ಅಮೆರಿಕಕ್ಕೆ ಹೋಗೋ ಪ್ಲಾನ್ ಇದ್ಯಾ? – ಭಾರತೀಯರಿಗೆ ವೀಸಾ ಪಡೆಯಲು ಹೊಸ ನಿಯಮ

ನವದೆಹಲಿ: ಅಮೆರಿಕ ವೀಸಾ ಪಡೆಯಲು ಪರದಾಡುತ್ತಿರುವವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಇಷ್ಟು ದಿನ ಯುಎಸ್ ವೀಸಾ ಪಡೆಯಲು 500 ದಿನಗಳಿಗೂ ಹೆಚ್ಚು ಕಾಲ ಕಾಯಬೇಕಿತ್ತು. ಇದಕ್ಕೆ ಕಡಿವಾಣ ಹಾಕಲು ವೀಸಾ ವಿತರಣೆಯ ಹೊಸ ನಿಯಮವನ್ನು ಜಾರಿಗೊಳಿಸಲು ಅಮೆರಿಕ ರಾಯಭಾರಿ ಕಚೇರಿ ಮುಂದಾಗಿದೆ.
ವಿದೇಶಕ್ಕೆ ತೆರಳುವ ಭಾರತೀಯರು ತಮ್ಮ ಜಾಗದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಅಥವಾ ಕಾನ್ಸುಲೇಟ್‌ನಲ್ಲಿ ವೀಸಾ ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಬಹುದು. ಥಾಯ್ಲೆಂಡ್ ಅನ್ನು ಉದಾಹರಣೆಯಾಗಿ ನೀಡಿರುವ ಎಂಬೆಸಿ, ದೇಶವು ಬಿ1 ಮತ್ತು ಬಿ2 ವೀಸಾ (ಪ್ರಯಾಣ ಹಾಗೂ ಉದ್ಯಮ ನಿಮಿತ್ತ) ಅಪಾಯಿಂಟ್‌ಮೆಂಟ್ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ವಿಮಾನದಲ್ಲೇ ಸ್ಕೂಲ್, ಆಫೀಸ್ ಗಳಿಗೆ ಸಂಚಾರ – ಈ ಊರಿನ ಪ್ರತೀ ಮನೆಯಲ್ಲೂ ಇವೆ ಫ್ಲೈಟ್!
ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕ ರಾಯಭಾರಿ ಕಚೇರಿ “ನೀವು ಮುಂದೆ ಅಂತಾರಾಷ್ಟ್ರೀಯ ಪ್ರಯಾಣ ಮಾಡುವವರಿದ್ದೀರಾ? ಹಾಗಿದ್ರೆ ನೀವಿರುವ ಸ್ಥಳದಿಂದಲೇ ಅಮೆರಿಕದ ಎಂಬೆಸಿ ಅಥವಾ ಕಾನ್ಸುಲೇಟ್‌ನಲ್ಲಿ ವೀಸಾ ಅಪಾಯಿಟ್‌ಮೆಂಟ್ ಪಡೆಯಲು ಸಾಧ್ಯವಾಗಲಿದೆ. ಉದಾಹರಣೆಗೆ, ಬ್ಯಾಂಕಾಕ್‌ನಲ್ಲಿನ ಅಮೆರಿಕದ ಎಂಬೆಸಿಯು ಮುಂಬರುವ ತಿಂಗಳುಗಳಲ್ಲಿ ಥಾಯ್ಲೆಂಡ್‌ನಲ್ಲಿರುವ ಭಾರತೀಯರಿಗೆ B1, B2 ಅಪಾಯಿಂಟ್‌ಮೆಂಟ್ ಅವಕಾಶವನ್ನು ತೆರೆಯಲಿದೆ” ಎಂದು ರಾಯಭಾರಿ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ.
ಭಾರತದಲ್ಲಿ ವೀಸಾ ನೀಡುವ ಪ್ರಕ್ರಿಯೆಗೆ ಚುರುಕು ನೀಡುವ ಸಂಬಂಧ ಇತ್ತೀಚೆಗೆ ಅಮೆರಿಕ ಕೆಲ ನೂತನ ಕ್ರಮಗಳಿಗೆ ಚಾಲನೆ ನೀಡಿದೆ. ವೀಸಾ ಕೋರಿ ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ವಿಶೇಷ ಸಂದರ್ಶನ ಆಯೋಜನೆ, ಕಾನ್ಸುಲೇಟ್ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳ ಸೇರಿದಂತೆ ಅನೇಕ ಕ್ರಮಗಳಿಗೆ ಚಾಲನೆ ಕೊಟ್ಟಿದೆ.
ಇದರ ಭಾಗವಾಗಿ ದೆಹಲಿಯಲ್ಲಿರುವ ರಾಯಭಾರ ಕಚೇರಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಹಾಗೂ ಹೈದರಾಬಾದ್‌ನಲ್ಲಿರುವ ಕಾನ್ಸುಲೇಟ್ ಕಚೇರಿಗಳಲ್ಲಿ ವೀಸಾ ನೀಡುವ ಸಂದರ್ಶನ ನಡೆಸಲಾಯಿತು. ಭಾರತದಲ್ಲಿ ಅಮೆರಿಕ ಮಿಷನ್, ಕಳೆದ ಎರಡು ವಾರಗಳ ಹಿಂದೆ 2,50,000ಕ್ಕೂ ಅಧಿಕ ಹೆಚ್ಚುವರಿ ಬಿ1/ ಬಿ2 ಅಪಾಯಿಂಟ್‌ಮೆಂಟ್‌ಗಳನ್ನು ಬಿಡುಗಡೆ ಮಾಡಿತ್ತು.