ಭಕ್ತರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್‌ ನದಿಗೆ ಉರುಳಿ 9 ಮಂದಿ ಸಾವು

ಭಕ್ತರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್‌ ನದಿಗೆ ಉರುಳಿ 9 ಮಂದಿ ಸಾವು

ಟ್ರ್ಯಾಕ್ಟರ್‌ ಟ್ರಾಲಿಯೊಂದು ಚಾಲಕ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿದೆ. ಪರಿಣಾಮ ನಾಲ್ವರು ಮಕ್ಕಳು ಸೇರಿ 9 ಮಂದಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ರೆಧಿಬೋಡ್ಕಿ ಗ್ರಾಮದ ಬಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ರಾಂಡೌಲ್ ಗ್ರಾಮಕ್ಕೆ ಟ್ರ್ಯಾಕ್ಟರ್‌ ಟ್ರಾಲಿಯೊಂದು ಬರೋಬ್ಬರಿ 50 ಮಂದಿ ಭಕ್ತರನ್ನು ಹೊತ್ತೊಯ್ಯುತ್ತಿತ್ತು. ಬುಧವಾರ ಸಂಜೆ ವೇಳೆ ತಾಜಪುರ ಪ್ರದೇಶದಲ್ಲಿ ನದಿಗೆ ಉರುಳಿ ಬಿದ್ದಿದೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಬುಧವಾರ ಪೊಲೀಸರು ನಾಲ್ಕು ಶವಗಳನ್ನು ನದಿಯಿಂದ ಹೊರತೆಗೆಯಲಾಗಿತ್ತು. ಗುರುವಾರ ಐದು ಶವಗಳನ್ನು ಮೇಲಕ್ಕೆತ್ತಲಾಗಿದ್ದು ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ಬಹುಮಹಡಿಯ ಕಟ್ಟಡಗಳು ಕುಸಿತ! –ರಣಭೀಕರ ಮಳೆಗೆ ಈವರೆಗೆ 238 ಮಂದಿ ಬಲಿ

ಪ್ರವಾಹದಿಂದಾಗಿ ನದಿ ತುಂಬಿ ಹರಿಯುತ್ತಿದ್ದರಿಂದ ಹಲವರು ಕೊಚ್ಚಿಕೊಂಡು ಹೋಗಿದ್ದಾರೆ. ನಾಪತ್ತೆಯಾದ ವ್ಯಕ್ತಿಯನ್ನು ಹೊರತರಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಸಹರಾನ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ದಿನೇಶ್ ಚಂದ್ ಮತ್ತು ಎಸ್‌ಎಸ್‌ಪಿ ಡಾ.ವಿಪಿನ್ ತಾಡಾ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಈ ಅವಘಡ ಸಂಬಂಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಕ್ಷಣ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸಹರಾನ್‌ಪುರ ಜಿಲ್ಲಾ ಆಡಳಿತಕ್ಕೆ ಸೂಚಿಸಿದ್ದಾರೆ.

suddiyaana