ಚೀನಾದಲ್ಲಿ ಪ್ರಬಲ ಭೂಕಂಪ – 111 ಜನರ ದುರ್ಮರಣ, 230ಕ್ಕೂ ಹೆಚ್ಚು ಮಂದಿಗೆ ಗಾಯ

ಚೀನಾದಲ್ಲಿ ಪ್ರಬಲ ಭೂಕಂಪ – 111 ಜನರ ದುರ್ಮರಣ, 230ಕ್ಕೂ ಹೆಚ್ಚು ಮಂದಿಗೆ ಗಾಯ

ಚೀನಾದಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಗನ್ಸು-ಕಿಂಗ್ಹೈ ಗಡಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 111 ಮಂದಿ ಸಾವನ್ನಪ್ಪಿದ್ದಾರೆ. 230ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ ಬೆಳ್ಳಂಬೆಳಗ್ಗೆ ಕ್ವಿಂಗ್‌ಹೈ ಪ್ರಾಂತ್ಯದ ಹಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರವು ಭೂಕಂಪದ ತೀವ್ರತೆಯನ್ನು 6.1 ಎಂದು ಗುರುತಿಸಿದೆ. ಆದ್ರೆ ಚೀನಾದ ಸರ್ಕಾರಿ ಮಾಧ್ಯಮ ಭೂಕಂಪದ ತೀವ್ರತೆ 6.2 ಎಂದು ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು ಪಶ್ಚಿಮ-ನೈಋತ್ಯಕ್ಕೆ 102 ಕಿಮೀ ದೂರದಲ್ಲಿರುವ ಗನ್ಸು ಪ್ರಾಂತ್ಯದ ರಾಜಧಾನಿ ಲಾನ್‌ಝೌ ಬಳಿ 35 ಕಿಮೀ ಆಳದಲ್ಲಿ ಪತ್ತೆಯಾಗಿದೆ. ವಿಪತ್ತು ನಿರ್ವಹಣೆ, ಕಡಿತ ಮತ್ತು ಪರಿಹಾರಕ್ಕಾಗಿ ಚೀನಾದ ರಾಷ್ಟ್ರೀಯ ಆಯೋಗ ಮತ್ತು ತುರ್ತು ನಿರ್ವಹಣೆಯ ಸಚಿವಾಲಯವು 4ನೇ ಹಂತದ ಪರಿಹಾರ, ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.

ಇದನ್ನೂ ಓದಿ: ಭಯಂಕರ ಬರ.. ನೀರು, ಆಹಾರವಿಲ್ಲದೆ 100ಕ್ಕೂ ಹೆಚ್ಚು ಆನೆಗಳು ಸಾವು – ನದಿಯೇ ಇಲ್ಲದ ಕಾಡಿನಲ್ಲಿ ಮೂಲಪ್ರಾಣಿಗಳ ವೇದನೆ

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭೂಕಂಪದ ನಂತರ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಪ್ರಮುಖ ನಿರ್ದೇಶನ ನೀಡಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳು, ಸಂಕಷ್ಟಕ್ಕೆ ಸಿಲುಕಿರುವ ಜನರ ಪುನರ್ವಸತಿಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲಾಗುತ್ತಿದೆ.

ಚೀನಾ ಹವಾಮಾನ ಪರಿಸ್ಥಿತಿಯೂ ಶೀತಮಯವಾಗುತ್ತಿದೆ. ಮಂಗಳವಾರ ಬೆಳಗ್ಗೆ ಭೂಕಂಪ ಸಂಭವಿಸಿದ ಸಮೀಪದ ಲಿನ್ಕ್ಸಿಯಾ, ಗನ್ಸುನಲ್ಲಿ ತಾಪಮಾನ ಮೈನಸ್ 14 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಕಳೆದ ಒಂದು ವಾರದಿಂದ ಪ್ರಾರಂಭವಾದ ಶೀತದ ಅಲೆ ದೇಶದಾದ್ಯಂತ ವ್ಯಾಪಿಸುತ್ತಲೇ ಇದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಭೂಕಂಪದಿಂದ ಕೆಲವು ನೀರು, ವಿದ್ಯುತ್, ಸಾರಿಗೆ, ಸಂಪರ್ಕ ಮತ್ತು ಇತರ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.

Shwetha M