ನಾಳೆ ಕಲಬುರಗಿ, ಯಾದಗಿರಿಗೆ ಪ್ರಧಾನಿ ಮೋದಿ ಭೇಟಿ – ಯೋಜನೆಗಳಿಗೆ ಚಾಲನೆ ಹೆಸರಲ್ಲಿ ಚುನಾವಣಾ ಕಹಳೆ!
ಕಲಬುರಗಿ : ವಿಧಾನಸಭಾ ಚುನಾವಣೆ ಹತ್ತಿರುವಾಗುತ್ತಿರುವ ಹೊತ್ತಲ್ಲೇ ರಾಜಕೀಯ ಬೆಳಗಣಿಗೆಗಳು ಗರಿಗೆದರಿವೆ. ಶತಾಯ ಗತಾಯ ಕರ್ನಾಟಕವನ್ನ ಗೆಲ್ಲಲೇಬೇಕು ಎಂದು ಪಣ ತೊಟ್ಟಿರೋ ಬಿಜೆಪಿ ಹತ್ತಾರು ಕಸರತ್ತು ಮಾಡ್ತಿದೆ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ನಾಳೆ ಖುದ್ದು ಮೋದಿಯೇ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಾಳೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ವಿಧಾನಸಭಾಕ್ಷೇತ್ರದ ಕೊಡೇಕಲ್ ಗ್ರಾಮದಲ್ಲಿ 4,223 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ, ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದಲ್ಲಿ ತಾಂಡಾ ಹಾಗೂ ಹಟ್ಟಿಗಳಲ್ಲಿ ವಾಸವಿರುವ 51,900 ಬಡ ಕುಟುಂಬಗಳಿಗೆ ಹಕ್ಕುಪತ್ರಗಳ ವಿತರಣೆಗೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ‘ಒಂದು ದೇಶ-ಒಂದು ಪೊಲೀಸ್ ಸಮವಸ್ತ್ರ’ಕ್ಕೆ ರಾಜ್ಯ ಗೃಹ ಇಲಾಖೆ ಅಸ್ತು!
ಗುರುವಾರ ಅಂದ್ರೆ ನಾಳೆ ಬೆಳಗ್ಗೆ ದೆಹಲಿಯಿಂದ ಕಲಬುರಗಿಗೆ ಆಗಮಿಸಲಿರುವ ಮೋದಿ ಕಲಬುರಗಿ ವಿಮಾನ ನಿಲ್ದಾಣದಿಂದ ಕೊಡೇಕಲ್ ಬಳಿ ನಿರ್ಮಿಸಲಾದ ವಿಶೇಷ ಹೆಲಿಪ್ಯಾಡ್‌ಗೆ ತೆರಳಲಿದ್ದಾರೆ. ಬಳಿಕ, ನಡೆಯುವ ಕಾರ್ಯಕ್ರಮದಲ್ಲಿ ನಾರಾಯಣಪುರ ಬಸವ ಸಾಗರ ಜಲಾಶಯದ ಗೇಟುಗಳ ಸ್ಕಾಡಾ (ಜಿಪಿಎಸ್-ರಿಮೋಟ್ ಆಧಾರಿತ ಜಲಾಶಯ ಗೇಟುಗಳ ಚಾಲನೆ) ವ್ಯವಸ್ಥೆ ಉದ್ಘಾಟನೆ, ಜಲಧಾರೆ, ಅಮೃತ್ ಎರಡನೇ ಹಂತದ ಅಟಲ್ ಮಿಷನ್ ಸೇರಿ 4,223 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 3 ಲಕ್ಷಕ್ಕೂ ಅಧಿಕ ಮಂದಿ ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ವಿಶಾಲ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.
ಮಧ್ಯಾಹ್ನ 2.10ಕ್ಕೆ ಮಳಖೇಡಕ್ಕೆ ಆಗಮಿಸಲಿರುವ ಪ್ರಧಾನಿಯನ್ನ 50 ಸಾವಿರ ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪು ಧರಿಸಿ ಸ್ವಾಗತಿಸಲಿದ್ದಾರೆ. ನಂತರ ನಡೆಯುವ ಸಮಾರಂಭದಲ್ಲಿ ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್, ರಾಯಚೂರು ಜಿಲ್ಲೆಗಳ ತಾಂಡಾ ಹಾಗೂ ಹಟ್ಟಿಗಳಲ್ಲಿ ವಾಸವಿರುವ 51,900 ಬಡ ಕುಟುಂಬಗಳಿಗೆ ಮನೆಗಳ ಹಕ್ಕುಪತ್ರಗಳ ವಿತರಣೆಗೆ ಚಾಲನೆ ನೀಡಲಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭ ಹಿನ್ನೆಲೆಯಲ್ಲಿ ಮಳಖೇಡ ಸುತ್ತಮುತ್ತಲಿನ ಊರು, ತಾಂಡಾಗಳಲ್ಲಿರುವ ಮನೆಗಳ ಮೇಲೆ ಸುಮಾರು 2.50 ಲಕ್ಷ ಬಿಜೆಪಿ ಧ್ವಜಗಳನ್ನು ಹಾರಿಸಲಾಗುತ್ತಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.