಾರ್ ಪ್ರಭಾಸ್ ಗೆ ಯುರೋಪ್‌ನಲ್ಲಿ ಟ್ರೀಟ್‌ಮೆಂಟ್ – ಮಾರ್ಚ್ ತನಕ ಸಿನಿಮಾ ಕೆಲಸ ಬಂದ್
ಗಣರಾಜ್ಯೋತ್ಸವದ ದಿನ ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಆಗಮಿಸಿದ್ದು, ಎಲ್ಲೆಂದರಲ್ಲಿ ಕಸ ಬಿಸಾಡಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಕೆಲವರು ಟೆಂಟ್ ಹಾಕಿ ರಾತ್ರಿ ಪರ್ವತದಲ್ಲಿ ಉಳಿಯುತ್ತಾರೆ ಎನ್ನಲಾಗಿದೆ. ಪರಿಸರ ತಜ್ಞರು ಅರಣ್ಯ ಉಳಿವಿನ ಬಗ್ಗೆ ತಮ್ಮ ಕಳಕಳಿ ಜೊತೆಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ರೀತಿ ಸಾವಿರಾರು ಸಂಖ್ಯೆಯಲ್ಲಿ ಚಾರಣಕ್ಕೆ ಬರುವವರನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗಿದೆ. ಜೊತೆಗೆ ಅವರ ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಪರಿಸರಕ್ಕೂ ಹಾಣಿಯಾಗುತ್ತಿದೆ. ಹೀಗಾಗಿ ಹೊಸ ಮಾರ್ಗಸೂಚಿ ಜಾರಿಯಾಗುವವರೆಗೂ ಬುಕ್ಕಿಂಗ್ ಇಲ್ಲದ ಚಾರಣಕ್ಕೆ ನಿಷೇಧ ಹೇರುವಂತೆ ಸೂಚನೆ ನೀಡಿದ್ದಾರೆ.
“ರಾಜ್ಯದ ಎಲ್ಲ ಚಾರಣ ತಾಣ (ಟ್ರಕ್ಕಿಂಗ್ ಪಾಯಿಂಟ್)ಗಳಲ್ಲೂ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಮತ್ತು ನಿರ್ದಿಷ್ಟ ಸಂಖ್ಯೆಗೆ ಸೀಮಿತಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಮಾಣಿತ ಕಾರ್ಯ ವಿಧಾನ ರೂಪಿಸುವವರೆಗೆ ಆನ್ ಲೈನ್ ಬುಕ್ಕಿಂಗ್ ಇಲ್ಲದ ಎಲ್ಲ ಚಾರಣ ತಾಣಗಳಲ್ಲಿ ತಾತ್ಕಾಲಿಕವಾಗಿ ಚಾರಣ ನಿರ್ಬಂಧಿಸುವಂತೆ ಸೂಚಿಸಿದ್ದಾರೆ.
ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ನಿರ್ವಹಿಸುವ ಟ್ರೆಕ್ಕಿಂಗ್ ಮಾರ್ಗಗಳಲ್ಲಿ 150 ಕ್ಕಿಂತ ಹೆಚ್ಚು ಜನರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.