ಆಂಗ್ಲರ ನಾಡಲ್ಲಿ ಸಚಿನ್, ದ್ರಾವಿಡ್, ವಿರಾಟ್ ರನ್ ಸುನಾಮಿ – ಇಂಗ್ಲೆಂಡ್ ನಲ್ಲಿ ಹೇಗಿದೆ ರೆಕಾರ್ಡ್ಸ್?

ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಯುಗಾರಂಭಕ್ಕೆ ಸಜ್ಜಾಗಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20 ರಿಂದ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಪ್ರಾರಂಭವಾಗಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯ ನಂತರ, ಎಲ್ಲರ ಕಣ್ಣುಗಳು ಟೀಂ ಪ್ಲೇಯರ್ಸ್ ಮೇಲಿದೆ.
ಇಂಗ್ಲೆಂಡ್ ನಲ್ಲಿ ಭಾರತದ ಪರ ಸಚಿನ್ ಅತೀ ಹೆಚ್ಚು ರನ್!
ಮಾಸ್ಟರ್ ಬ್ಲಾಸ್ಟರ್ ಅಂತಾನೇ ಕರೆಸಿಕೊಳ್ಳೋ ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ದಂತಕತೆ. ಬ್ಯಾಟಿಂಗ್ ನಲ್ಲಿ ಅವ್ರನ್ನ ಮೀರಿಸಿದವ್ರೇ ಇಲ್ಲ. ಕ್ರಿಕೆಟ್ ದೇವರು ಅಂತಾನೇ ಕರೆಸಿಕೊಳ್ಳೋ ಸಚಿನ್ ಭಾರತ ಪರ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ 17 ಟೆಸ್ಟ್ ಪಂದ್ಯಗಳನ್ನ ಆಡಿರುವ ಸಚಿನ್ 54.31 ಸರಾಸರಿಯಲ್ಲಿ 1,575 ರನ್ ಗಳಿಸಿದ್ದಾರೆ, ಇದರಲ್ಲಿ 4 ಶತಕಗಳು ಮತ್ತು 8 ಅರ್ಧಶತಕಗಳು ಸೇರಿವೆ.
ಎರಡನೇ ಸ್ಥಾನದಲ್ಲಿದ್ದಾರೆ ದಿ ವಾಲ್ ಖ್ಯಾತಿಯ ದ್ರಾವಿಡ್!
ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದಂತಿದ್ದ ರಾಹುಲ್ ದ್ರಾವಿಡ್ ಕೂಡ ಇಂಗ್ಲೆಂಡ್ ನೆಲದಲ್ಲಿ ಪಾರುಪತ್ಯ ಮೆರೆದಿದ್ದಾರೆ. ರಾಹುಲ್ ದ್ರಾವಿಡ್ ಇಂಗ್ಲೆಂಡ್‌ನಲ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. 13 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದು 6 ಶತಕಗಳು ಮತ್ತು 4 ಅರ್ಧಶತಕಗಳು ಸೇರಿದಂತೆ 68.80 ರ ಸರಾಸರಿಯಲ್ಲಿ 1,376 ರನ್ ಗಳಿಸಿದ್ದಾರೆ.
ಆಂಗ್ಲರ ನಾಡಿನಲ್ಲಿ ಸುನಿಲ್ ಗವಾಸ್ಕರ್ ರನ್ ಸುನಾಮಿ!
ಸುನಿಲ್ ಗವಾಸ್ಕರ್ ಇಂಗ್ಲೆಂಡ್‌ನಲ್ಲಿ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. 16 ಟೆಸ್ಟ್‌ಗಳಲ್ಲಿ 41.14 ಸರಾಸರಿಯಲ್ಲಿ 2 ಶತಕಗಳು ಮತ್ತು 8 ಅರ್ಧಶತಕಗಳನ್ನು ಒಳಗೊಂಡಂತೆ 1,152 ರನ್ ಗಳಿಸಿದ್ದಾರೆ.
ಲೆಜೆಂಡರ್ಸ್ ಲಿಸ್ಟ್ ನಲ್ಲಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ!
ಇಂಗ್ಲೆಂಡ್‌ನಲ್ಲಿ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹೆಸರೂ ಇದೆ. ಈ ಪಟ್ಟಿಯಲ್ಲಿ ವಿರಾಟ್ ನಾಲ್ಕನೇ ಸ್ಥಾನದಲ್ಲಿದ್ದಾರೆ. 17 ಟೆಸ್ಟ್‌ಗಳಲ್ಲಿ 33.21 ಸರಾಸರಿಯಲ್ಲಿ 2 ಶತಕಗಳು ಮತ್ತು 5 ಅರ್ಧಶತಕಗಳು ಸೇರಿದಂತೆ 1,096 ರನ್ ಗಳಿಸಿದ್ದಾರೆ.
ದಿಲೀಪ್ & ಗಂಗೂಲಿ ಬ್ಯಾಟ್ ನಿಂದಲೂ ರನ್ ಮಳೆ!
ಹಾಗೇ ಭಾರತದ ಪರ ದಿಲೀಪ್ ವೆಂಗ್ ಸರ್ಕಾರ್ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐದನೇ ಆಟಗಾರ ಆಗಿದ್ದಾರೆ. 13 ಟೆಸ್ಟ್‌ಗಳಲ್ಲಿ 48.00 ಸರಾಸರಿಯಲ್ಲಿ 960 ರನ್ ಗಳಿಸಿದ್ದಾರೆ, ಇದರಲ್ಲಿ 4 ಶತಕಗಳು ಮತ್ತು 4 ಅರ್ಧಶತಕಗಳು ಸೇರಿವೆ. ಹಾಗೇ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸೌರವ್ ಗಂಗೂಲಿ ಆರನೇ ಸ್ಥಾನದಲ್ಲಿದ್ದಾರೆ. ಅವರು 9 ಟೆಸ್ಟ್‌ಗಳಲ್ಲಿ 65.35 ರ ಸರಾಸರಿಯಲ್ಲಿ 915 ರನ್ ಗಳಿಸಿದ್ದಾರೆ, ಇದರಲ್ಲಿ 3 ಶತಕಗಳು ಮತ್ತು 5 ಅರ್ಧಶತಕಗಳು ಸೇರಿವೆ.
ಪೂಜಾರ, ರಹಾನೆ ಮತ್ತು ಧೋನಿಯಿಂದಲೂ ದಾಖಲೆ!
ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಚೇತೇಶ್ವರ ಪೂಜಾರ ಏಳನೇ ಸ್ಥಾನದಲ್ಲಿದ್ದಾರೆ. ಪೂಜಾರ 16 ಟೆಸ್ಟ್‌ಗಳಲ್ಲಿ 29.00 ಸರಾಸರಿಯಲ್ಲಿ 1 ಶತಕ ಮತ್ತು 5 ಅರ್ಧಶತಕಗಳ ಸಹಾಯದಿಂದ 870 ರನ್ ಗಳಿಸಿದ್ದಾರೆ. ಹಾಗೇ ಅಜಿಂಕ್ಯ ರಹಾನೆ ಎಂಟನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. ರಹಾನೆ 16 ಟೆಸ್ಟ್‌ಗಳಲ್ಲಿ 28.80 ಸರಾಸರಿಯಲ್ಲಿ 1 ಶತಕ ಮತ್ತು 6 ಅರ್ಧಶತಕಗಳ ಸಹಾಯದಿಂದ 864 ರನ್ ಗಳಿಸಿದ್ದಾರೆ. ಗುಂಡಪ್ಪ ವಿಶ್ವನಾಥ್ ಒಂಬತ್ತನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. ವಿಶ್ವನಾಥ್ 13 ಟೆಸ್ಟ್‌ಗಳಲ್ಲಿ 39.00 ಸರಾಸರಿಯಲ್ಲಿ 1 ಶತಕ ಮತ್ತು 9 ಅರ್ಧಶತಕಗಳ ಸಹಾಯದಿಂದ 858 ರನ್ ಗಳಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಲಿಸ್ಟ್ ನಲ್ಲಿ ಹತ್ತನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಎಂಎಸ್ ಧೋನಿ ಪಾತ್ರರಾಗಿದ್ದಾರೆ. 12 ಟೆಸ್ಟ್‌ಗಳಲ್ಲಿ 37.04 ಸರಾಸರಿಯಲ್ಲಿ 8 ಅರ್ಧಶತಕಗಳ ಸಹಾಯದಿಂದ ಧೋನಿ 778 ರನ್ ಗಳಿಸಿದ್ದಾರೆ.

ನೋಡಿರಿ

