ಧಾರಾಕಾರ ಮಳೆಗೆ ಬೆಂಗಳೂರಿನ ಹಲವೆಡೆ ಪ್ರವಾಹದಂತೆ ಹರಿದ ನೀರು – ಇನ್ನೂ ಎಷ್ಟು ದಿನ ವರುಣಾರ್ಭಟ?
ಸುಡುಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿಗೆ ವರುಣ ತಂಪೆರೆದಿದ್ದಾನೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ ಹಲವೆಡೆ ಧಾರಾಕಾರ ಮಳೆಯಾಗಿದೆ. ರಸ್ತೆಗಳಲ್ಲಿ ಪ್ರಹಾಹದಂತೆ ನೀರು ಹರಿದಿದ್ದು, ವಾಹನ ಸವಾರರು ಪರದಾಡಿದ್ದಾರೆ.
ತಮಿಳುನಾಡಿನಲ್ಲಿ ಗಾಳಿಯ ದಿಕ್ಕಿನ ಬದಲಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಹಾಗೂ ಇನ್ನೂ 5 ದಿನಗಳ ಕಾಲ ಮಳೆಯಾಗುವ (Karnataka Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿಗೆ ಇಂದಿನಿಂದ ಐದು ದಿನಗಳಕಾಲ ಮಳೆ ಇರಲಿದ್ದು, ಮಂಡ್ಯ, ಮೈಸೂರು, ಕೋಲಾರ, ಹಾಸನ, ಕೊಡಗು, ಚಾಮರಾಜನಗರ, ಸೇರಿದಂತೆ ಹಲವೆಡೆ ಮಳೆಯಾಗಲಿದೆ. ಅದೇ ರೀತಿಯಾಗಿ ಉತ್ತರ ಒಳನಾಡಿನಲ್ಲಿ ಇಂದಿನಿಂದ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿಯಲ್ಲಿ ಒಣಹವೆ ಮುಂದುವರಿಯಲಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಅಬ್ಬರಿಸಿದ ಮಳೆ – ಸಿಡಿಲಿಗೆ ರೈತ ಬಲಿ – ಹಾಳಾಗಿ ಹೋಯ್ತು ಸಾವಿರಾರು ಎಕರೆ ಬೆಳೆ
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ ಹಲವೆಡೆ ಮಳೆಯಾಗಿದೆ. ಯಶವಂತಪುರ, ಗೊರಗುಂಟೆಪಾಳ್ಯ, ಪೀಣ್ಯ, ಜಾಲಹಳ್ಳಿ, ದಾಸರಹಳ್ಳಿ, ಅಂಚೇಪಾಳ್ಯ, ನೆಲಮಂಗದಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ರಸ್ತೆಗಳಲ್ಲಿ ಪ್ರವಾಹದಂತೆ ನೀರು ಹರಿದಿದೆ. ವಾಹನಗಳು ಸಾಗಿದಂತೆಲ್ಲಾ ನೀರು ಚಿಮ್ಮುತ್ತಿತ್ತು. ಇದರಿಂದಾಗಿ ಸವಾರರು ಪರದಾಡಬೇಕಾಯ್ತು. ಹಾಗೇ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮೋಡ ಕವಿದ ವಾತಾವರಣ ಹಾಗೂ ಗಾಳಿಯ ಪ್ರಮಾಣ ಹೆಚ್ಚಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.