ಮೂವರು ಮಕ್ಕಳಿಗೆ ವಿಷವುಣಿಸಿ ತಾನೂ ಕುಡಿದ ತಾಯಿ – ಡಿಸಿ ಕಚೇರಿಯಲ್ಲೇ ನಡೆದೋಯ್ತು ದುರಂತ!

ಮೂವರು ಮಕ್ಕಳಿಗೆ ವಿಷವುಣಿಸಿ ತಾನೂ ಕುಡಿದ ತಾಯಿ – ಡಿಸಿ ಕಚೇರಿಯಲ್ಲೇ ನಡೆದೋಯ್ತು ದುರಂತ!

ಇವತ್ತು ವಿಶ್ವ ಮಹಿಳಾ ದಿನ. ಜಗತ್ತಿನಾದ್ಯಂತ ಮಹಿಳೆಯರ ಸಾಧನೆಗಳನ್ನ ಸ್ಮರಿಸಲಾಗ್ತಿದೆ. ಕೆಲ ಕಂಪನಿಗಳಲ್ಲೂ  ತಮ್ಮ ಮಹಿಳಾ ಸಿಬ್ಬಂದಿಗೆ ಶುಭಾಶಯ ತಿಳಿಸಿ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಹೀಗೆ ನಾರಿಯರೆಲ್ಲಾ ತಮ್ಮದೇ ದಿನವೆಂದು ಸಂಭ್ರಮ ಪಡುವಾಗಲೇ ಬೆಳಗಾವಿಯಲ್ಲೊಂದು ದುರಂತ ನಡೆದು ಹೋಗಿದೆ.

ಕಿತ್ತುತಿನ್ನುವ ಬಡತನ. ಯಜಮಾನನಿಲ್ಲದ ಸಂಸಾರ. ಮೂವರು ಹೆಣ್ಣುಮಕ್ಕಳು. ಭವಿಷ್ಯದ ಬಗ್ಗೆ ನೂರಾರು ಚಿಂತೆಗಳು. ಮುಂದೇನು ಮಾಡಬೇಕು ಎಂದು ತಿಳಿಯದ ಕೋಪದ ಕೈಗೆ ಬುದ್ಧಿ ಕೊಟ್ಟಿದ್ದಾಳೆ. ವಿಶ್ವ ಮಹಿಳಾ ದಿನದಂದೇ ತನ್ನ ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ (Suicide Attempt) ಘಟನೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ (DC Office) ನಡೆದಿದೆ. ಬೆಳಗಾವಿಯ (Belagavi) ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ (Bailahongala) ಜನತಾ ಫ್ಲ್ಯಾಟ್‌ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ (40) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಆಕೆ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಮಕ್ಕಳಾದ ಸೃಷ್ಟಿ (14), ಸಾಕ್ಷಿ (8), ಸಾನ್ವಿ (3) ಅವರಿಗೂ ಫಿನಾಯಿಲ್ (Phenyl) ಕುಡಿಸಿದ್ದಾರೆ.

ಇದನ್ನೂ ಓದಿ : ಬೈಕ್ ಸವಾರನ ಮೊಬೈಲ್ ಕಿತ್ತೆಸೆದು ಆಟೋ ಚಾಲಕನ ದರ್ಪ – ಕಾರಣ ಏನು ಗೊತ್ತಾ?

ಕಳೆದ ಹಲವು ವರ್ಷಗಳಿಂದ ಪತಿ ಅದೃಶ್ಯಪ್ಪ ಹಂಪಣ್ಣವರ ಜೊತೆಗೆ ಬೆಳಗಾವಿಯ ಅನಗೋಳದ ಬಾಡಿಗೆ ಮನೆಯಲ್ಲಿ ಸರಸ್ವತಿ ವಾಸವಿದ್ದರು. ಅನಗೋಳದ ಸಲೂನ್ ಶಾಪ್‌ನಲ್ಲಿ ಅದೃಶ್ಯಪ್ಪ ಹಂಪಣ್ಣವರ ಕೆಲಸ ಮಾಡುತ್ತಿದ್ದರು. ಕೈತುಂಬ ಸಾಲ ಮಾಡಿ 15 ದಿನಗಳ ಹಿಂದೆಯೇ ಪತ್ನಿ ಹಾಗೂ ತನ್ನ ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ಅದೃಶ್ಯಪ್ಪ ಹೋಗಿದ್ದರು.

ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಸರಸ್ವತಿ ತನ್ನ ಮಕ್ಕಳ ಜೊತೆಗೆ ಜಿಲ್ಲಾಧಿಕಾರಿ ಭೇಟಿಗಾಗಿ ಡಿಸಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಮಹಿಳೆಯನ್ನು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ವಿಚಾರಿಸಿದ್ದಾರೆ. ಆಗ ಜ್ಯೂಸ್ ಎಂದು ನನ್ನ ತಾಯಿ ಏನೋ ಕುಡಿಸಿದ್ದಾಳೆಂದು ಸಿಬ್ಬಂದಿ ಎದುರು ಹಿರಿಯ ಪುತ್ರಿ ಸೃಷ್ಟಿ ಹೇಳಿದ್ದಾಳೆ. ಬಳಿಕ ಸರಸ್ವತಿ ಹಾಗೂ ಮೂವರು ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ತಕ್ಷಣ ಅಲರ್ಟ್ ಆದ ಡಿಸಿ ಕಚೇರಿ ಸಿಬ್ಬಂದಿಗಳು ಡಿಸಿ ಕಚೇರಿ ಬಳಿಯ ಪೊಲೀಸರ ನೆರವು ಪಡೆದು ಜಿಲ್ಲಾಸ್ಪತ್ರೆಗೆ ಅಸ್ವಸ್ಥರನ್ನು ಶಿಫ್ಟ್ ಮಾಡಿದ್ದಾರೆ. ಸದ್ಯ ಸರಸ್ವತಿ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ (District Hospital) ಚಿಕಿತ್ಸೆ ಮುಂದುವರೆಸಲಾಗಿದೆ.

 

suddiyaana