ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರೋ ದಳಪತಿಗಳನ್ನು ಕೇಸರಿ ಕಲಿಗಳು ನಡುನೀರಲ್ಲಿ ಕೈಬಿಡ್ತಾರಾ? – ಬಿಜೆಪಿ ಸಭೆ ಕರೆದಿದ್ದು ಯಾಕೆ?
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎರಡು ಹಂತಗಳಲ್ಲಿ ಮುಕ್ತಾಯಗೊಂಡಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. ಇದೀಗ ಈ ಮೈತ್ರಿ ಪಕ್ಷಗಳಿಗೆ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಹಗರಣ ಬೆಂಬಿಡದೇ ಕಾಡುತ್ತಿದೆ. ಈ ಬೆನ್ನಲ್ಲೇ ಶನಿವಾರ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿದೆ. ಜೆಡಿಎಸ್ ಜೊತೆ ಮೈತ್ರಿ ಬೇಕೋ? ಬೇಡ್ವೋ ಎಂಬ ಚರ್ಚೆ ಕೂಡಾ ನಡೆಯಲಿದೆ.
ಎರಡನೇ ಹಂತದ ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲಿ ಪೆನ್ಡ್ರೈವ್ ಕೇಸ್ ಭಾರಿ ಸದ್ದು ಮಾಡುತ್ತಿದೆ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಆಗಿದೆ. ಈ ಪ್ರಕರಣ ಬೆಳಕಿಗೆ ಬಂದಂತೆ ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣ ಎರಡು ಪಕ್ಷಗಳಿಗೂ ಮುಜುಗರವನ್ನುಂಟು ಮಾಡಿದೆ. ಇದೀಗ ಶನಿವಾರ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿದೆ. ಬೆಂಗಳೂರಿನ ಬಿಜೆಪಿಯ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಜೊತೆಗೆ ಸಭೆ ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ ಬಿಜೆಪಿ ಚಿಹ್ನೆಯಡಿಯಲ್ಲಿ ಕಣಕ್ಕಿಳಿದಿದ್ದ 25 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಈ ಸಭೆಯಲ್ಲಿ ಮುಂದೆ ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಹೇಗೆ ಮುಂದುವರೆಸಬೇಕೆಂದು ಚರ್ಚೆಯಾಗಲಿದೆ.
ಇದನ್ನೂ ಓದಿ: ಚೆನ್ನೈ ವಿರುದ್ಧ ಗೆದ್ದು ಬೀಗಿದ ಗುಜರಾತ್ ಟೈಟನ್ಸ್! – ಪ್ಲೇ ಆಫ್ ರೇಸ್ಗೆ ಎಂಟ್ರಿಕೊಟ್ಟ ಶುಭ್ಮನ್ ಗಿಲ್ ಪಡೆ
ಸಭೆಯಲ್ಲಿ ಮೊದಲಿಗೆ ಪ್ರತಿಯೊಂದು ಕ್ಷೇತ್ರದ ಬಗೆಗಿನ ಚುನಾವಣೆಯ ಸಮಸ್ತ ವಿವರವನ್ನು ರಾಜ್ಯದ ಬಿಜೆಪಿ ನಾಯಕರು ಕಲೆ ಹಾಕಲಿದ್ದಾರೆ. ಮೊದಲ ಹಂತದಲ್ಲಿ ಚುನಾವಣೆ ನಡೆದ 14 ಕ್ಷೇತ್ರಗಳ ಪೈಕಿ ಎಷ್ಟು ಸ್ಥಾನದಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಅಂಕಿ ಅಂಶಗಳನ್ನು ಮಾಹಿತಿಯ ರೂಪದಲ್ಲಿ ಕಲೆ ಹಾಕಲು ವೇದಿಕೆ ಸಜ್ಜಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿಯ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ಮಾಹಿತಿ ಕಲೆ ಹಾಕಲಿದ್ದು, ಅದನ್ನು ನೇರವಾಗಿ ಹೈಕಮಾಂಡ್ ನಾಯಕರಿಗೆ ರವಾನೆ ಮಾಡಲಿದ್ದಾರೆ. ಮೊದಲ ಹಂತದ 14 ಕ್ಷೇತ್ರಗಳ ಪೈಕಿ, ಯಾವುದರಲ್ಲಿ ಬಿಜೆಪಿಗೆ ಸಿಹಿ, ಯಾವುದರಲ್ಲಿ ಕಹಿ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ.
ಇತ್ತ ಇಂದಿನ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಸಬೇಕೇ ಬೇಡವೇ ಎಂಬ ಚರ್ಚೆಗಳು ಕೂಡ ನಡೆಯಲಿದೆ. ಸದ್ಯದಲ್ಲೇ ಎದುರಾಗಲಿರುವ ವಿಧಾನ ಪರಿಷತ್ ಚುನಾವಣೆಗೆ ಮೈತ್ರಿ ಆಗಿ ಯಾವ್ಯಾವ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂಬ ಮಾತುಕತೆಯಾಗಲಿದೆ. ಇನ್ನೂ ಯಾವ್ಯಾವ ಕ್ಷೇತ್ರದಲ್ಲಿ ಜೆಡಿಎಸ್ ಸ್ಫರ್ಧೆ, ಯಾವ್ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಎಂಬ ಚಿತ್ರಣ ಇಂದಿನ ಸಭೆಯ ಬಳಿಕ ಸಿಗಲಿದೆ. ಇದರ ಜೊತೆಗೆ ಹೈಕಮಾಂಡ್ ನಾಯಕರ ಸಮಕ್ಷಮದಲ್ಲಿ ಆಗಿರುವ ಮೈತ್ರಿ ಬೇಡ ಎಂದು ಹೇಳಲು ರಾಜ್ಯ ನಾಯಕರಿಗೆ ಸಾಧ್ಯವಿಲ್ಲ. ಹೀಗಾಗಿ, ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ, ಅಂಕಿ ಅಂಶಗಳು, ಗೆಲುವಿನ ವಿಶ್ವಾಸದ ಸವಿಸ್ತಾರವಾದ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ.