ನೀರಿನ ಮಹತ್ವ ಸಾರಲು ಕನ್ಯಾಕುಮಾರಿಯಿಂದ ಬಾಂಗ್ಲಾದೇಶಕ್ಕೆ ಪ್ರಯಾಣ- ಯುವಕನ ಶ್ರಮಕ್ಕೆ ಹ್ಯಾಟ್ಸಾಪ್
ಕೋಲ್ಕತ್ತಾ: ಪ್ರಪಂಚದ ಪ್ರತಿಯೊಂದು ಜೀವಿಗೂ ನೀರು ಅತ್ಯಮೂಲ್ಯ. ವಿಶ್ವದ ಹಲವು ದೇಶಗಳಲ್ಲಿ ನೀರಿನ ಕೊರತೆ ಎಂಬುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ನೀರಿನ ಸಂರಂಕ್ಷಣೆ ಬಗ್ಗೆ ಅನೇಕ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುತ್ತಿವೆ. ಆದರೆ ಇಲ್ಲೊಬ್ಬ ಯುವಕ ನೀರಿನ ಮಹತ್ವವನ್ನು ಸಾರಲು ದೇಶ- ವಿದೇಶಗಳಿಗೆ ಸೈಕ್ಲಿಂಗ್ ಮೂಲಕ ಸಾಗಿದ್ದಾನೆ.
ಕೋಲ್ಕತ್ತಾದ ಬಾಘಾ ಜತಿನ್ ಸಾಮ್ರಾಟ್ ಮೌಲಿಕ್ ಎಂಬಾತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಾವು ಭೇಟಿ ನೀಡುವ ಪ್ರದೇಶಗಳ ಜಲಮಾಲಿನ್ಯದ ಪರಿಸ್ಥಿತಿಯನ್ನು ಕಂಡು ಅವರು ದಿಗ್ಭ್ರಮೆಗೊಂಡರಂತೆ. ಅಲ್ಲದೇ ಯಾವುದೇ ದೇಶದ ಜಲಮೂಲ ಕಲುಷಿತಗೊಂಡರೆ ಅದು ಆ ದೇಶಕ್ಕೆ ಮಾತ್ರ ಸಮಸ್ಯೆಯಾಗುವುದಿಲ್ಲ. ಆ ನೀರಿನ ಹರಿವಿನಿಂದಾಗಿ ಉಳಿದ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಇದಕ್ಕಾಗಿ ತಾವು 2016 ರಲ್ಲಿ ತಮ್ಮ ಕೆಲಸ ತ್ಯಜಿಸಿ, ಮನುಕುಲಕ್ಕೆ ನೀರಿನ ಮಹತ್ವದ ಬಗ್ಗೆ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಏಕಾಂಗಿಯಾಗಿ ನಿರ್ಧರಿಸಿದರು. ಇದಕ್ಕೆ ಆರಿಸಿಕೊಂಡ ಏಕೈಕ ಮಾರ್ಗವೆಂದರೆ ಬೈಸಿಕಲ್. ನೀರಿನ ಮಹತ್ವ ಸಾರಲು ಮೌಲಿಕ್ ದೇಶ- ವಿದೇಶಗಳಿಗೆ ಸೈಕಲ್ ನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲೇ ಟೋಮ್ಯಾಟೋ ಬೀಜ ಬಿತ್ತನೆ – ನಾಸಾ ಸಂಶೋಧಕರಿಂದ ಮತ್ತೊಂದು ಪ್ರಯೋಗ
ಮೌಲಿಕ್ ಈಗಾಗಲೇ ಥೈಲ್ಯಾಂಡ್, ರಷ್ಯಾ, ಶ್ರೀಲಂಕಾ ಮತ್ತು ಇತ್ತೀಚೆಗೆ ಬಾಂಗ್ಲಾದೇಶಕ್ಕೂ ಕೂಡ ತಮ್ಮ ಸೈಕಲ್ ನಲ್ಲೇ ತೆರಳಿದ್ದಾರೆ. ಅಲ್ಲದೇ ಲಡಾಕ್ ನಿಂದ ಕನ್ಯಾಕುಮಾರಿಗೆ ಸೈಕಲ್ ಪ್ರಯಾಣಿಸಿದ್ದಲ್ಲದೆ, ಮತ್ತೊಂದೆಡೆ ಮೌಲಿಕ್ ನೀರನ್ನು ಉಳಿಸುವ ಸಲುವಾಗಿ ಜನರಿಗೆ ಸಾಮಾಜಿಕ ಸಂದೇಶ ತಲುಪಿಸಲು ಗಂಗೋತ್ರಿಯಿಂದ ಗಂಗಾ ನದಿ ತಪ್ಪಲು, ಬಂಗಾಳಕೊಲ್ಲಿ ಮುಂತಾದೆಡೆಗೆ ಸಾಗಿದ್ದರು. ಸೈಕಲ್ ಮೂಲಕ ಇಲ್ಲಿಯವರೆಗೆ 15,000 ಕಿ,ಮೀ ದೂರ ಕ್ರಮಿಸಿದ್ದಾರೆ.
ನನಗೆ ಬಾಲ್ಯದಿಂದಲೂ ಸೈಕಲ್ ತುಳಿಯಬೇಕು ಎಂಬ ಕನಸಿತ್ತು. ಯಾಕೆಂದರೆ ಒಂದೆಡೆ ಸೈಕಲ್ ಪರಿಸರ ಸ್ನೇಹಿ ವಾಹನ. ಇನ್ನೊಂದೆಡೆ ಸೈಕಲ್ ತುಳಿಯುವ ಮೂಲಕ ಎಲ್ಲಿ ಬೇಕಾದರೂ ತಲುಪಬಹುದು. ಈ ರೀತಿಯ ಪ್ರವಾಸದಿಂದ ನಾವು ವಿವಿಧ ಸ್ಥಳಗಳಲ್ಲಿ ಜನರೊಂದಿಗೆ ಬೆರೆಯುವುದರೊಂದಿಗೆ ಅವರ ದೈನಂದಿನ ಜೀವನವನ್ನು ಅರಿಯಬಹುದು. ಅಲ್ಲದೇ ಅಲ್ಲಿನ ಜನರಿಗೆ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಬಹುದು. ಜನರಿಗೆ ಅರಿವು ಮೂಡಿದರೆ ಈ ಜಾಗೃತಿ ಯಶಸ್ವಿಯಾಗುತ್ತದೆ ಎಂದು ಸಾಮ್ರಾಟ್ ಮೌಲಿಕ್ ತಿಳಿಸಿದ್ದಾರೆ.