ಟಾಲಿವುಡ್ ನಲ್ಲಿ ಇನ್ನು ಮುಂದೆ ಹೊಸ ರೂಲ್ಸ್- ಹಬ್ಬದ ದಿನಗಳಲ್ಲಿ ತೆಲುಗು ಸಿನಿಮಾ ಮಾತ್ರ ಬಿಡುಗಡೆ!
ಟಾಲಿವುಡ್ ಗೆ ಡಬ್ಬಿಂಗ್ ಸಿನಿಮಾಗಳ ಭಯ?
ಟಾಲಿವುಡ್ ನಲ್ಲಿ ಇನ್ನು ಮುಂದೆ ಹೊಸ ನಿಯಮಾವಳಿಗಳು ಜಾರಿಯಾಗಿದ್ದು, ಮುಂಬರುವ ಸಂಕ್ರಾಂತಿ ಮತ್ತು ದಸರಾ ಹಬ್ಬದ ಸೀಸನ್ ನಲ್ಲಿ ಕೇವಲ ತೆಲುಗು ಸಿನಿಮಾಗಳನ್ನು ಮಾತ್ರ ಬಿಡುಗಡೆ ಮಾಡಲು ತೆಲುಗು ಚಿತ್ರ ನಿರ್ಮಾಪಕರ ಮಂಡಳಿ ನಿರ್ಧರಿಸಿದೆ.
ಇದನ್ನೂ ಓದಿ: ಧ್ರುವ ಸರ್ಜಾ ಹೊಸ ಚಿತ್ರಕ್ಕೆ ಮಾಲಾಶ್ರೀ ಮಗಳು ನಾಯಕಿ?
ಹಬ್ಬದ ಸೀಸನ್‌ನಲ್ಲಿ ಮೊದಲ ಆದ್ಯತೆ ಏನಿದ್ದರೂ ಪ್ರಾದೇಶಿಕ ಸಿನಿಮಾಗಳಿಗೆ ಮಾತ್ರ. ಆ ಬಳಿಕ ಚಿತ್ರಮಂದಿರಗಳು ಏನಾದರೂ ಉಳಿದಿದ್ದರೆ ಅವುಗಳನ್ನು ಇತರ ಸಿನಿಮಾಗಳಿಗೆ ನೀಡಲಾಗುವುದು ಎಂದು ತೆಲುಗು ಚಿತ್ರ ನಿರ್ಮಾಪಕರ ಮಂಡಳಿ ತಿಳಿಸಿದೆ.
ಈಚೆಗೆ ತೆರೆಕಂಡ ಕನ್ನಡದ ‘ಕಾಂತಾರ’ ಸಿನಿಮಾ ತೆಲುಗಿಗೆ ಡಬ್ ಆಗಿ, ಬಾಕ್ಸ್ ಆಫೀಸ್ ಉಡೀಸ್ ಮಾಡಿದ್ದಲ್ಲದೆ, ಅಲ್ಲಿನ ಸಿನಿಮಾಗಳಿಗೆ ಸಖತ್ ಪೈಪೋಟಿ ನೀಡಿತ್ತು. ‘ಕೆಜಿಎಫ್ 2’ ಕೂಡ ಭಾರಿ ಸದ್ದು ಮಾಡಿತ್ತು. ಈ ಡಬ್ಬಿಂಗ್ ಸಿನಿಮಾಗಳು ಟಾಲಿವುಡ್ ಸಿನಿಮಾಗಳಿಗೆ ದೊಡ್ಡ ಹೊಡೆತವನ್ನುಂಟು ಮಾಡುತ್ತದೆಂಬ ಭಯ ಕಾಡಿದ್ದು, ಅದಕ್ಕಾಗಿ ಈ ನಿಯಮ ಜಾರಿ ಮಾಡಲಾಗಿದೆ ಅನ್ನುವ ಮಾತುಗಳು ಕೇಳಿಬರುತ್ತಿವೆ.
ಈ ಕುರಿತು ಸಭೆ ನಡೆಸಿದ ತೆಲುಗು ಸಿನಿಮಾ ವಾಣಿಜ್ಯ ಮಂಡಳಿ, ‘ಸಂಕ್ರಾಂತಿ ಮತ್ತು ದಸರಾಗೆ ಕೇವಲ ಮೂಲ ತೆಲುಗು ಸಿನಿಮಾಗಳಿಗೆ ಮಾತ್ರ ಆದ್ಯತೆ ನೀಡಬೇಕು’ ಎಂಬ ನಿರ್ಣಯವನ್ನು ಕೈಗೊಂಡಿದೆ. ತೆಲುಗು ಸಿನಿಮಾಗಳ ಹೆಚ್ಚುತ್ತಿರುವ ನಿರ್ಮಾಣ ವೆಚ್ಚ, ನಿರ್ಮಾಪಕರ ಕ್ಷೇಮಾಭಿವೃದ್ಧಿ ಮತ್ತು ತೆಲುಗು ಚಿತ್ರೋದ್ಯಮವನ್ನು ಉಳಿಸುವ ಉದ್ದೇಶದಿಂದ ಈ ನಿರ್ಣಯವನ್ನು ಟಾಲಿವುಡ್ ನಿರ್ಮಾಪಕರ ಮಂಡಳಿ ಕೈಗೊಂಡಿದೆ. ಈ ನಿರ್ಧಾರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಸಿನಿಮಾ ವಿತರಕರನ್ನು ಅದು ಕೇಳಿಕೊಂಡಿದೆ.
ಈ ಸಂದರ್ಭದಲ್ಲಿ ಖ್ಯಾತ ನಿರ್ಮಾಪಕ ದಿಲ್ ರಾಜು ಕೆಲವು ವರ್ಷಗಳ ಹಿಂದೆ ಹೇಳಿದ್ದ, ‘ಹಬ್ಬದ ಸೀಸನ್‌ನ ಪ್ರಯೋಜನವನ್ನು ಡಬ್ಬಿಂಗ್ ಸಿನಿಮಾಗಳು ಮಾತ್ರ ಪಡೆದುಕೊಳ್ಳುತ್ತಿದ್ದು, ಡಬ್ಬಿಂಗ್ ಸಿನಿಮಾಗಳಿಗೆಯೇ ಹೆಚ್ಚಿನ ಚಿತ್ರಮಂದಿರಗಳನ್ನು ನೀಡಲಾಗುತ್ತಿದೆ. ಈ ಸಮಯದಲ್ಲಿ ಕೇವಲ ತೆಲುಗು ಸಿನಿಮಾಗಳಿಗೆ ಮಾತ್ರ ಆದ್ಯತೆ ನೀಡಿ, ಆಮೇಲೆ ಸ್ಪೇಸ್ ಮಿಕ್ಕಿದ್ದರೆ ಮಾತ್ರ ತೆಲುಗು ಡಬ್ಬಿಂಗ್ ಸಿನಿಮಾಗೆ ಕೊಡಬೇಕು’ ಎಂಬ ಮಾತನ್ನು ಉಲ್ಲೇಖಿಸಿದ ಸಂಘ, ಇದನ್ನೀಗ ಕಾರ್ಯರೂಪಕ್ಕೆ ತರಬೇಕಿದೆ ಎಂದಿದೆ.