ಟ್ರ್ಯಾಕ್ಟರ್ ಚಾಲಕನಿಗೆ ಬಯಸದೆ ಬಂತು ‘ಲಾಟರಿ’ ಭಾಗ್ಯ – ರೇಂಜ್ ರೋವರ್ ಕಾರಿನ ಮಾಲೀಕನಾದ!

ಟ್ರ್ಯಾಕ್ಟರ್ ಚಾಲಕನಿಗೆ ಬಯಸದೆ ಬಂತು ‘ಲಾಟರಿ’ ಭಾಗ್ಯ – ರೇಂಜ್ ರೋವರ್ ಕಾರಿನ ಮಾಲೀಕನಾದ!

ಅದೃಷ್ಟ ಚೆನ್ನಾಗಿದ್ರೆ ಮುಟ್ಟಿದ್ದೆಲ್ಲಾ ಚಿನ್ನ ಆಗಬಹುದು. ಎಂತಹ ಕಡು ಬಡವನಾದ್ರೂ ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತನಾಗಬಹುದು. ಇತ್ತೀಚಿನ ದಿನಗಳಲ್ಲಿ ಲಾಟರಿ ಟಿಕೆಟ್‌ ಭಾರಿ ಸದ್ದು ಮಾಡುತ್ತಿದೆ. ಈ ಲಾಟರಿ ಟಿಕೆಟ್‌ಗಳು ಒಂದೇ ದಿನದಲ್ಲಿ ವ್ಯಕ್ತಿ ಹಣೆಬರಹವನ್ನು ಬದಲಾಯಿಸುತ್ತವೆ. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಅಸ್ಸಾಂ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದೆ.

ಇದನ್ನೂ ಓದಿ: ಅಬ್ಬಬ್ಬಾ.. 700 ಬಾರ್‌ ಸೋಪ್‌ ಬಳಸಿ 220 ಟನ್‌ ತೂಕದ ಹೋಟೆಲ್‌ ಸ್ಥಳಾಂತರ!

ಹೌದು ಟ್ರ್ಯಾಕ್ಟರ್‌ ಚಾಲನೊಬ್ಬನಿಗೆ ಅದೃಷ್ಟ ಲಕ್ಷ್ಮೀ ಒಲಿದಿದ್ದಾಳೆ. ಬಡತನದಲ್ಲಿ ಬೆಳೆದಿದ್ದಾತ ಟ್ರ್ಯಾಕ್ಟರ್‌ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಕೆಲಸಕ್ಕೆ ಟ್ರ್ಯಾಕ್ಟರ್‌ ಓಡಿಸಿಯೇ ಜೀವನ ನಡೆಸುತ್ತಿದ್ದ. ಈತ ಐಷಾರಾಮಿ ಕಾರು ಖರೀದಿಸುವುದು ಕನಸಿನ ಮಾತಾಗಿತ್ತು. ಇದೀಗ ಚಾಲಕನಿಗೆ ಜಾಕ್‌ಪಾಟ್‌ ಹೊಡೆದಿದೆ. ಒಂದೇ ದಿನದಲ್ಲಿ ಐಷಾರಾಮಿ ಕಾರಿನ ಒಡೆಯನಾಗಿದ್ದಾನೆ.

ಟ್ರ್ಯಾಕ್ಟರ್ ಚಾಲಕ ಇಂಜಮಾಮುಲ್ ಹಕ್ ಎಂಬಾತನಿಗೆ ಅಸ್ಸಾಂ ರಾಫೆಲ್ ಡ್ರಾದಲ್ಲಿ ಜಾಕ್‌ಪಾಟ್ ಹೊಡೆದಿದೆ. ರಫೇಲ್‌ ಡ್ರಾದಲ್ಲಿ ಬರೋಬ್ಬರಿ 76 ಲಕ್ಷ ಮೌಲ್ಯದ ಐಷಾರಾಮಿ ರೇಂಜ್ ರೋವರ್ ಕಾರು ಗೆದ್ದಿದ್ದಾರೆ. ಇಂಜಮಾಮ್ ಅವರ ಸೋದರ ಮಾವ ಸೈಫುಲ್ ಇಸ್ಲಾಂ ಕೂಡ ಅದೃಷ್ಟಶಾಲಿಯಾಗಿದ್ದಾರೆ. ಅವರು 16 ನೇ ಬಹುಮಾನ, ವ್ಯಾಗನ್ಆರ್ ಕಾರು ಗೆದ್ದಿದ್ದಾರೆ. ಹಕ್ ಉತ್ತರ ಕಲ್ಜಾರ್ ಗ್ರಾಮದವರಾಗಿದ್ದು, ಇಸ್ಲಾಂ ಕೆಳ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಸಿತೋಲಿ ಗ್ರಾಮದವರಾಗಿದ್ದಾರೆ.

ಒಂದಕ್ಕೆ 100 ರೂಪಾಯಿಯಂತೆ ಇಬ್ಬರೂ ತಲಾ ಎರಡು ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ್ದರು. ಹೌಲಿ ರಾಸ್ ಉತ್ಸವ ಆಚರಣೆ ಸಮಿತಿಯು ಆಯೋಜಿಸಿದ್ದ ರಾಫೆಲ್ ಡ್ರಾ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಇವರಿಬ್ಬರಿಗೂ ಜಾಕ್‌ಪಾಟ್ ಹೊಡೆದಿದೆ. ವಿಷಯ ತಿಳಿದಾಗ ಹಕ್‌ನ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಕುಣಿದು ಕುಪ್ಪಳಿಸಿದ್ದಾರೆ.

ನನ್ನ ಸ್ನೇಹಿತರೊಬ್ಬರು ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹಂಚಿಕೊಂಡಾಗ ನಾನು ಮನೆಯಲ್ಲಿದ್ದೆ. ನಾನು ಮೊದಲ ಬಹುಮಾನವನ್ನು ಗೆದ್ದಿದ್ದೇನೆ ಎಂದು ತಿಳಿದಾಗ ನನಗೆ ಎಷ್ಟು ಸಂತೋಷವಾಯಿತು ಎಂದು ಹೇಳಲು ಸಾಧ್ಯವಿಲ್ಲ ಎಂದು ಹಕ್ ಹೇಳಿದ್ದಾರೆ.

Shwetha M