ಟ್ರಾಫಿಕ್ ಫೈನ್ 50% ಡಿಸ್ಕೌಂಟ್ – ಒಂದೇ ದಿನದಲ್ಲಿ ವಸೂಲಿ ಆಗಿದ್ದೆಷ್ಟು?

ಟ್ರಾಫಿಕ್ ಫೈನ್ 50% ಡಿಸ್ಕೌಂಟ್ – ಒಂದೇ ದಿನದಲ್ಲಿ ವಸೂಲಿ ಆಗಿದ್ದೆಷ್ಟು?

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿರುವವರಿಗೆ ದಂಡ ಕಟ್ಟಲು ಫೆ. 11 ರವರೆಗೆ ಶೇ. 50 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಆದೇಶ ಹೊರಡಿಸಲಾಗಿತ್ತು. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ 5. 60 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದಂಡ ಕಟ್ಟಲು ಮುಗಿಬಿದ್ದ ಜನ – 51 ಸಾವಿರ ರೂ ಫೈನ್.. ಕಟ್ಟಿದ್ದು 25 ಸಾವಿರ ರೂ!

ಯಾವ ನಿಯಮ ಉಲ್ಲಂಘನೆಗೆ ಎಷ್ಟು ರಿಯಾಯಿತಿ ಎಂಬ ಕುರಿತು ಶುಕ್ರವಾರ 44 ತರಹದ ನಿಮಯ ಉಲ್ಲಂಘನೆ ಪಟ್ಟಿ ಬಿಡುಗಡೆ ಮಾಡಿದ್ದರು. ಹೀಗಾಗಿ ದಂಡ ಕಟ್ಟಲು ನಗರದ ಜನ ಸಂಚಾರಿ ಠಾಣೆಯಲ್ಲಿ ಮುಗಿಬಿದ್ದಿದ್ದಾರೆ. ನಗರದ ಸಂಚಾರ ಪೊಲೀಸ್‌ ಠಾಣೆಗಳು ಮಾತ್ರವಲ್ಲದೆ, ಇನ್ಫಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ದಲ್ಲಿ ಕೌಂಟರ್‌ ತೆರೆದು ಬಾಕಿ ದಂಡದ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಒಂದೇ ದಿನದಲ್ಲಿ 2,01,828 ಪ್ರಕರಣಗಳಿಗೆ ಸಂಬಂಧಿಸಿ 5,61,45,000 ರೂ. ದಂಡ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕರ್ನಾಟಕ ಒನ್‌ ವೆಬ್‌ಸೈಟ್‌ ಹಾಗೂ ಪೇಟಿಎಂ ಆ್ಯಪ್‌ನಲ್ಲಿ ಬಾಕಿ ದಂಡ ಪಾವತಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ವಾಹನ ನೋಂದಣಿ ಸಂಖ್ಯೆ ನಮೂದಿಸಿದರೆ, ಆ ವಾಹನದ ವಿರುದ್ಧ ದಾಖಲಾದ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳ ಸಂಖ್ಯೆ ಹಾಗೂ ರಿಯಾಯಿತಿ ದಂಡದ ಮೊತ್ತ ತೆರೆದುಕೊಳ್ಳಲಿದೆ. ಈ ವೇಳೆ ಆನ್‌ಲೈನ್‌ನಲ್ಲಿ ಸಾರ್ವಜನಿಕರು ಆ ದಂಡದ ಮೊತ್ತವನ್ನು ಪಾವತಿಸಬಹುದಾಗಿದೆ. ಸಂಚಾರ ಪೊಲೀಸ್‌ ಠಾಣೆಗಳು ಹಾಗೂ ಟಿಎಂಸಿ ಕಟ್ಟಡದಲ್ಲಿ ದಂಡ ಪಾವತಿಸುವವರ ಸಂಖ್ಯೆಗಿಂತ ಆನ್‌ಲೈನ್‌ನಲ್ಲಿ ಬಾಕಿ ದಂಡ ಪಾವತಿ ಮಾಡಿದವರ ಸಂಖ್ಯೆ ಹೆಚ್ಚಿತ್ತು.

ಏಕಕಾಲಕ್ಕೆ ಹೆಚ್ಚು ಜನರು ಬೆಂಗಳೂರು ಸಂಚಾರ ಪೊಲೀಸ್‌ ವೆಬ್‌ಸೈಟ್‌ ಮುಖಾಂತರ ಆನ್‌ಲೈನ್‌ನಲ್ಲಿ ಬಾಕಿ ದಂಡ ಪಾವತಿಗೆ ಮುಂದಾದ ಹಿನ್ನೆಲೆಯಲ್ಲಿ ವೆಬ್‌ಸೈಟ್‌ನ ಸರ್ವರ್‌ ಡೌನ್‌ ಆಗಿ ಕೊನೆಗೆ ವೆಬ್‌ ಪೇಜ್‌ ಬಂದ್ ಆಗಿತ್ತು. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್‌ ಇಲಾಖೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ಎಚ್ಚೆತ್ತ ಸಂಚಾರ ಪೊಲೀಸರು, ಸರ್ವರ್‌ ದುರಸ್ಥಿಗೆ ಕ್ರಮ ಕೈಗೊಂಡರು. ಆದರೂ ಸಂಜೆವರೆಗೂ ವೆಬ್‌ಸೈಟ್‌ನ ಸರ್ವರ್‌ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸಿದೆ.

suddiyaana