ಗಾಡ್ಜಿಲ್ಲಾ x ಕಾಂಗ್ ಸಿನಿಮಾದ ಜಿಯಾ ಇನ್ನಿಲ್ಲ – ಅಮೆರಿಕದಲ್ಲಿ ನಟಿ ಕೆಲೀ ಹಾಟಲ್ ದಾರುಣ ಅಂತ್ಯ

ಗಾಡ್ಜಿಲ್ಲಾ vs. ಕಾಂಗ್ ಮತ್ತು ಗಾಡ್ಜಿಲ್ಲಾ x ಕಾಂಗ್: ದಿ ನ್ಯೂ ಎಂಪೈರ್ ಸಿನಿಮಾ ನೋಡಿದವರಿಗೆ ಇಷ್ಟವಾಗಿರುವ ಪಾತ್ರವೆಂದರೆ ಜಿಯಾ. ಈ ಪಾತ್ರದ ಮೂಲಕ ನಟಿ ಕೇಯ್ಲೀ ಹಾಟಲ್ ಅದೆಷ್ಟೋ ಸಿನಿಮಾ ಪ್ರೇಮಿಗಳ ಫೆವರೇಟ್ ಆಗಿದ್ದರು. ಆದರೆ, ಪ್ರತಿಭಾವಂತ ಹಾಲಿವುಡ್ ನಟಿ ಕೇಯ್ಲಿ ಹಾಟಲ್ ರಸ್ತೆ ಅಪಘಾತಕ್ಕೆ ಬ*ಲಿಯಾಗಿದ್ದಾರೆ.
ಇದನ್ನೂ ಓದಿ:ಟಾಕ್ಸಿಕ್ ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ – ನಾಯಕಿಯರ ಜೊತೆ ಯಶ್ ರೋಮ್ಯಾನ್ಸ್
2021ರಲ್ಲಿ ಹಾಲಿವುಡ್ ನ ಹಿಟ್ ಸಿನಿಮಾ ಗಾಡ್ಜಿಲ್ಲಾ x ಕಾಂಗ್ , 2024ರಲ್ಲಿ ತೆರೆಕಂಡ ಗಾಡ್ಜಿಲ್ಲಾ x ಕಾಂಗ್: ದಿ ನ್ಯೂ ಎಂಪೈರ್ ಸಿನಿಮಾದಲ್ಲಿ ಜಿಯಾ ಪಾತ್ರ ಮಾಡಿದ ನಟಿ ಯಾರಿಗೆ ಇಷ್ಟವಿಲ್ಲ ಹೇಳಿ. ಸಹಜವಾದ ಅಭಿನಯ, ಕಿವುಡಿಯ ಪಾತ್ರ. ಯಾಕೆಂದರೆ, ಈ ಜಿಯಾ ನಿಜವಾಗಲೂ ಕಿವುಡಿಯಾಗಿದ್ದಳು. ಹೀಗಾಗಿ ಸಿನಿಮಾದ ಪಾತ್ರವೂ ಅಷ್ಟೇ ನೈಜವಾಗಿ ಮೂಡಿಬಂದಿತ್ತು. ಈ ಸಿನಿಮಾಗಳಲ್ಲಿ ತನ್ನ ಅದ್ಭುತ ನಟನೆಯ ಮೂಲಕ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಯುವ ಕಿವುಡಿ ನಟಿ ಕೇಯ್ಲೀ ಹಾಟಲ್ ಈಗ ನೆನಪು ಮಾತ್ರ. ಈ ಸುದ್ದಿ ಕೇಳಿ ಹಾಲಿವುಡ್ ಬೆಚ್ಚಿಬಿದ್ದಿದೆ. ಜೊತೆಗೆ ಕೇಯ್ಲೀ ಹಾಟಲ್ ಅಭಿಮಾನಿಗಳು ಕೂಡಾ ಆಘಾತಕ್ಕೊಳಗಾಗಿದ್ದಾರೆ. ಅಮೇರಿಕಾದ ಮೇರಿಲ್ಯಾಂಡ್‌ನ ಫ್ರೆಡೆರಿಕ್‌ನಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇಯ್ಲಿ ಮೃತಪಟ್ಟಿರುವುದು ದೃಢಪಡಿಸಲಾಗಿದೆ.
ಮಂಗಳವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಇಜಾಮ್ಸ್‌ವಿಲ್ಲೆ ಎಂಬಲ್ಲಿ ಕೇಯ್ಲೀ ಹಾಟಲ್ ಪ್ರಯಾಣಿಸುತ್ತಿದ್ದ 1995 ರ ಮಾಡೆಲ್‌ನ ಹೋಂಡಾ ಅಕಾರ್ಡ್ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಜಾರಿ ಸಣ್ಣ ಸೇತುವೆಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಸಮಯದಲ್ಲಿ ಕಾರಿನಲ್ಲಿ ಮೂವರಿದ್ದರು. ಕಾರು ಚಲಾಯಿಸುತ್ತಿದ್ದ 19 ವರ್ಷದ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಪ್ರಯಾಣಿಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಘಾತದ ತಕ್ಷಣ ಸ್ಥಳಕ್ಕೆ ಆಗಮಿಸಿದ ತುರ್ತು ಚಿಕಿತ್ಸಾ ಸಿಬ್ಬಂದಿ ಕೇಯ್ಲೀ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರ ಹೃದಯ ಬಡಿತ ನಿಂತು ಹೋಗಿತ್ತು. ವೈದ್ಯರು ಅವರನ್ನು ಬದುಕಿಸಲು ನಡೆಸಿದ ಎಲ್ಲಾ ಪ್ರಯತ್ನಗಳೂ ವಿಫಲವಾದವು ಎಂದು ಕೇಯ್ಲೀ ಹಾಟಲ್ ಅವರ ತಂದೆ ಜೋಶುವಾ ಹಾಟಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಕೇಯ್ಲೀ ಹಾಟಲ್ ಜಾರ್ಜಿಯಾದ ಅಟ್ಲಾಂಟಾದಲ್ಲಿ ಜನಿಸಿದ್ದು, ಹುಟ್ಟುತ್ತಲೇ ಕಿವುಡಿ ಆಗಿದ್ದರು. ಅವರು ಮತ್ತು ಅವರ ತಂದೆ ಇಬ್ಬರೂ ಹುಟ್ಟಿನಿಂದಲೇ ಕಿವುಡರಾಗಿದ್ದರು. ಇನ್ನು ಕೇಯ್ಲೀ ಅವರ ತಂದೆ ಜೋಶುವಾ ಅವರು ಸೋಶಿಯಲ್ ಮೀಡಿಯಾ ಮೂಲಕ ಮಗಳ ಸಾವಿನ ಸುದ್ದಿ ನೀಡಿದರು. ಮಗಳ ಮೃತದೇಹವನ್ನು ತರಲು ಟೆಕ್ಸಾಸ್‌ನಿಂದ ಮೇರಿಲ್ಯಾಂಡ್‌ಗೆ ಪ್ರಯಾಣ ಬೆಳೆಸುತ್ತಿರುವಾಗ ಮಾತನಾಡಿದ ಅವರು, “ನಾವು ಒಟ್ಟಿಗೆ ಕಳೆದ 18 ವರ್ಷಗಳ ಸುಂದರ ಕ್ಷಣಗಳಿಗೆ ನಾನು ದೇವರಿಗೆ ಕೃತಜ್ಞನಾಗಿದ್ದೇನೆ. ಆದರೆ ಆಕೆ ನಮ್ಮೊಂದಿಗೆ ಇನ್ನು ಹೆಚ್ಚಿನ ಕಾಲ ಇರಬೇಕಿತ್ತು” ಎಂದು ಹೇಳಿದ್ದಾರೆ.
ಕೇಯ್ಲೀ ಹಾಟಲ್ ತನ್ನ 9 ನೇ ವಯಸ್ಸಿನಲ್ಲಿ (2017) ಕಿವುಡರ ಸಮುದಾಯವನ್ನು ಬೆಂಬಲಿಸುವ ‘ಕಾನ್ವೊ’ (Convo) ಜಾಹೀರಾತುಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 2021 ರಲ್ಲಿ ‘ಗಾಡ್ಜಿಲ್ಲಾ vs. ಕಾಂಗ್’ ಚಲನಚಿತ್ರಕ್ಕಾಗಿ ಕಾಸ್ಟಿಂಗ್ ನಿರ್ದೇಶಕಿ ಸಾರಾ ಹ್ಯಾಲಿ ಫಿನ್ ಅವರು ನಿಜವಾದ ಕಿವುಡ ಬಾಲನಟಿಯ ಹುಡುಕಾಟದಲ್ಲಿದ್ದಾಗ, ಹಳೆಯ ಜಾಹೀರಾತೊಂದರಲ್ಲಿ ಕೇಯ್ಲೀ ಅವರ ಅಭಿನಯ ನೋಡಿ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು. ಚಿತ್ರದಲ್ಲಿ ಅವರು ದೈತ್ಯ ಕಾಂಗ್ ಜೊತೆ ಸಜ್ಞೆ ಭಾಷೆಯ ಮೂಲಕ ಸಂವಹನ ನಡೆಸುವ, ಭಾವನಾತ್ಮಕ ಬಾಂಧವ್ಯ ಹೊಂದುವ ಅನಾಥ ಹುಡುಗಿ ಜಿಯಾ ಪಾತ್ರದ ಮೂಲಕ ಫೇಮಸ್ ಆದರು. 2024 ರ ‘ಗಾಡ್ಜಿಲ್ಲಾ x ಕಾಂಗ್: ದಿ ನ್ಯೂ ಎಂಪೈರ್’ ನಲ್ಲೂ ಅದೇ ಪಾತ್ರವನ್ನು ಮುಂದುವರಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಈ ಅಪ್ರತಿಮ ನಟನೆಗಾಗಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಮುಡಿಗೇರಿದ್ದವು.
ಇನ್ನು ಕೇಯ್ಲೀ ನಿಧನಕ್ಕೆ ಹಾಲಿವುಡ್ ಗಣ್ಯರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಾಲಿವುಡ್ ನಟಿ ಮಿಲ್ಲಿ ಬಾಬಿ ಬ್ರೌನ್, ಈ ಸುದ್ದಿಯನ್ನು ಕೇಳಿ ನನ್ನ ಹೃದಯ ಒಡೆದುಹೋಗಿದೆ. ಕೇಯ್ಲೀ, ನಿನ್ನನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ನಟ ಅಲೆಕ್ಸಾಂಡರ್ ಸ್ಕಾಸ್ಗಾರ್ಡ್ ಚಿತ್ರೀಕರಣದ ಸಮಯದಲ್ಲಿ ಕೇಯ್ಲೀ ತೋರುತ್ತಿದ್ದ ವೃತ್ತಿಪರತೆ ಮತ್ತು ನಿರ್ದೇಶಕರ ಸೂಚನೆಗಳನ್ನು ತಕ್ಷಣವೇ ಗ್ರಹಿಸಿ ನಟಿಸುತ್ತಿದ್ದ ಆಕೆಯ ಚತುರತೆ ನಮ್ಮನ್ನೆಲ್ಲ ಬೆರಗುಗೊಳಿಸಿತ್ತು” ಎಂದು ನೆನಪಿಸಿಕೊಂಡಿದ್ದಾರೆ.

ನೋಡಿರಿ

