ಡಿವೈಡರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಖಾಸಗಿ ಬಸ್ – 26 ಪ್ರಯಾಣಿಕರು ಸಜೀವ ದಹನ
ಮುಂಬೈ: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ಸೊಂದು ಡಿವೈಡರ್‌ಗೆ ಡಿಕ್ಕಿಯಾಗಿ ಬೆಂಕಿಗೆ ಆಹುತಿಯಾಗಿದೆ. ಪರಿಣಾಮ ಸುಮಾರು 26 ಮಂದಿ ಸಜೀವ ದಹನಗೊಂಡಿರುವ ಭೀಕರ ಘಟನೆ ಮಹಾರಾಷ್ಟ್ರದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದಿದೆ.
ಬಸ್ ಯವತ್ಮಾಲ್‌ನಿಂದ ಪುಣೆಗೆ ಹೋಗುತ್ತಿರುವ ವೇಳೆ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ. ಪರಿಣಾಮ ಬಸ್‌ಗೆ ಬೆಂಕಿ ಹೊತ್ತುಕೊಂಡು 26 ಮಂದಿ ಸಜೀವ ದಹನವಾಗಿದ್ದಾರೆ. 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ – ಮೆಟ್ರೋದಲ್ಲೂ ಮದ್ಯ ಕೊಂಡೊಯ್ಯಲು ಅನುಮತಿ!
ಬುಲ್ಧಾನ ಜಿಲ್ಲೆಯ ಸಿಂಧಖೇದರಾಜ ಬಳಿಯ ಪಿಂಪಲಖುಟಾ ಗ್ರಾಮದ ಬಳಿ ಸಮೃದ್ಧಿ ಹೆದ್ದಾರಿಯಲ್ಲಿ ಬಸ್ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇಂದು ಬೆಳಗಿನ ಜಾವ 2 ಗಂಟೆಗೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಪಘಾತಕ್ಕೀಡಾದ ಬಸ್ ವಿದರ್ಭ ಟ್ರಾವೆಲ್ಸ್ಗೆ ಸೇರಿದ್ದಾಗಿದ್ದು, ಬಸ್‌ನಲ್ಲಿ ನಾಗ್ಪುರ, ವಾರ್ಧಾ ಮತ್ತು ಯವತ್ಮಾಲ್‌ನಿಂದ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ಸಿಂಧಖೇಡರಾಜ ಸಮೀಪದ ಪಿಂಪಲಖುಟಾ ಗ್ರಾಮದ ಬಳಿ ಸಮೃದ್ಧಿ ಹೆದ್ದಾರಿಯಲ್ಲಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್’ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ನಂತರ ಕೇವಲ ಎಂಟು ಮಂದಿ ಪ್ರಯಾಣಿಕರು ಮಾತ್ರ ಹೊರಬರಲು ಸಾಧ್ಯವಾಗಿದೆ. ಇನ್ನುಳಿದ 25 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಇನ್ನು ಬಸ್‌ಗೆ ಬೆಂಕಿ ಬಿದ್ದ ಸುದ್ದಿ ತಿಳಿದ ಪೊಲೀಸರು ಮತ್ತು ಅಗ್ನಿ ಶಾಮಕದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬಸ್ಸಿನಿಂದ 25 ಮೃತದೇಹಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೆ, ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿದ್ದ 8 ಮಂದಿಯ ಪೈಕಿ ಇದೀಗ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇದರೊಂದಿಗೆ ಮೃತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಸುರಕ್ಷಿತವಾಗಿ ಪಾರಾದವರಲ್ಲಿ ಚಾಲಕ ಮತ್ತು ಸಹಾಯಕ ಸೇರಿದ್ದಾರೆ. ಇದೇ ವೇಳೆ ಗಾಯಾಳುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿಯ ಪ್ರಕಾರ, ಈ ಪ್ರಯಾಣಿಕರಲ್ಲಿ ಹೆಚ್ಚಿನವರು ನಾಗ್ಪುರ, ವಾರ್ಧಾ ಮತ್ತು ಯವತ್ಮಾಲ್ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಸ್ ಮೊದಲು ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿಯಾಗಿದೆ. ಬಳಿಕ ಬದುಕುಳಿದ ಪ್ರಯಾಣಿಕರು ಬಸ್ಸಿನ ಬಾಗಿಲು ಒದ್ದು ಮತ್ತು ಗಾಜುಗಳನ್ನು ಒಡೆದು ಹೊರಬಂದಿದ್ದಾರೆಂದು ತಿಳಿದುಬಂದಿದೆ. ಅಪಘಾತದ ನಂತರ ಬಸ್ಸಿನಿಂದ ಹೆಚ್ಚಿನ ಪ್ರಮಾಣದ ಡೀಸೆಲ್ ರಸ್ತೆಯ ಮೇಲೆ ಸೋರಿಕೆಯಾಗಿದೆ. ಈ ವೇಳೆ ಬಸ್ನ ಇಂಜಿನ್ನಲ್ಲಿ ಸ್ಪಾರ್ಕ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.