ಟೊಮ್ಯಾಟೊ ಇನ್ನೂ ಅಗ್ಗ! – ಕೇಂದ್ರ ಸರ್ಕಾರದಿಂದ 70 ರೂ. ಗೆ ಟೊಮ್ಯಾಟೋ ಮಾರಾಟ
ನವದೆಹಲಿ: ಸದ್ಯ ದೇಶದಲ್ಲಿ ಟೊಮ್ಯಾಟೊ ಬೆಲೆ ಏರಿಕೆಯೇ ಟ್ರೆಂಡ್ ವಿಚಾರ. ಜನ ಟೊಮ್ಯಾಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಟೊಮ್ಯಾಟೊ ಬಲು ದುಬಾರಿ.. ಇದು ಶ್ರೀಮಂತರು ಮಾತ್ರ ಕೊಳ್ಳುವ ತರಕಾರಿ ಅನ್ನುವಷ್ಟರ ಮಟ್ಟಿಗೆ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಟೊಮ್ಯಾಟೊ ದುಬಾರಿ ಆಗಿರುವ ಹಿನ್ನೆಲೆ ಕೇಂದ್ರ ಸರ್ಕಾರವು ವಿವಿಧ ಪ್ರದೇಶಗಳಿಂದ ಟೊಮ್ಯಾಟೊಗಳನ್ನು ಸಂಗ್ರಹಿಸಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿದೆ. ಇದೀಗ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವ ಟೊಮ್ಯಾಟೊ ದರವನ್ನು ಮತ್ತಷ್ಟು ಇಳಿಕೆ ಮಾಡಿದೆ.
ಇದನ್ನೂ ಓದಿ: ಇವರ ಆಟೋದಲ್ಲಿ ಪ್ರಯಾಣಿಸಿದ್ರೆ ಟೊಮ್ಯಾಟೊ ಫ್ರೀ.. ಆದ್ರೆ ಷರತ್ತು ಅನ್ವಯ!
ಉತ್ತರಭಾರತದಲ್ಲಿ ಟೊಮ್ಯಾಟೊ ಬೆಲೆ ದ್ವಿಶತಕ ಬಾರಿಸಿದೆ. ಅಡುಗೆ ಮನೆಯ ಕೆಂಪು ಸುಂದರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹೀಗಾಗಿ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಟೊಮ್ಯಾಟೊ ಮಾರಾಟ ಮಾಡುತ್ತಿದೆ. ಆರಂಭದಲ್ಲಿ ಕೇಂದ್ರ ಸರ್ಕಾರ ಕೆಜಿಗೆ 90 ರೂಪಾಯಿಯಂತೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಿತ್ತು. ಬಳಿಕ ಕೆಜಿಗೆ 80 ರೂಪಾಯಿಗೆ ಇಳಿಕೆ ಮಾಡಲಾಗಿತ್ತು. ಈಗ ಕೆಜಿಗೆ 80 ರೂ.ನಿಂದ 70 ರೂ.ಗೆ ಇಳಿಸಲಾಗಿದೆ. ಈ ಟೊಮ್ಯಾಟೋಗಳನ್ನು ಕೇಂದ್ರ ಸರ್ಕಾರದ ಎನ್‌ಸಿಸಿಎಫ್ ಹಾಗೂ ನ್ಯಾಫೆಡ್ ಸಹಕಾರಿ ಸಂಸ್ಥೆಗಳು ಬೆಳೆಗಾರರಿಂದ ಖರೀದಿ ಮಾಡಿ ಅದನ್ನು ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ನ್ಯಾಫೆಡ್ ಕೇಂದ್ರಗಳಲ್ಲಿ ರಿಯಾಯಿತಿ ದರಕ್ಕೆ ಮಾರಾಟ ಮಾಡುತ್ತಿದೆ.
ಈ ಟೊಮ್ಯಾಟೋ ಬೆಲೆಗಳು ದೇಶಾದ್ಯಂತ ಕೊಂಚ ಇಳಿಕೆಯಾಗಿರುವ ಕಾರಣ ತನ್ನ ಬೆಲೆಯನ್ನು 10 ರೂ. ನಷ್ಟು ಇಳಿಸಿ ಗ್ರಾಹಕನಿಗೆ ಸಮಾಧಾನ ನೀಡಿದೆ. ಉಳಿದಂತೆ ದೆಹಲಿಯಲ್ಲಿ ರಿಯಾಯಿತಿ ರಹಿತ ಒಂದು ಕೆಜಿ ಟೊಮ್ಯಾಟೋಗೆ 120 ರೂ. ಇದ್ದು, ಉತ್ತರ ಪ್ರದೇಶದಲ್ಲಿ 245 ರೂ. ಇದೆ.