ಹಾಸನಾಂಬೆಯ ದರ್ಶನಕ್ಕೆ ಇಂದು ಕೊನೆಯ ದಿನ – ಈವರೆಗೂ ಬಂದ ಆದಾಯ ಎಷ್ಟು ಗೊತ್ತಾ?

ಹಾಸನಾಂಬೆಯ ದರ್ಶನಕ್ಕೆ ಇಂದು ಕೊನೆಯ ದಿನ – ಈವರೆಗೂ ಬಂದ ಆದಾಯ ಎಷ್ಟು ಗೊತ್ತಾ?

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇಗುಲದ ಬಾಗಿಲು ತೆರೆದು ಇಂದಿಗೆ (ಮಂಗಳವಾರ) 9 ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ ಲಕ್ಷಾಂತರ ಮಂದಿ ಭಕ್ತರ ದೇವಿ ದರ್ಶನ ಪಡೆದಿದ್ದಾರೆ. ಒಂಬತ್ತು ದಿನಗಳ ಅವಧಿಯಲ್ಲಿ ದೇಗುಲದಲ್ಲಿ ಸುಮಾರು 5.52 ಕೋಟಿ ರೂ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ಕಳೆದ ಒಂಬತ್ತು ದಿನಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು 1000 ಹಾಗೂ 400 ರೂಪಾಯಿ ಮೌಲ್ಯದ ವಿಶೇಷ ಪ್ರವೇಶ ಚೀಟಿ ಹಾಗೂ ಲಡ್ಡು ಪ್ರಸಾದ ಮಾರಾಟ ಮಾಡಿ 5.52 ಕೋಟಿ ರೂ ಸಂಗ್ರಹಿಸಿದೆ. ಇಂದು ಅಂದರೆ ಮಂಗಳವಾರದವರೆಗೆ ದೇವಸ್ಥಾನ ತೆರೆದಿರುವುದರಿಂದ ಆದಾಯ 6.50 ಕೋಟಿ ದಾಟುವ ಸಾಧ್ಯತೆ ಇದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಪಟಾಕಿ ಸಿಡಿಸುವಾಗ ಉಸಿರಿನ ಬಗ್ಗೆ ಇರಲಿ ಎಚ್ಚರ! – ದೆಹಲಿಯಂತಾಗುತ್ತಿದೆ ಬೆಂಗಳೂರಿನ ವಾಯುಗುಣಮಟ್ಟ

ಶನಿವಾರ 1.50 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. 28,052 ಜನರು 1,000 ರೂ ಟಿಕೆಟ್‌ಗಳನ್ನು ಖರೀದಿಸಿದರೆ, 71,885 ರೂ.400 ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಆದರೆ ಭಾನುವಾರದಂದು ಸಂಖ್ಯೆ ಕಡಿಮೆಯಾಗಿತ್ತು. ದರ್ಶನಕ್ಕೆ ಮಂಗಳವಾರ ಕೊನೆಯ ದಿನವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಜಿಲ್ಲಾಧಿಕಾರಿ, ದೇವಸ್ಥಾನದ ಆಡಳಿತಾಧಿಕಾರಿ, ಮ್ಯೂರಲ್ ತಹಶೀಲ್ದಾರ್ ಸಮ್ಮುಖದಲ್ಲಿ ಅರ್ಚಕರು ದೇವಸ್ಥಾನದ ಬಾಗಿಲು ಮುಚ್ಚುವ ಮುನ್ನ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಶುಕ್ರವಾರ ದೇವಸ್ಥಾನದ ಆವರಣದಲ್ಲಿ 17 ಮಂದಿ ಭಕ್ತರಿಗೆ ವಿದ್ಯುತ್ ಶಾಕ್ ತಗುಲಿ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ವರ್ಷ ಮೊದಲ ಬಾರಿಗೆ ದೇವಾಲಯದ ಆಡಳಿತ ಸಮಿತಿಯು ದೇವಾಲಯದಲ್ಲಿ ನಿಯೋಜನೆಗೊಂಡ ಅಧಿಕಾರಿಗಳಿಗೆ ಉಪಹಾರ, ಊಟ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ಮಾಡಿತ್ತು.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸಚಿವರಾದ ಆರ್.ಬಿ.ತಿಮ್ಮಾಪುರ್, ಕೆ.ವೆಂಕಟೇಶ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಸಚಿವ ಗೋಪಾಲಯ್ಯ, ಆಧ್ಯಾತ್ಮಿಕ ಮುಖಂಡ ರವಿಶಂಕರ್ ಗುರೂಜಿ ಸೇರಿದಂತೆ ಪ್ರಮುಖರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ.

Shwetha M