ಗತವೈಭವ ಸಾರುವ ಅರಮನೆ ಈಗ ಐಷಾರಾಮಿ ಹೋಟೆಲ್ – ಒಂದು ದಿನಕ್ಕೆ 10 ₹ಲಕ್ಷ.. ಏನೆಲ್ಲಾ ವಿಶೇಷತೆ?

ಗತವೈಭವ ಸಾರುವ ಅರಮನೆ ಈಗ ಐಷಾರಾಮಿ ಹೋಟೆಲ್ – ಒಂದು ದಿನಕ್ಕೆ 10 ₹ಲಕ್ಷ.. ಏನೆಲ್ಲಾ ವಿಶೇಷತೆ?

ಪ್ರವಾಸಕ್ಕೆ ಹೋದಾಗಲೋ, ಪರವೂರಿಗೆ ಹೋದಾಗಲೋ, ಅನಿವಾರ್ಯವಾಗಿಯೋ ಕೆಲವೊಮ್ಮೆ ಹೋಟೆಲ್​ಗಳಲ್ಲಿ ತಂಗಬೇಕಾಗುತ್ತದೆ. ಕೆಲವು ಹೋಟೆಲ್​ಗಳಲ್ಲಿ ಒಂದು ದಿನಕ್ಕೆ ಸಾವಿರದಿಂದ ಲಕ್ಷದವರೆಗೂ ಹಣ ಕೊಡಬೇಕಾಗುತ್ತದೆ. ಸೀಸನ್ ಅಲ್ಲದ ವೇಳೆಯಲ್ಲಿ 500, 600 ರೂಪಾಯಿಗೂ ಹೋಟೆಲ್​ಗಳಲ್ಲಿ ರೂಮ್​ಗಳು ಸಿಗುತ್ತವೆ. ಆದರೆ ಈ ಹೋಟೆಲ್​ನಲ್ಲಿ ನೀವು ಒಂದು ದಿನ ತಂಗಬೇಕು ಅಂದರೆ ಕಂತೆ ಕಂತೆ ಹಣ ಇಟ್ಟುಕೊಂಡು ಹೋಗಲೇಬೇಕು. ಅರೆ ಅದ್ಯಾವುದಪ್ಪ ಅಂಥಾ ಹೋಟೆಲ್, ಅದ್ರಲ್ಲಿ ಅಂಥಾ ಸ್ಪೆಷಾಲಿಟಿ ಏನಿದೆ ಅಂದುಕೊಂಡ್ರಾ..? ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಜಸ್ಥಾನ ಹೇಳಿ ಕೇಳಿ ಅದ್ಭುತ ವೈಶಿಷ್ಟ್ಯಗಳನ್ನ ಹೊಂದಿರುವ ರಾಜ್ಯ. ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸದ ಅದ್ಭುತ ಕಥೆಗಳನ್ನು ಹೇಳುವ ಅನೇಕ ಅರಮನೆಗಳು ಇಲ್ಲಿವೆ. ಅದರಲ್ಲೂ ರಾಜಧಾನಿ ಜೈಪುರದಲ್ಲಿರುವ ‘ರಾಂಬಾಗ್ ಅರಮನೆ’ ವಿಶ್ವದ ಸುಂದರ ಅರಮನೆ. ಇದರ ಅದ್ಭುತ ಸೌಂದರ್ಯ ನೋಡಿ ಈ ಅರಮನೆಗೆ ‘ಜೈಪುರದ ಜ್ಯುವೆಲ್’ ಎಂದು ಸಹ ಕರೆಯುತ್ತಾರೆ.

ಇತಿಹಾಸದಲ್ಲಿ ಅರಮನೆಯಾಗಿದ್ದ (Palace) ಈ ರಾಂಬಾಗ್‌ ಪ್ಯಾಲೇಸ್‌ ಈಗ ವಿಶ್ವದ ಅತ್ಯದ್ಭುತ ಹೋಟೆಲ್‌ಗಳಲ್ಲಿ (Hotel)ಒಂದಾಗಿದೆ. ಟ್ರಾವೆಲ್ ವೆಬ್‌ಸೈಟ್ ಟ್ರಿಪ್ ಅಡ್ವೈಸರ್ ಪ್ರಕಟಿಸಿದ ಇತ್ತೀಚಿನ ಪಟ್ಟಿಯ ಪ್ರಕಾರ ಜೈಪುರದ ರಾಂಬಾಗ್ ಅರಮನೆಯನ್ನು ವಿಶ್ವದ ಅತ್ಯುತ್ತಮ ಹೋಟೆಲ್ ಎಂದು ಹೆಸರಿಸಲಾಗಿದೆ.

ಟಾಟಾ ಗ್ರೂಪ್‌ನ ಒಡೆತನದ ಜೈಪುರದ ರಾಮ್‌ಬಾಗ್ ಅರಮನೆಯು ಟ್ರಾವೆಲ್ ಪ್ಲಾಟ್‌ಫಾರ್ಮ್‌ನ ವಿಶ್ವದ 2023ರ ಅತ್ಯುತ್ತಮ ಹೋಟೆಲ್‌ಗಳಲ್ಲಿ ಟ್ರಾವೆಲರ್ಸ್ ಚಾಯ್ಸ್‌ನ ಅತ್ಯುತ್ತಮ ಹೋಟೆಲ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಒಮ್ಮೆ ಈ ಹೋಟೆಲ್‌ ಒಳಗೆ ಪ್ರವೇಶಿಸಿದರೆ ರಾಜರ ಅರಮನೆಗೆ ಎಂಟ್ರಿ ನೀಡಿದ ಅನುಭವವಾಗುತ್ತದೆ. ಆಧುನಿಕತೆ ಜೊತೆಗೆ ಐತಿಹಾಸಿಕ ಕುರುಹುಗಳನ್ನು ಉಳಿಸಿಕೊಂಡಿರುವ ಈ ಹೋಟೆಲ್‌ ಅದ್ಧೂರಿತನಕ್ಕೆ ಉತ್ತಮ ಉದಾಹರಣೆಯಾಗಿದೆ.

ಈ ಉನ್ನತ ಶ್ರೇಣಿಯ ಹೆರಿಟೇಜ್ ಹೋಟೆಲ್ ಅದ್ಧೂರಿತನದಿಂದ ಕೂಡಿದ್ದು, ಒಂದು ದಿನದ ವಾಸಕ್ಕೆ ಗ್ರಾಹಕರು ಲಕ್ಷಲಕ್ಷ ವ್ಯಯಿಸಬೇಕು. ರಾಂಬಾಗ್ ಪ್ಯಾಲೇಸ್‌ನಲ್ಲಿ ಒಂದು ದಿನದ ವಾಸ್ತವ್ಯಕ್ಕೆ 10 ಲಕ್ಷಗಳವರೆಗೆ ಶುಲ್ಕ ವಿಧಿಸಬೇಕಾಗುತ್ತದೆ. ಆದಾಗ್ಯೂ ಕಲ್ಪಿತ ಸುಖ್ ನಿವಾಸ್ ಸೂಟ್‌ನಲ್ಲಿ ಆಫ್-ಸೀಸನ್‌ನಲ್ಲಿ 4.7 ಲಕ್ಷ ರೂಗೆ ಹೋಟೆಲ್‌ ರೂಮ್‌ ಅನ್ನು ಬುಕ್ ಮಾಡಬಹುದು.

ಪ್ಯಾಲೇಸ್‌ ಹೋಟೆಲ್‌ ಆಧುನಿಕ ಸವಲತ್ತುಗಳನ್ನು ಒಳಗೊಂಡಿದ್ದು, ಐತಿಹಾಸಿಕ ಅಲಂಕಾರಗಳು ಸಹ ಇವೆ. ಹೆರಿಟೇಜ್ ಹೋಟೆಲ್ ವಿವಿಧ ವಸತಿ ಆಯ್ಕೆಗಳನ್ನು ಮತ್ತು 70 ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿದೆ. ಅರಮನೆಯ ವಸತಿಗೃಹದಿಂದ ಹಿಡಿದು ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸುಖ್ ನಿವಾಸ್ ಸೂಟ್‌ ಅನ್ನು ಹೊಂದಿದೆ.

ಹಳೆಯ ಐತಿಹಾಸಿಕ ಕುರುಹುಗಳನ್ನು ಕಾಪಾಡಿಕೊಳ್ಳಲು ಈ ಹೋಟೆಲ್ ಕೆಲವು ಮೂಲ ಪೀಠೋಪಕರಣಗಳನ್ನು ಪ್ರತಿ ಕೋಣೆಗಳಲ್ಲೂ ಇರಿಸಿದೆ. ರಾಜಮನೆತನದ ಅಲಂಕಾರಗಳು ಮತ್ತು ರಾಜಮನೆತನದ ಬಣ್ಣದ ಪರಿಕಲ್ಪನೆ ಇನ್ನೂ ಸಹ ಹೋಟೆಲ್‌ನಲ್ಲಿ ಕಾಣಬಹುದು.

ಪ್ರೀಮಿಯಂ ಹೋಟೆಲ್‌ನ ಊಟದ ಆಯ್ಕೆಗಳಲ್ಲಿ ಸುವರ್ಣ ಮಹಲ್, ಸ್ಟೀಮ್, ವೆರಾಂಡಾ ಕೆಫೆ, ರಜಪೂತ್ ರೂಮ್ ಮತ್ತು ಪೊಲೊ ಬಾರ್ ಸೇರಿವೆ, ಸಾಂಪ್ರದಾಯಿಕ ರಾಜಸ್ಥಾನಿ ತಾಲಿ ಜೊತೆಗೆ ವಿವಿಧ ಪಾಕಪದ್ಧತಿಗಳನ್ನು ನೀಡುತ್ತದೆ. ಜೈಪುರದ ರಾಮ್‌ಬಾಗ್ ಅರಮನೆಯಲ್ಲಿರುವ ಇತರ ವೈಶಿಷ್ಟ್ಯಗಳೆಂದರೆ ಹೆಲ್ತ್‌ ಕ್ಲಬ್‌ಗಳು, ಸ್ಪಾಗಳು ಸೇರಿ ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿವೆ.

ರಾಂಬಾಗ್ ಅರಮನೆಯನ್ನು ಆ ಕಾಲದ ರಾಣಿಯ ನೆಚ್ಚಿನ ಸೇವಕಿ ಕೇಸರಿ ಬರ್ಡನ್ ಗಾಗಿ 1835ರಲ್ಲಿ ನಿರ್ಮಿಸಲಾಗಿತ್ತು. ನಂತರ ಇದನ್ನು ಅರಮನೆಯನ್ನಾಗಿ ಪರಿವರ್ತಿಸಿ ಜೈಪುರದ ಮಹಾರಾಜರ ನಿವಾಸವಾಗಿ ಬಳಸಲಾಯಿತು. ಆ ಕಾಲದ ರಾಜ ಸವಾಯಿ ಮನ್ ಸಿಂಗ್ 2 ಮತ್ತು ಮಹಾರಾಣಿ ಗಾಯತ್ರಿ ದೇವಿಯ ಈ ಅರಮನೆಯಲ್ಲಿ ಉಳಿದುಕೊಳ್ಳಲು ಹಲವು ಬದಲಾವಣೆಗಳನ್ನು ಮಾಡಿದರೆಂದು ಹೇಳಲಾಗುತ್ತಿದೆ.

ಮರಳುಗಲ್ಲು ಮತ್ತು ಅಮೃತಶಿಲೆಯಿಂದ ಮಾಡಲ್ಪಟ್ಟ ರಾಂಬಾಗ್ ಅರಮನೆಯು ಆ ಕಾಲದ ಅದ್ಭುತ ಕಲೆಗೆ ಮಾದರಿಯಾಗಿದೆ. ಹಾಗೇ ಈ ಅರಮನೆ ನಿರ್ಮಿಸಲು ಮರಗಳನ್ನು ಸಹ ಬಳಸಲಾಗಿದೆ.

ಮಹಾರಾಜರು ಗಾಯತ್ರಿ ದೇವಿಯನ್ನು ಮದುವೆಯಾದ ನಂತರ 1938ರಲ್ಲಿ ಈ ಅರಮನೆಯನ್ನು ನವೀಕರಿಸಿದ್ದಾರೆ ಮತ್ತು ಇದಕ್ಕೆ ‘ಸ್ವೀಟ್ ಡಿಸೈನ್’ ಎಂದು ಹೆಸರಿಡಲಾಗಿತ್ತು. ಇಲ್ಲಿ ಅನೇಕ ದರ್ಬಾರ್ ಹಾಲ್, ಈಜುಕೊಳ, ಗ್ರಂಥಾಲಯಗಳು, ಐಷಾರಾಮಿ ಕೊಠಡಿಗಳು ಇವೆ. ಇದೀಗ ಅದ್ಧೂರಿ ಹೆರಿಟೇಜ್ ಹೋಟೆಲ್ ಆಗಿ ರೂಪಾಂತರಗೊಂಡಿರುವ ರಾಂಬಾಗ್‌ ಪ್ಯಾಲೇಸ್, ಇಲ್ಲಿಗೆ ಬರುವ ಅತಿಥಿಗಳಿಗೆ ಈಗಲೂ ರಾಜ ಮರ್ಯಾದೆಯಿಂದ ನಡೆಸಿಕೊಳ್ಳುತ್ತದೆ.

suddiyaana